ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಎಸ್.ಎನ್.ಸಂತಾನರಾಮನ್‌ ಆಯ್ಕೆ

| Published : Sep 05 2025, 01:00 AM IST

ಸಾರಾಂಶ

ಶತಮಾನ ದಾಟಿ 150 ವರ್ಷಕ್ಕೆ ಪಾದಾರ್ಪಣೆಗೈದ, ಕವಿ ಪುತಿನ ವ್ಯಾಸಂಗ ಮಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಮುಖ್ಯಶಿಕ್ಷಕ ಎಸ್.ಎನ್.ಸಂತಾನ ರಾಮನ್‌ಗೆ ಶಿಕ್ಷಣ ಇಲಾಖೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶತಮಾನ ದಾಟಿ 150 ವರ್ಷಕ್ಕೆ ಪಾದಾರ್ಪಣೆಗೈದ, ಕವಿ ಪುತಿನ ವ್ಯಾಸಂಗ ಮಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಮುಖ್ಯಶಿಕ್ಷಕ ಎಸ್.ಎನ್.ಸಂತಾನ ರಾಮನ್‌ಗೆ ಶಿಕ್ಷಣ ಇಲಾಖೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಬೆಂಗಳೂರಿನ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ಸೆ.5 ರಂದು ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಜನ್ಮದಿನದ ಅಂಗವಾಗಿ ನಡೆಯುವ ರಾಜ್ಯ ಮಟ್ಟದ ಶಿಕ್ಷಕ ದಿನಾಚರಣೆಯಲ್ಲಿ ಮಂಡ್ಯ ಜಿಲ್ಲೆಯಿಂದ ಪ್ರಶಸ್ತಿಗೆ ಭಾಜನರಾಗಿರುವ ಸಂತಾನರಾಮನ್‌ಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಶಿಕ್ಷಣ ಇಲಾಖೆಯಲ್ಲಿ 33 ವರ್ಷ ಸೇವಾವಧಿ ಪೂರೈಸಿರುವ ಸಂತಾನರಾಮನ್ ಸೌಲಭ್ಯಗಳಿಂದ ವಂಚಿತವಾಗಿ ಅಳಿವಿನಂಚಿನಲ್ಲಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಬಲವರ್ಧನೆ ಜೊತೆಗೆ ಶಾಲೆಗೆ ಸೇರಿದ ಕೋಟ್ಯಂತರ ರು. ಮೌಲ್ಯದ ಜಮೀನನ್ನು ಶಾಲೆ ವಶಕ್ಕೆ ಪಡೆಯಲು ಶ್ರಮಿಸಿದ್ದರು.

ಸರ್ಕಾರ, ದಾನಿಗಳ ಸಹಕಾರ ಹಾಗೂ ವೈಯುಕ್ತಿಕ ಕೊಡುಗೆ ನೀಡುವ ಮೂಲಕ ಶಾಲೆ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಶತಮಾನದ ಶಾಲೆಗೆ 15 ವರ್ಷದಿಂದ ವಿವಿಧ ಹಳ್ಳಿಗಳಿಂದ ಮಕ್ಕಳು ಶಾಲೆಗೆ ಬರಲು ಪೋಷಕರು ಮಾಡಿಕೊಂಡ ವಾಹನ ವ್ಯವಸ್ಥೆಗೆ ಧನಸಹಾಯ, ಉಚಿತ ನೋಟ್‌ ಪುಸ್ತಕ, ಲೇಖನ ಸಾಮಗ್ರಿ, ಬ್ಯಾಗ್‌, ಉಚಿತ ಶೈಕ್ಷಣಿಕ ಪ್ರವಾಸ, ಶಾಲೆಯಲ್ಲಿ ಮಕ್ಕಳಿಗೆ ಸರ್ಕಾರ ನೀಡುವ ಸೌಲಭ್ಯಗಳ ಸಮರ್ಪಕ ಬಳಕೆಗೆ ಶ್ರಮಿಸುತ್ತಿದ್ದಾರೆ.

ನ್ಯಾಮನಹಳ್ಳಿಯಲ್ಲಿ ಮುಖ್ಯಶಿಕ್ಷಕರಾಗಿದ್ದ ವೇಳೆ ಹೆದ್ದಾರಿ ಬದಿಯಲ್ಲಿ ಅಸುರಕ್ಷಿತ ಸ್ಥಳದಲ್ಲಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಗ್ರಾಮಸ್ಥರ ಹಾಗೂ ಹಾಲು ಉತ್ಪಾದಕರ ಸಂಘದ ಮನವೊಲಿಸಿ ಲಕ್ಷಾಂತ ರು. ಮೌಲ್ಯದ ನಿವೇಶವನ್ನು ಇಲಾಖೆಗೆ ದಾನವಾಗಿ ಪಡೆದು ಇಲಾಖೆ ಸಹಾಯದಿಂದ ಎರಡು ಸುಸಜ್ಜಿತಕೊಠಡಿಗಳು, ಕಾಂಪೌಂಡ್ ನಿರ್ಮಿಸಲು, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಜೊತೆಗೆ ಶಾಲೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಪ್ರಮುಖ ಪಾತ್ರ ವಹಿಸಿದ್ದರು.

ಇವರ ಶಿಕ್ಷಕರ ಸೇವೆ ಗುರುತಿಸಿ ಜಿಲ್ಲಾ ಮಟ್ಟದ ಆಯ್ಕೆಸಮಿತಿ ರಾಜ್ಯ ಮಟ್ಟಕ್ಕೆ ಶಿಫಾರಸ್ಸು ಮಾಡಿತ್ತು. ರಾಜ್ಯ ಮಟ್ಟದ ಆಯ್ಕೆ ಸಮಿತಿ ಪ್ರಸ್ತಾವನೆ ಪುರಸ್ಕರಿಸಿ ಸಂತಾನರಾಮನ್‌ಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.