ಸಾರಾಂಶ
ಕುಷ್ಟಗಿ: ಜಿಲ್ಲೆಯ ರೈತರಿಗೆ ಮೊದಲ ಆದ್ಯತೆ ನೀಡುವ ಮೂಲಕ ಯೂರಿಯಾ ಗೊಬ್ಬರವನ್ನು ಸಮರ್ಪಕವಾಗಿ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ವ್ಯಾಪಾರಸ್ಥರಿಗೆ ಸೂಚನೆ ನೀಡಿದರು.
ಪಟ್ಟಣದ ಕೆಲ ಗೊಬ್ಬರದ ಅಂಗಡಿಗಳಿಗೆ ಭೇಟಿ ನೀಡುವ ಮೂಲಕ ಯೂರಿಯಾ ಗೊಬ್ಬರದ ಪೂರೈಕೆ ಕುರಿತು ಮಾಹಿತಿ ಪಡೆದುಕೊಂಡು ಅಂಗಡಿಕಾರರಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅಂಗಡಿಗಳಲ್ಲಿನ ರಜಿಸ್ಟರ್‌ಗಳನ್ನು ಪರಿಶೀಲಿಸಿ ನಂತರ, ಯೂರಿಯಾ ಗೊಬ್ಬರದ ವಿತರಣೆಯು ಜಿಲ್ಲಾವಾರು ಹಂಚಿಕೆಯಾಗುತ್ತಿದ್ದು, ಕೊಪ್ಪಳ ಜಿಲ್ಲೆಯ ರೈತರಿಗೆ ಮೊದಲ ಆದ್ಯತೆ ನೀಡಬೇಕು. ನಿಗದಿತ ದರದಲ್ಲಿ ಮಾರಾಟ ಮಾಡಬೇಕು. ರೈತರ ದಾಖಲಾತಿಗಳ ನೈಜತೆ ಖಾತ್ರಿಪಡಿಸಿಕೊಂಡು ವಿತರಣಾ ಕ್ರಮಕ್ಕೆ ಮುಂದಾಗಬೇಕು ಗೊಬ್ಬರ ಸ್ಟಾಕ್ ಇದ್ದರೂ ಅಭಾವ ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದರು.
ಅಂಗಡಿಗಳ ಮುಂದೆ ಜಮಾಯಿಸಿದ್ದ ರೈತರಿಗೆ ಕೊಪ್ಪಳ ಜಿಲ್ಲೆಯಲ್ಲಿ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಬರುತ್ತಿದ್ದು, ರೈತರು ಯಾವುದೇ ರೀತಿಯ ಆತಂಕಪಡಬೇಕಿಲ್ಲ. ಯೂರಿಯಾ ರಸಗೊಬ್ಬರ ಬಳಕೆ ರೈತರು ಆದಷ್ಟು ಕಡಿಮೆ ಮಾಡಬೇಕೆಂದು ತಿಳಿಸಿದರು.ಕನ್ನಡಪ್ರಭ ವರದಿ ಸ್ಮರಣೆ: ಕನ್ನಡಪ್ರಭ ದಿನಪತ್ರಿಕೆಯು ಜು.19 ಶನಿವಾರ ಕುಷ್ಟಗಿಯಲ್ಲಿ ಯೂರಿಯಾ ಗೊಬ್ಬರ ಅಭಾವ ಖರೀದಿಗೆ ಮುಗಿಬಿದ್ದ ರೈತ ಎಂಬ ತಲೆಬರಹದಡಿಯಲ್ಲಿ ಪಟ್ಟಣದಲ್ಲಿ ಯೂರಿಯಾ ಗೊಬ್ಬರದ ಅಂಗಡಿಗಳ ಬಳಿ ರೈತರು ಮುಗಿಬಿದ್ದು ನೂಕುನುಗ್ಗಲು, ಗದ್ದಲ ಉಂಟಾಗಿರುವುದರ ಕುರಿತು ಸಮಗ್ರ ವರದಿ ಬಿತ್ತರಿಸಿರುವದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಟಿ. ರುದ್ರೇಶಪ್ಪ, ಕುಷ್ಟಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಕಾತರಕಿ, ಕೃಷಿ ಅಧಿಕಾರಿ ಪ್ರಮೋದ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳೆಲೆಮಠ ಸೇರಿದಂತೆ ಅನೇಕ ವ್ಯಾಪಾರಸ್ಥರು, ರೈತರು ಇದ್ದರು.