ಬಳ್ಳಾರಿ: ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಮಾವಿನಹಳ್ಳಿ, ಕನ್ನಡ- ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಕುರುಗೋಡು ತಾಲೂಕಿನ ಏಳುಬೆಂಚಿ ಗ್ರಾಮದಲ್ಲಿ ಗ್ರಾಮೀಣ ಸಂಜೆ ಸಾಂಸ್ಕೃತಿಕೋತ್ಸವ ಕಾರ್ಯಕ್ರಮ ಜರುಗಿತು.
ಚಾಲನೆ ನೀಡಿ ಮಾತನಾಡಿದ ಹಿರಿಯ ಸಂಗೀತ ಕಲಾವಿದ ಡಿ.ಎಂ. ಎರ್ರಿಸ್ವಾಮಿ, ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಪರಿಪಾಠ ಇತ್ತೀಚೆಗೆ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಹಮ್ಮಿಕೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಪದ ಕಲೆಗಳಿಗೆ ಹೊಸ ಜೀವ ತುಂಬುತ್ತವೆ. ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಿರುವ ಡೊಳ್ಳು ಕುಣಿತ, ವೀರಗಾಸೆ, ಯಕ್ಷಗಾನ, ಕೋಲಾಟ, ಜನಪದ ಗೀತೆಗಳು, ಸ್ಥಳೀಯ ನೃತ್ಯ ಪ್ರಕಾರಗಳು ಇಂತಹ ವೇದಿಕೆಗಳ ಮೂಲಕ ಮತ್ತೆ ಜನರ ಗಮನ ಸೆಳೆಯುತ್ತಿವೆ. ಹಿರಿಯ ಕಲಾವಿದರಿಗೆ ಗೌರವ ದೊರಕುವುದರ ಜೊತೆಗೆ ಯುವ ಪೀಳಿಗೆಯವರು ತಮ್ಮ ಸಂಸ್ಕೃತಿಯ ಬೇರುಗಳನ್ನು ಅರಿಯಲು ಅವಕಾಶ ಸಿಗುತ್ತಿದೆ ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಬಲಾ ವಾದಕ ಚಾಗೆ ವರಬಸಪ್ಪ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮೀಣ ಸಮುದಾಯದಲ್ಲಿ ಸಹಬಾಳ್ವೆ ಮತ್ತು ಸೌಹಾರ್ದ ಬಲಪಡಿಸುತ್ತವೆ. ವಿವಿಧ ಜಾತಿ, ಧರ್ಮ, ವರ್ಗದ ಜನರು ಒಂದೇ ವೇದಿಕೆಯಲ್ಲಿ ಸೇರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಪರಸ್ಪರ ಹೊಂದಾಣಿಕೆ ಹೆಚ್ಚುತ್ತದೆ. ಗ್ರಾಮದಲ್ಲಿ ಉಂಟಾಗುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರೂ ಒಟ್ಟಾಗಿ ಹಬ್ಬದ ವಾತಾವರಣ ನಿರ್ಮಿಸುವುದು ಇಂತಹ ಕಾರ್ಯಕ್ರಮಗಳ ಪ್ರಮುಖ ವಿಶೇಷತೆಯಾಗಿದೆ ಎಂದು ತಿಳಿಸಿದರು.
ಪುರಾಣಿಕ ಕರುಣಾಮೂರ್ತಿ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಿ.ಎಂ.ಮಂಜುನಾಥ ಅವರಿಂದ ಸುಗಮ ಸಂಗೀತ, ಕೆ.ಸಿ.ಸುಂಕಣ್ಣ ಮತ್ತು ತಂಡದಿಂದ ಸಮೂಹನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮುಖ್ಯಗುರು ಎಸ್.ಎರಿಸ್ವಾಮಿ ಹಾಗೂ ಮುದಿಯಪ್ಪ ಕಾರ್ಯಕ್ರಮ ನಿರ್ವಹಿಸಿದರು.