ಕಾರವಾರ: ದೇಶಪಾಂಡೆ ಭ್ರಷ್ಟಾಚಾರದ ಇನ್ನೊಂದು ಮುಖವಿದ್ದಂತೆ. ಕಳೆದ 45 ವರ್ಷಗಳಿಂದ ಹಳಿಯಾಳ ಕ್ಷೇತ್ರಕ್ಕೆ ಅವರು ಶನಿಯಂತೆ ಗಂಟು ಬಿದ್ದಿದ್ದಾರೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ವಾಗ್ದಾಳಿ ನಡೆಸಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ, ಅವರಿಗೆ ಅನುಭವದ ಕೊರತೆಯಿದೆ ಎಂಬ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಅವರ ಹೇಳಿಕೆಗೆ ಮಾಜಿ ಶಾಸಕ ಸುನೀಲ್ ಹೆಗಡೆ ತಿರುಗೇಟು ನೀಡಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಪಾಂಡೆ ಒಂಬತ್ತು ಬಾರಿ ಶಾಸಕರಾಗಿದ್ದರೂ ಜಿಲ್ಲೆಯ ಅಭಿವೃದ್ಧಿ ಶೂನ್ಯವಾಗಿದೆ. ಕಾಗೇರಿ ಅವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೆ ಹೊಟ್ಟೆಕಿಚ್ಚಿನಿಂದ ಮಾತನಾಡುತ್ತಿದ್ದಾರೆ. ಕಾಗೇರಿ ಅವರು ರೈತರಿಗೆ ಬೆಳೆ ವಿಮೆ ಕೊಡಿಸಿದ್ದಾರೆ ಮತ್ತು ನೆಟ್‌ವರ್ಕ್ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ದೇಶಪಾಂಡೆ ಅವರು ಮೊದಲು ತಮ್ಮ ಕ್ಷೇತ್ರದ ಹದಗೆಟ್ಟ ರಸ್ತೆಗಳನ್ನು ಶಿರಸಿ-ಸಿದ್ದಾಪುರದ ರಸ್ತೆಗಳಿಗೆ ಹೋಲಿಸಿ ನೋಡಲಿ ಮತ್ತು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು.
ಅಣಶಿ-ಅನ್ಮೋಡ್ ರಸ್ತೆಗಳ ದುಸ್ಥಿತಿಯೇ ದೇಶಪಾಂಡೆ ಕಾರ್ಯವೈಖರಿಗೆ ಸಾಕ್ಷಿ ಎಂದು ವ್ಯಂಗ್ಯವಾಡಿದ ಅವರು, ದೇಶಪಾಂಡೆ ಸಚಿವರಾಗಿದ್ದಾಗ ರಸ್ತೆ ಅಭಿವೃದ್ಧಿಗೆ ಅಡ್ಡಿಪಡಿಸಿದ್ದೇ ಹೆಚ್ಚು ಎಂದರು.ದೇಶಪಾಂಡೆ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಮಂತ್ರಿಯಾಗಿದ್ದಾಗ ಜಿಲ್ಲೆಗೆ ನೀಡಿದ ಕೊಡುಗೆ ಶೂನ್ಯ. ಒಂದು ವಿಶ್ವವಿದ್ಯಾಲಯ, ಹಾಲಿನ ಡೇರಿ ಅಥವಾ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಅವರಿಂದ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಇನ್ನು ಅಂಬೇವಾಡಿ ರೈಲು ನಿಲ್ದಾಣ ತಮ್ಮ ಸಾಧನೆ ಎನ್ನುವ ದೇಶಪಾಂಡೆ, ವಾಸ್ತವದಲ್ಲಿ ಅಂಬೇವಾಡಿಯಿಂದ ಹಳೆ ದಾಂಡೇಲಿ ರೈಲ್ವೆ ಹಳಿ ಬಳಿಯೇ ಆಶ್ರಯ ಮನೆಗಳನ್ನು ಹಂಚಿ ಭ್ರಷ್ಟಾಚಾರ ಎಸಗಿದ್ದಾರೆ. ಇದು ರೈಲು ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಮಾಧ್ಯಮ ವಕ್ತಾರ ಜಗದೀಶ ನಾಯಕ ಮೊಗಟಾ, ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ನ್ನು ''''''''ದೆವ್ವ'''''''' ಎಂದು ಕರೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕಿಶನ್ ಕಾಂಬ್ಳೆ, ನಾಗೇಶ ಕುರುಡೇಕರ್, ಸುನೀಲ್ ಸೋನಿ ಇದ್ದರು.ಜೆಡಿಎಸ್-ಬಿಜೆಪಿ ಮೈತ್ರಿ: ಹೈಕಮಾಂಡ್ ತೀರ್ಮಾನವೇ ಅಂತಿಮ
ಇನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ, ಜೆಡಿಎಸ್ ತಮ್ಮ ಸಂಘಟನೆಯ ಆಧಾರದ ಮೇಲೆ ರಾಜ್ಯದಲ್ಲಿ ಎರಡು ಅಥವಾ ನಾಲ್ಕು ಸೀಟುಗಳನ್ನು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ತಾವು ಗೆಲ್ಲುವ ವಿಶ್ವಾಸವಿರುವ ಕ್ಷೇತ್ರಗಳನ್ನು ಕೇಳುವುದು ಸಹಜ. ಆದರೆ, ಅಂತಿಮವಾಗಿ ಯಾರು ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂಬುದನ್ನು ದೆಹಲಿ ಮಟ್ಟದಲ್ಲಿರುವ ಮೈತ್ರಿ ಸಮನ್ವಯ ಸಮಿತಿ ನಿರ್ಧರಿಸುತ್ತದೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.ಕಾರವಾರ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದ ಅವರು, ಕಳೆದ ಚುನಾವಣೆಯಲ್ಲಿ ಇಲ್ಲಿ ಜೆಡಿಎಸ್ ಅಭ್ಯರ್ಥಿಗಳೇ ಇರಲಿಲ್ಲ. ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ತೀರಾ ಕನಿಷ್ಠ ಮಟ್ಟದಲ್ಲಿದೆ. ಹೀಗಿರುವಾಗ ಕಾರವಾರದಲ್ಲಿ ಜೆಡಿಎಸ್‌ಗೆ ಸೀಟು ಬಿಟ್ಟುಕೊಡುವುದು ಎಂದರೆ ಗೆಲ್ಲುವ ಅವಕಾಶವನ್ನು ಕೈಯಾರೆ ಕಳೆದುಕೊಂಡಂತೆ ಎಂದು ಅಭಿಪ್ರಾಯಪಟ್ಟರು.
ಮುಂಬರುವ ಜಿಪಂ, ತಾಪಂ ಮತ್ತು ಗ್ರಾಪಂ ಚುನಾವಣೆಗಳಲ್ಲಿಯೂ ವರಿಷ್ಠರ ಆದೇಶದಂತೆ ಮೈತ್ರಿ ಮುಂದುವರಿಯಲಿದೆ. ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ, ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಒಂದೇ ಉದ್ದೇಶದಿಂದ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡುತ್ತೇವೆ ಎಂದು ಹೆಗಡೆ ವಿಶ್ವಾಸ ವ್ಯಕ್ತಪಡಿಸಿದರು.