ಸಾರಾಂಶ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಜಯಿಸುವಂತಹ ಹಲವಾರು ಪ್ರತಿಭೆಗಳು ಗ್ರಾಮೀಣ ಭಾಗದಲ್ಲಿದ್ದು, ಅಂತಹವರಿಗೆ ಸೂಕ್ತ ತರಬೇತಿ ನೀಡಿದರೆ ಮುಂದಿನ ದಿನಗಳಲ್ಲಿ ಭಾರತ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಪದಕ ಗೆಲ್ಲುವ ದೇಶವಾಗಿ ಹೊರಹೊಮ್ಮುವುದರಲ್ಲಿ ಸಂದೇಹವೇ ಇಲ್ಲ ಎಂದು ಬಿ ಇ ಒ ಕೃಷ್ಣೇಗೌಡ ತಿಳಿಸಿದರು. ಮುಂಬರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಶಾಲೆ ಹಾಗೂ ದೇಶಕ್ಕೆ ಕೀರ್ತಿ ತರುವಂತಹ ಕಾರ್ಯವನ್ನು ಭವ್ಯರವರು ಮಾಡಬೇಕೆಂದು ಆಶಿಸಿದರು.
ಕನ್ನಡಪ್ರಭ ವಾರ್ತೆ ಆಲೂರು
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಜಯಿಸುವಂತಹ ಹಲವಾರು ಪ್ರತಿಭೆಗಳು ಗ್ರಾಮೀಣ ಭಾಗದಲ್ಲಿದ್ದು, ಅಂತಹವರಿಗೆ ಸೂಕ್ತ ತರಬೇತಿ ನೀಡಿದರೆ ಮುಂದಿನ ದಿನಗಳಲ್ಲಿ ಭಾರತ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಪದಕ ಗೆಲ್ಲುವ ದೇಶವಾಗಿ ಹೊರಹೊಮ್ಮುವುದರಲ್ಲಿ ಸಂದೇಹವೇ ಇಲ್ಲ ಎಂದು ಬಿ ಇ ಒ ಕೃಷ್ಣೇಗೌಡ ತಿಳಿಸಿದರು.ತಾಲೂಕಿನ ಕುಂದೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ, ಕ್ರೀಡಾಪಟುವಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲೆಯಲ್ಲಿ ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ, ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ 400 ಮೀಟರ್ ದೂರ ಜಾವೆಲಿನ್ ಎಸೆದು, ನೂತನ ರಾಜ್ಯ ದಾಖಲೆ ಮಾಡಿ ಚಿನ್ನದ ಪದಕ ಗೆದ್ದ ಶಾಲೆಯ ವಿದ್ಯಾರ್ಥಿನಿ ಕುಮಾರಿ ಭವ್ಯ ಸಿ ಜೆ ಅವರನ್ನು ಅಭಿನಂದಿಸಿ, ಆರ್ಥಿಕ ನೆರವನ್ನು ಸಹ ನೀಡಿ ಮಾತನಾಡಿದ ಅವರು, ಮುಂಬರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಶಾಲೆ ಹಾಗೂ ದೇಶಕ್ಕೆ ಕೀರ್ತಿ ತರುವಂತಹ ಕಾರ್ಯವನ್ನು ಭವ್ಯರವರು ಮಾಡಬೇಕೆಂದು ಆಶಿಸಿದರು.
ದೈಹಿಕ ಪರಿವೀಕ್ಷಕ ಗೋವಿಂದೇಗೌಡ ಮಾತನಾಡಿ, ಭವ್ಯಾರವರ ಸಾಧನೆ ಶ್ಲಾಘನೀಯ, ಆದರೆ ಇದು ಕೇವಲ ಪ್ರಾರಂಭ ಹಂತವಾಗಿದ್ದು ಈಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅಭ್ಯಾಸ ನಡೆಸಿ ರಾಷ್ಟ್ರೀಯ, ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಆಗಬೇಕು. ಈಕೆಯ ತರಬೇತಿದಾರರು ಹಾಗೂ ಮಾರ್ಗದರ್ಶಕರಾದ ದೈಹಿಕ ಶಿಕ್ಷಕ ಚಂದ್ರಪ್ಪ ರವರನ್ನು ಸಹ ಈ ಸಂದರ್ಭದಲ್ಲಿ ಅಭಿನಂದಿಸುವುದಾಗಿ ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ತಿಮ್ಮ ಶೆಟ್ಟಿ, ದಿವಾಕರ, ಮುಖ್ಯ ಶಿಕ್ಷಕಿ ನಳಿನಿ, ದೈಹಿಕ ಶಿಕ್ಷಕ ಚಂದ್ರಪ್ಪ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.