ಸಾರಾಂಶ
ಲಕ್ಷ್ಮೇಶ್ವರ: ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಭಾನುವಾರ ಬೆಳಗ್ಗೆ ಸಾವಿರಾರು ರೈತರು ಗೊಬ್ಬರದ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಯೂರಿಯಾ ಗೊಬ್ಬರಕ್ಕಾಗಿ ಪರದಾಡುತ್ತಿರುವ ದೃಶ್ಯ ಕಂಡು ಬಂದಿತು.
ಲಕ್ಷ್ಮೇಶ್ವರ ತಾಲೂಕು ಹಾಗೂ ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಗೋವಿನ ಜೋಳ ಬಿತ್ತನೆ ಮಾಡಿದ ರೈತರಿಂದ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ.
ಭಾನುವಾರ ಬೆಳಗ್ಗೆ ಪಟ್ಟಣದಲ್ಲಿ 3- 4 ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ಬಂದಿದೆ ಎನ್ನುವ ವಿಷಯ ತಿಳಿದ ರೈತರು ಗೊಬ್ಬರಕ್ಕಾಗಿ ಅಂಗಡಿಗಳಿಗೆ ದೌಡಾಯಿಸಿದ್ದಾರೆ. ಬೆಳಗ್ಗೆಯಿಂದಲೇ ರೈತರು ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ಅಂಗಡಿ ತೆರೆಯುತ್ತಿದ್ದಂತೆ ನೂಕುನುಗ್ಗಲು ಉಂಟಾಗಿ ಕೆಲ ಕಾಲ ಗದ್ದಲದ ವಾತಾವರಣ ಏರ್ಪಟ್ಟಿತ್ತು. ಅಂಗಡಿ ತೆರೆಯುವ ಮುನ್ನವೇ ನೂರಾರು ರೈತರು ಏಕಕಾಲಕ್ಕೆ ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು.
ರೈತರು ಪರಸ್ಪರ ವಾಗ್ವಾದಕ್ಕಿಳಿದ ಘಟನೆಗಳು ನಡೆದವು.ಸುದ್ದಿ ತಿಳಿಯುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು. ನಂತರ ಪಟ್ಟಣದ ಎರಡು ಅಂಗಡಿಗಳಲ್ಲಿ ಪೂರೈಕೆಯಾಗಿರುವ ಗೊಬ್ಬರದಲ್ಲಿಯೇ ಇರುವ ಎಲ್ಲ ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಸುವುದು ಅಸಾಧ್ಯವಾದ ಹಿನ್ನೆಲೆಯಲ್ಲಿ ಒಂದು ಅಂಗಡಿಯಲ್ಲಿ ಒಬ್ಬ ರೈತನಿಗೆ ಒಂದು ಚೀಲದಂತೆ ಹಾಗೂ ಇನ್ನೊಂದು ಅಂಗಡಿಯಲ್ಲಿ ಎರಡು ಚೀಲದಂತೆ ಗೊಬ್ಬರ ನೀಡಲಾಯಿತು. ಆದರೆ ರೈತರಿಗೆ ಅವಶ್ಯವಿರುವಷ್ಟು ಗೊಬ್ಬರ ದೊರೆಯಲಿಲ್ಲ.ತಾಲೂಕಿನಲ್ಲಿ ಈ ಬಾರಿ ಮಾಹಿತಿಯ ಪ್ರಕಾರ ೧೬ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ ಬಿತ್ತನೆಯಾಗಿದೆ.
ಪಟ್ಟಣದಲ್ಲಿ ಶನಿವಾರ ಸುಮಾರು 170 ಟನ್ ಯೂರಿಯಾ ಗೊಬ್ಬರ ಪೊರೈಕೆಯಾಗಿದ್ದು, ರೈತರಿಗೆ ಇದು ಸಾಲದಂತಾಗಿದೆ. ಶನಿವಾರ ಸಂಜೆಯಿಂದ ಭಾನುವಾರದೊಳಗೆ ಎಲ್ಲ ಕಡೆಗಳಲ್ಲಿ ಗೊಬ್ಬರ ಖಾಲಿಯಾಗಿತ್ತು. ನೂರಾರು ರೈತರು ಗೊಬ್ಬರ ದೊರೆಯದೆ ಜಿಲ್ಲಾಡಳಿತವನ್ನು ಶಪಿಸುತ್ತಾ ಮನೆಗೆ ತೆರಳಿದರು.''''ಒಂದೊಂದೆ ಚೀಲ ಯೂರಿಯಾ ಗೊಬ್ಬರ ಕೊಡುತ್ತಿದ್ದಾರೆ, ರೊಕ್ಕ ಕೊಡತಿವೆಂದರೂ ಗೊಬ್ಬರ ಇಲ್ಲ, ಉಳ್ಳವರಿಗೆ ಸಾಕಷ್ಟು ಚೀಲ ಗೊಬ್ಬರ ನೀಡುತ್ತಾರೆ. ಆದರೆ ಇಲ್ಲಿ ಪಾಳಿ ಹಚ್ಚಿ ಒಂಟಿ ಕಾಲಲ್ಲಿ ನಿಂತರೂ ಸಿಗುವುದು ಒಂದೇ ಚೀಲ, ಹೀಗಾದರೆ ಹೇಗೆ'''' ಎಂದು ರೈತರು ಆರೋಪಿಸುತ್ತಾರೆ.
ಎರಡು ಮೂರು ದಿನಗಳಿಂದ ಏಕಕಾಲಕ್ಕೆ ಮಳೆಯಾದ ಹಿನ್ನೆಲೆ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ 170 ಟನ್ ಪೊರೈಕೆ ಮಾಡಲಾಗಿದೆ. ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಶೀಘ್ರದಲ್ಲೆ ಪಟ್ಟಣಕ್ಕೆ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು, ರೈತರು ಆತಂಕಕ್ಕೊಳಗಾಗಬಾರದು ಎಂದು ಶಿರಹಟ್ಟಿ ಸಹಾಯಕ ಕೃಷಿ ನಿರ್ದೇಶಕ ರೇವಣಪ್ಪ ಮನಗೂಳಿ ತಿಳಿಸಿದರು.ಗದಗ ಜಿಲ್ಲೆಗೆ ಗೊಬ್ಬರ ಪೂರೈಕೆಯಲ್ಲಿ ಪ್ರತಿಬಾರಿಯು ಮಲತಾಯಿ ಧೋರಣೆ ಎದ್ದು ಕಾಣುತ್ತಿದೆ. ಜಿಲ್ಲೆಗೆ ಅವಶ್ಯವಿರುವಷ್ಟು ಗೊಬ್ಬರ ಪೂರೈಕೆ ಮಾಡುತ್ತಿಲ್ಲ, ಜಿಲ್ಲೆಗೆ ಪೂರೈಕೆಯಾದಷ್ಟು ಗೊಬ್ಬರವನ್ನು ರೈತರಿಗೆ ಗೊಬ್ಬರ ಅಂಗಡಿಯವರು ಮಾರಾಟ ಮಾಡುತ್ತಾರೆ. ಅಲ್ಲದೆ ಈ ಬಾರಿ ಗೋವಿನಜೋಳ ಬಿತ್ತನೆ ಪ್ರದೇಶ ಹೆಚ್ಚಾಗಿರುವುದು ಯೂರಿಯಾ ಬೇಡಿಕೆ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ಗೊಬ್ಬರ ಅಂಗಡಿಯ ಮಾಲೀಕರು.