ಹನುಮಸಾಗರ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಶುಕ್ರವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ರೈತ ಪರ ಸಂಘಟನೆಗಳ ನೇತೃತ್ವದಲ್ಲಿ ರಸ್ತೆತಡೆ ನಡೆಸಲಾಯಿತು.
ಹನುಮಸಾಗರ: ರೈತರ ಸಂಪೂರ್ಣ ಬೆಳೆ ಸಾಲ ಮನ್ನಾ, ಎಕರೆಗೆ ₹50 ಸಾವಿರ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ವಿವಿಧ ರೈತ ಪರ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ರಸ್ತೆತಡೆ, ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ರೈತ ಪರ ಸಂಘಟನೆಗಳ ಮುಖಂಡರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ, ಸಂಕಷ್ಟದಲ್ಲಿರುವ ರೈತರ ನೆರವಿಗೆ ತಕ್ಷಣ ಧಾವಿಸುವಂತೆ ಒತ್ತಾಯಿಸಿದರು. ಮಳೆ ಅಭಾವದಿಂದಾಗಿ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿದ್ದು, ಬೆಳೆಗಳ ನಿರೀಕ್ಷಿತ ಇಳುವರಿ ಬಾರದಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿಗಾಗಿ ಮಾಡಿರುವ ಸಾಲ ಮರುಪಾವತಿಸಲಾಗದೆ ಅನೇಕ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ರೈತರ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.ಎಕರೆಗೆ ₹50 ಸಾವಿರ ಪರಿಹಾರ ನೀಡಲಿ: ಮಳೆ ಅಭಾವ ಹಾಗೂ ಕೃಷಿ ಚಟುವಟಿಕೆಯಲ್ಲಿನ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ತಕ್ಷಣವೇ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ರೈತರು ಪಡೆದಿರುವ ಎಲ್ಲ ರೀತಿಯ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು. ಬೆಳೆ ವಿಮೆ ಮಾಡಿಸಿರುವ ಎಲ್ಲ ರೈತರಿಗೂ ಯಾವುದೇ ವಿಳಂಬವಿಲ್ಲದೆ ಪೂರ್ಣ ಪ್ರಮಾಣದ ವಿಮಾ ಪರಿಹಾರ ವಿತರಿಸಬೇಕು. ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡದೆ, ಕೃಷಿ ಕ್ಷೇತ್ರವನ್ನು ಉಳಿಸಲು ಸರ್ಕಾರಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
36 ಕೆರೆಗಳಿಗೆ ನೀರು ತುಂಬಿಸಲು ಆಗ್ರಹ: ಕುಷ್ಟಗಿ ತಾಲೂಕಿನ ರೈತರ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಾಲೂಕಿನ 36 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಇದರಿಂದ ಅಂತರ್ಜಲ ಮಟ್ಟ ಸುಧಾರಿಸುವ ಜತೆಗೆ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಗೋಶಾಲೆ ಹಾಗೂ ಮೇವು ಬ್ಯಾಂಕ್‌ಗಳನ್ನು ತೆರೆಯಬೇಕು. ಜಾನುವಾರುಗಳ ಸಂರಕ್ಷಣೆಗೆ ಸರ್ಕಾರ ವಿಶೇಷ ಗಮನಹರಿಸಬೇಕು ಎಂದು ಆಗ್ರಹಿಸಿದರು.ಉದ್ಯೋಗ ಖಾತ್ರಿ ಯೋಜನೆ ವಿಸ್ತರಿಸಲು ಒತ್ತಾಯ: ಗ್ರಾಮೀಣ ಭಾಗದ ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕ ಕುಟುಂಬಗಳಿಗೆ ಉದ್ಯೋಗದ ಭದ್ರತೆ ಒದಗಿಸಬೇಕು. ಪಟ್ಟಣ ಪ್ರದೇಶಗಳಲ್ಲಿಯೂ ವಿಬಿ ಜಿ ರಾಮ್ ಜೀ ಯೋಜನೆ ಆರಂಭಿಸಿ ಉದ್ಯೋಗಾವಕಾಶ ಕಲ್ಪಿಸಬೇಕು. ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೀವನ ದುಸ್ತರವಾಗಿದ್ದು, ಗ್ರಾಮೀಣ ಹಾಗೂ ಕೃಷಿ ಕಾರ್ಮಿಕ ಕುಟುಂಬಗಳು ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ. ಆದ್ದರಿಂದ ಯೋಜನೆಯಡಿ ವರ್ಷಕ್ಕೆ 200 ದಿನಗಳ ಕೆಲಸ ನೀಡುವ ಜತೆಗೆ ಪ್ರತಿದಿನ ₹1,000 ಕೂಲಿ ನಿಗದಿಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕಾಗಿ ಅಗತ್ಯವಿರುವ ಕಡೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಉಪತಹಸೀಲ್ದಾರ್ ವಿಜಯಲಕ್ಷ್ಮಿ ಮುಂಡರಗಿ ಮನವಿ ಸ್ವೀಕರಿಸಿದರು. ಕರ್ನಾಟಕ ರಾಜ್ಯ ರೈತ ಸೇನೆಯ ರಾಜ್ಯಾಧ್ಯಕ್ಷ ನೀಲಪ್ಪ ಕಡಿಯವರ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಶರಣಪ್ಪ ಬಾಚಲಾಪುರ, ಹೋಬಳಿ ಅಧ್ಯಕ್ಷ ಯಮನೂರಪ್ಪ ಮಡಿವಾಳರ, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷೆ ಸಂಗಮ್ಮ ಗುಳನಗೌಡ್ರ, ಜನದರ್ಶನ ವೇದಿಕೆಯ ರಾಜ್ಯಾಧ್ಯಕ್ಷ ದೇವಪ್ಪ ಮೆಣಸಗಿ, ಮುಖಂಡರಾದ ಸೂಚಪ್ಪ ದೇವರಮನಿ, ಶಿವಪುತ್ರಪ್ಪ ಕೋಳೂರ, ಕೂಡ್ಲಪ್ಪ ಇದ್ದರು.