ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ಅಮೆರಿಕ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿತ್ತು. ಅಂತಹ ಸಂದರ್ಭದಲ್ಲೂ ಭಾರತದಲ್ಲಿ ಯಾವುದೇ ಆರ್ಥಿಕ ಸಮಸ್ಯೆ ತಲೆದೋರದಂತೆ ನೋಡಿಕೊಂಡಿದ್ದರು.
ಹುಬ್ಬಳ್ಳಿ:
ಡಾಲರ್ ಎದುರು ಭಾರತೀಯ ರುಪಾಯಿ ಮೌಲ್ಯ 90ರ ಗಡಿದಾಟಿ ಸಾರ್ವಕಾಲಿಕ ಕುಸಿತ ಕಂಡಿದೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ವೈಖರಿ ಎತ್ತಿ ತೋರಿಸುತ್ತಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಟೀಕಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿ, ಈ ಹಿಂದೆ ಯುಪಿಎ ಸರ್ಕಾರ ಆಡಳಿತವಿದ್ದಾಗ ಟೀಕೆ ಮಾಡುತ್ತಿದ್ದ ಬಿಜೆಪಿ ನಾಯಕರು ಈಗ ತಮ್ಮದೇ ಸರ್ಕಾರವಿದ್ದಾಗ ರುಪಾಯಿ ಮೌಲ್ಯ ಕುಸಿದಿರುವ ಬಗ್ಗೆ ಯಾವ ಉತ್ತರ ನೀಡುತ್ತಾರೆ?. ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ಅಮೆರಿಕ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿತ್ತು. ಅಂತಹ ಸಂದರ್ಭದಲ್ಲೂ ಭಾರತದಲ್ಲಿ ಯಾವುದೇ ಆರ್ಥಿಕ ಸಮಸ್ಯೆ ತಲೆದೋರದಂತೆ ನೋಡಿಕೊಂಡಿದ್ದರು. ಇಂದು ಅಂತಹ ಯಾವುದೇ ವಾತಾವರಣ ದೇಶದಲ್ಲಿ ಕಾಣುತ್ತಿಲ್ಲ. ಆದರೂ ರುಪಾಯಿ ಮೌಲ್ಯ ಕುಸಿತವಾಗಿದೆ. ಇದಕ್ಕೆ ಬಿಜೆಪಿ ಆಡಳತವೇ ನೇರ ಹೊಣೆ ಎಂದು ದೂರಿದ್ದಾರೆ.
ದೇಶವೂ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕದಂತೆ ಕಾಪಾಡುವುದು ಆಡಳಿತ ಪಕ್ಷದ ಜವಾಬ್ದಾರಿ. ಯಾವುದೇ ಆರ್ಥಿಕ ನೀತಿಗಳಿಲ್ಲದೇ ಆಡಳಿತ ನಡೆಸುವುದರಿಂದ ದೇಶ ಸಮಸ್ಯೆಗೆ ಸಿಲುಕುತ್ತಿದೆ. ಮನಮೋಹನ ಸಿಂಗ್ ಅವರ ಆರ್ಥಿಕ ನೀತಿಗಳು ಇಡೀ ಪ್ರಪಂಚಕ್ಕೆ ಮಾದರಿ ಆಗಿತ್ತು. ಪ್ರಧಾನಿ ನರೇಂದ್ರ ಮೋದಿ ಬರೀ ಭಾಷಣ ಮಾಡುವುದು ಬಿಟ್ಟು ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳಿಸುವ ಬಗ್ಗೆ ಚಿಂತನೆ ಮಾಡಲಿ ಎಂದು ಶಾಸಕ ಪ್ರಸಾದ ಅಬ್ಬಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.