ಗ್ರಾಮೀಣ, ನಗರ ಸ್ಥಳೀಯ ಸಂಸ್ಥೆ ಬಲವರ್ಧನೆಗೆ ಮುಂದಾಗಿ: ಡಾ.ಸಿ.ನಾರಾಯಣ ಸ್ವಾಮಿ

| Published : May 06 2025, 12:18 AM IST

ಗ್ರಾಮೀಣ, ನಗರ ಸ್ಥಳೀಯ ಸಂಸ್ಥೆ ಬಲವರ್ಧನೆಗೆ ಮುಂದಾಗಿ: ಡಾ.ಸಿ.ನಾರಾಯಣ ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಂಡು ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಮುಂದಾಗುವಂತೆ ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ಸಿ. ನಾರಾಯಣ ಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಂಡು ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಮುಂದಾಗುವಂತೆ ರಾಜ್ಯ 5 ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಡಾ.ಸಿ.ನಾರಾಯಣ ಸ್ವಾಮಿ ತಿಳಿಸಿದ್ದಾರೆ. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಾಂಸ್ಥಿಕ ರಚನೆ, ಕಾರ್ಯಚಟುವಟಿಕೆಗಳು, ಆರ್ಥಿಕ ಸ್ಥಿತಿಗತಿ, ಮೂಲ ಸೌಕರ್ಯ ಹಾಗೂ ಸೇವೆ ಒದಗಿಸುವಲ್ಲಿ ತಾಂತ್ರಿಕ ಕೌಶಲ್ಯ ಮತ್ತಿತರ ಅಧ್ಯಯನ ಸಂಬಂಧ ಸೋಮವಾರ ನಡೆದ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಲಭ್ಯವಿರುವ ಸಂಪನ್ಮೂಲವನ್ನು ಕ್ರೋಢೀಕರಿಸಿ ಅಗತ್ಯ ಸೇವೆಗಳನ್ನು ಕಲ್ಪಿಸಬೇಕು ಎಂದು ಸಲಹೆ ಮಾಡಿದರು. ಅಭಿವೃದ್ಧಿಯತ್ತ ಮುನ್ನಡೆಯಬೇಕು:

ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಅಭಿವೃದ್ಧಿಯತ್ತ ಮುನ್ನಡೆಯಬೇಕು. ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಅತೀ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಆದಾಯ ತೆರಿಗೆ ಸಂಗ್ರಹ ಮೂಲ ಸೌಲಭ್ಯ ಸೌಕರ್ಯಕ್ಕೆ ಒತ್ತು ನೀಡುವುದು, ಕುಡಿಯುವ ನೀರು, ವಿದ್ಯುತ್ ಪೂರೈಕೆ, ಜೊತೆಗೆ ಸ್ವ ಉದ್ಯೋಗಕ್ಕೆ ಒತ್ತು ನೀಡುವುದು, ಹಾಗೆಯೇ ಗ್ರಾಮೀಣಾಭಿವೃದ್ಧಿ ಮತ್ತು ನಗರ ಪ್ರದೇಶಗಳಲ್ಲಿ ಅಭಿವೃದ್ಧಿ ಚಟುವಟಿಕೆಗೆ ಪೂರಕವಾಗಿ ಕಾರ್ಯಕ್ರಮ ರೂಪಿಸುವಂತಾಗಬೇಕು ಎಂದು ನಾರಾಯಣ ಸ್ವಾಮಿ ಅವರು ನುಡಿದರು. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಜವಾಬ್ದಾರಿಗಳಿದ್ದು, ಆ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಬೇಕು ಎಂದರು. ರಾಜ್ಯ 5ನೇ ಹಣಕಾಸು ಆಯೋಗದ ಸದಸ್ಯರಾದ ಆರ್.ಎಸ್.ಪೋಂಡೆ, ಮಹಮ್ಮದ್ ಸನಾವುಲ್ಲಾ, ಕೆಂಪೇಗೌಡ, ಕೆ.ಯಾಲಕ್ಕಿಗೌಡ, ಸುಪ್ರಸನ್ನ ಅವರು ಮಾತನಾಡಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಕಾರ್ಯಚಟುವಟಿಕೆ, ಆರ್ಥಿಕ ಸ್ಥಿತಿಗತಿ, ಸಂಪನ್ಮೂಲ ಕ್ರೋಢೀಕರಣ ಹಂಚಿಕೆ ಸಂಬಂಧ ಸಮರ್ಪಕ ಮಾಹಿತಿ ಒದಗಿಸುವಂತಾಗಬೇಕು. ಸ್ಥಳೀಯ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು. ಹಾಗಾದಾಗ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಆದಾಯ ತೆರಿಗೆ ಸಂಗ್ರಹ ಸೇರಿದಂತೆ ಸ್ಥಳೀಯ ಸಂಸ್ಥೆ ವ್ಯಾಪ್ತಿಗಳಲ್ಲಿ ಆದಾಯ ತೆರಿಗೆ ಸಮರ್ಪಕ ನಿರ್ವಹಣೆಗೆ ಖಾಯಂ ಸಿಬ್ಬಂದಿ ನೇಮಿಸುವಂತಾಗಬೇಕು. ಇದರಿಂದ ಜವಾಬ್ದಾರಿ ಹೆಚ್ಚಾಗಲಿದೆ ಎಂದು ಅವರು ಸಲಹೆ ಮಾಡಿದರು. ಶೇ.50ಕ್ಕೂ ಹೆಚ್ಚು ಹುದ್ದೆಗಳು ಖಾಲಿ:

ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಮಾತನಾಡಿ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಶೇ.50ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡುವಂತಾಗಬೇಕು. ಜೊತೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಹಾಗೆಯೇ ಸ್ಥಳೀಯವಾಗಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು. ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಜೀವಲ್ ಕಾನ್ ಮಾತನಾಡಿ ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಮಂಜೂರಾದ 108 ಹುದ್ದೆಗಳಲ್ಲಿ 12 ಭರ್ತಿಯಾಗಿದ್ದು, 97 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು. ತಾ.ಪಂ.ಗೆ ಸಂಬಂಧಿಸಿದ ಮಡಿಕೇರಿ ತಾಲೂಕಿನಲ್ಲಿ ಮಂಜೂರಾದ 23 ಹುದ್ದೆಗಳಲ್ಲಿ ಒಂದು ಹುದ್ದೆ ಭರ್ತಿಯಾಗಿದೆ. ಉಳಿದಂತೆ 22 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದರು. ಸೋಮವಾರಪೇಟೆ ತಾಲೂಕಿನಲ್ಲಿ 23 ಹುದ್ದೆಗಳಲ್ಲಿ 4 ಹುದ್ದೆಗಳು ಭರ್ತಿಯಾಗಿದ್ದು, 19 ಹುದ್ದೆಗಳು ಖಾಲಿ ಉಳಿದಿವೆ. ಕುಶಾಲನಗರ ತಾಲೂಕಿಗೆ ಸಂಬಂಧಿಸಿದಂತೆ ಮಂಜೂರಾದ 12 ಹುದ್ದೆಗಳಲ್ಲಿ 12 ಹುದ್ದೆಗಳು ಖಾಲಿ ಇವೆ. ವಿರಾಜಪೇಟೆ ತಾಲೂಕಿನಲ್ಲಿ ಮಂಜೂರಾದ 26 ಹುದ್ದೆಗಳಲ್ಲಿ 3 ಹುದ್ದೆಗಳು ಭರ್ತಿಯಾಗಿದ್ದು, 23 ಹುದ್ದೆಗಳು ಖಾಲಿ ಇವೆ. ಪೊನ್ನಂಪೇಟೆ ತಾಲೂಕಿನಲ್ಲಿ 12 ಮಂಜೂರಾತಿ ಹುದ್ದೆಗಳಲ್ಲಿ 12 ಹುದ್ದೆಗಳು ಖಾಲಿ ಇವೆ. ಒಟ್ಟಾರೆ 96 ಹುದ್ದೆಗಳಲ್ಲಿ 8 ಹುದ್ದೆಗಳು ಭರ್ತಿಯಾಗಿದ್ದು, 88 ಹುದ್ದೆಗಳು ಖಾಲಿ ಇದೆ ಎಂದು ಮಾಹಿತಿ ನೀಡಿದರು. ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನ, ಜಿಲ್ಲಾ ಪಂಚಾಯಿತಿ ಲಿಂಕ್ ಡಾಕ್ಯುಮೆಂಟ್ ಅನುದಾನ, ತಾಲೂಕು ಪಂಚಾಯಿತಿ ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನ, ತಾಲೂಕು ಪಂಚಾಯಿತಿ ಲಿಂಕ್ ಡಾಕ್ಯುಮೆಂಟ್ ಎಲ್ಲಾ ಇಲಾಖೆಗಳ ಅನುದಾನ ಸಂಬಂಧ ಮಾಹಿತಿ ನೀಡಿದರು. ‘ಆಡಳಿತ ಸುಧಾರಣೆ ಮತ್ತು ಮಾಹಿತಿ ತಂತ್ರಜ್ಞಾನ ಉಪಕ್ರಮಗಳು ಸೇರಿದಂತೆ ಪಂಚತಂತ್ರ 2.0, ಇ-ಸ್ವತ್ತು, 15ನೇ ಹಣಕಾಸು, ನರೇಗಾ, ವಸತಿ, ಸ್ವಚ್ಛ ಭಾರತ ಮಿಷನ್,ಇ-ಕಚೇರಿ, ಐಪಿಜಿಆರ್‌ಎಸ್, ಮತ್ತಿತರ ಒಳಗೊಂಡಿವೆ ಎಂದು ಜೀವಲ್ ಖಾನ್ ಅವರು ತಿಳಿಸಿದರು.’

ಖಾಯಂ ನೌಕರರ ನೇಮಕ:

ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ ಅವರು ಮಾತನಾಡಿ ಖಾಯಂ ನೌಕರರನ್ನು ನೇಮಕ ಮಾಡುವಂತಾಗಬೇಕು. ಡಾಟಾ ಆಪರೇಟರ್‌ಗಳು ಅರ್ಧದಲ್ಲಿಯೇ ಕೆಲಸ ಬಿಡಲಿದ್ದು, ಸ್ಥಳೀಯ ಖಾಯಂ ಸಿಬ್ಬಂದಿಗಳನ್ನು ನಿಯೋಜಿಸುವಂತಾಗಬೇಕು. ವೇತನ ಹೆಚ್ಚಿಸಬೇಕು ಎಂದು ಅವರು ತಿಳಿಸಿದರು. ಗ್ರಾ.ಪಂ. ಜನಪ್ರತಿನಿಧಿಯೊಬ್ಬರು ಮಾತನಾಡಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದಲ್ಲಿ ಗ್ರಾ.ಪಂ. ಮತ್ತು ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ನಗರಸಭೆ ಅಧ್ಯಕ್ಷರಾದ ಕಲಾವತಿ, ಉಪಾಧ್ಯಕ್ಷರಾದ ಮಹೇಶ್ ಜೈನಿ, ವಿವಿಧ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಪೌರಾಯುಕ್ತರು, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಇತರರು ಇದ್ದರು.