ಮಹೇಶ ಛಬ್ಬಿ
ಮುಳಗುಂದ: ಪಟ್ಟಣದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ 2008ರಲ್ಲಿ ಅಭಿವೃದ್ಧಿಪಡಿಸಲಾದ ರಸ್ತೆಗಳು ಇದೀಗ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿವೆ. ಗ್ರಾಮೀಣ ಭಾಗದ ಜನರ ಸಂಚಾರಕ್ಕೆ ಜೀವನಾಡಿಯಾಗಿದ್ದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ರಸ್ತೆಗಳು ನಿರ್ವಹಣೆಯ ಕೊರತೆಯಿಂದ ಮೂಲ ಸ್ವರೂಪವನ್ನೇ ಕಳೆದುಕೊಂಡು ಯಮಸ್ವರೂಪಿ ರಸ್ತೆಗಳಾಗಿವೆ.ಕೆಲವು ವರ್ಷಗಳ ಹಿಂದೆ ಮುಳಗುಂದ ಕೇಂದ್ರವಿಟ್ಟುಕೊಂಡು ಹೊಸೂರು, ಕಣವಿ, ನೀಲಗುಂದ, ಕಲ್ಲೂರು, ಶಿರುಂದ ಹಾಗೂ ಸೊರಟೂರು ರಸ್ತೆಗಳನ್ನು ವಿವಿಧ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿತ್ತು. ನಂತರದ ದಿನಗಳಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆ ರಸ್ತೆಗಳ ಮೇಲೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಹಲವೆಡೆ ಡಾಂಬರು ಸಂಪೂರ್ಣ ಕಿತ್ತು ಹೋಗಿದೆ. ಪರಿಣಾಮವಾಗಿ ದ್ವಿಚಕ್ರ ವಾಹನ ಸವಾರರು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.ಮುಳಗುಂದ- ನೀಲಗುಂದ ಮಧ್ಯೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ಅಭಿವೃದ್ಧಿಪಡಿಸಿ ಹಲವು ವರ್ಷವೇ ಆಗಿದ್ದು, ಹಲವು ದಿನಗಳಿಂದ ರಸ್ತೆ ಹಾಳಾಗಿದೆ. ಆದರೆ ಈ ವರೆಗೂ ದುರಸ್ತಿ ಭಾಗ್ಯ ಕಂಡಿಲ್ಲ. ರಸ್ತೆಯುದ್ದಕ್ಕೂ ಡಾಂಬರ್ ಕಿತ್ತು ಗುಂಡಿಗಳು ಬಿದ್ದಿವೆ. ಕೆಲವು ಭಾಗದಲ್ಲಿ ಮೆಟ್ಲಿಂಗ್ ಹಾಳಾಗಿ ಕಲ್ಲುಗಳು ರಸ್ತೆ ತುಂಬ ಹರಡಿವೆ. ಈ ರಸ್ತೆಯ ಮಧ್ಯೆ ಹಳ್ಳದ ಹತ್ತಿರ ಅಪಾಯ ಮಟ್ಟದ ತಿರುವಿನಲ್ಲಿ ಸುರಕ್ಷಾ ಗೋಡೆ ನಿರ್ಮಿಸದೇ ಇರುವುದರಿಂದ ಹಲವು ವಾಹನ, ಬೈಕ್ ಸವಾರರು ಗುಂಡಿಗೆ ಬಿದ್ದು ಅಪಘಾತಗಳು ಸಂಭವಿಸಿವೆ. ಮಳೆ ಸುರಿದರೆ ಗುಂಡಿಗಳು ತುಂಬಿ ಹೊಂಡವಾಗುತ್ತಿವೆ. ಕೆಲವು ಭಾಗದಲ್ಲಿ ಇಕ್ಕಟಾದ ರಸ್ತೆ ಇದ್ದು, ಇನ್ನಷ್ಟು ವಿಸ್ತರಿಸಿ ರಸ್ತೆ ನಿರ್ಮಿಸಬೇಕಿದೆ.ಮುಳಗುಂದ- ಹೊಸೂರು ಹಾಗೂ ಕಣವಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಮೆಟ್ಲಿಂಗ್ ಹಾಕಿದ್ದ ಕಡಿಗಳು ಕಿತ್ತುಹೋಗಿದೆ. ರಸ್ತೆ ಇಕ್ಕೆಲಗಳಲ್ಲಿ ಜಾಲಿ ಮುಳ್ಳಿನ ಗಿಡಗಳು ಬೆಳೆದು ರಸ್ತೆಗೆ ಬಾಗಿದ್ದು, ಸಂಚಾರಕ್ಕೆ ಸಮಸ್ಯೆ ಎದುರಿಸುವಂತಾಗಿದೆ. ರೈತರ ಚಕ್ಕಡಿ ಹೋಗುವಾಗ ಎತ್ತಿನ ಕಣ್ಣಿಗೆ ಮುಳ್ಳು ಕಂಟಿ ಬಡಿದು ಹಾನಿ ಉಂಟಾಗುತ್ತಿದೆ. ಸುಮಾರು ವರ್ಷಗಳಿಂದ ಜಂಗಲ್ ಕಟಿಂಗ್ ಕೈಗೊಂಡಿಲ್ಲ. ರಸ್ತೆ ಉದ್ದಕ್ಕೂ ತಗ್ಗು-ಗುಂಡಿಗಳೆ ತುಂಬಿ ಹೋಗಿದೆ.ಕಲ್ಲೂರು, ಯಳವತ್ತಿ ರಸ್ತೆ ಕಳೆದ ಎರಡ್ಮೂರು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿದ್ದು, ಕೆಲವೇ ದಿನಗಳಲ್ಲಿ ಹಾಳಾಗಿದೆ. ಮಳೆಗಾಲದಲ್ಲಿ ರಸ್ತೆಗಳ ಪರಿಸ್ಥಿತಿ ಮತ್ತಷ್ಟು ಹದಗೆಟ್ಟು ವಾಹನ ಸಂಚಾರ ಅಪಾಯಕಾರಿಯಾಗುತ್ತದೆ. ತುರ್ತು ವೈದ್ಯಕೀಯ ಸೇವೆ, ಕೃಷಿ ಉತ್ಪನ್ನಗಳ ಸಾಗಾಟ ಹಾಗೂ ಸಾರ್ವಜನಿಕ ಸಾರಿಗೆ ಸೇವೆಗಳ ಮೇಲೂ ಇದರ ದುಷ್ಪರಿಣಾಮ ಬೀರುತ್ತಿದೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ರೈತ ಬಸವರಾಜ ಕರಿಗಾರ ಅಸಮಾಧಾನ ವ್ಯಕ್ತಪಡಿಸಿದರು.ಕ್ರಿಯಾಯೋಜನೆ: ಗ್ರಾಮೀಣ ಭಾಗದಲ್ಲಿ ಹಾಳದ ರಸ್ತೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಲು ಕ್ರಿಯಾಯೋಜನೆ ಮಾಡಿದ್ದು, ಅನುಮೋದನೆ ಹಂತದಲ್ಲಿದೆ. ಬಂದ ನಂತರ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರ್ ಗೋಪಾಲ ನಾಯಕ್ ತಿಳಿಸಿದರು.
ತೀವ್ರ ತೊಂದರೆ: ಶಿರುಂದ ರಸ್ತೆಗೆ ಅಡ್ಡವಾಗಿ ಹರಿದಿರುವ ಹಳ್ಳಕ್ಕೆ ಸೇತುವೆ ಇಲ್ಲದ ಕಾರಣ ಮಳೆಯಾದರೆ ಹಳ್ಳ ಕಟ್ಟುತ್ತಿದೆ. ಇದರಿಂದ ಈ ಭಾಗದ ರೈತರು ಹಳ್ಳ ದಾಟಲು ರಾತ್ರಿಯಿಡಿ ಕಾಯುವ ಸ್ಥಿತಿ ಇದೆ. ತೋಟಗಳಲ್ಲಿ ಹೈನುಗಾರಿಕೆ ಮಾಡುವವರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಸೇತುವೆ ರಸ್ತೆ ಅಭಿವೃದ್ದಿ ಜತೆಗೆ ಸೇತುವೆ ನಿರ್ಮಾಣ ಮಾಡಬೇಕು ಎಂದು ರೈತರಾದ ಅಕ್ಷಯ ಬಟ್ಟೂರ್ ತಿಳಿಸಿದರು.