ಲಿಂ.ಎಸ್.ಆರ್. ಕಾಶಪ್ಪನವರ 22ನೇ ಪುಣ್ಯಸ್ಮರಣೆ ಇಂದು

| Published : Jul 03 2024, 12:16 AM IST

ಸಾರಾಂಶ

ಶ್ರೀ ಎಸ್‌.ಆರ್. ಕಾಶಪ್ಪನವರ ಸ್ಮಾರಕ ಪ್ರತಿಷ್ಠಾನ, ಇಳಕಲ್ಲ ವತಿಯಿಂದ ಮಾಜಿ ಸಚಿವ ದಿ.ಎಸ್‌.ಆರ್. ಕಾಶಪ್ಪನವರ 22ನೇ ಪುಣ್ಯಸ್ಮರಣೆ ಮಂಗಳವಾರ ಬೆಳಗ್ಗೆ 10.30ಕ್ಕೆ ತಾಲೂಕಿನ ಹಾವರಗಿಯ ಎಸ್‌.ಎಂ.ಎಸ್‌. ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಹುನಗುಂದ

ಶ್ರೀ ಎಸ್‌.ಆರ್. ಕಾಶಪ್ಪನವರ ಸ್ಮಾರಕ ಪ್ರತಿಷ್ಠಾನ, ಇಳಕಲ್ಲ ವತಿಯಿಂದ ಮಾಜಿ ಸಚಿವ ದಿ.ಎಸ್‌.ಆರ್. ಕಾಶಪ್ಪನವರ 22ನೇ ಪುಣ್ಯಸ್ಮರಣೆ ಮಂಗಳವಾರ ಬೆಳಗ್ಗೆ 10.30ಕ್ಕೆ ತಾಲೂಕಿನ ಹಾವರಗಿಯ ಎಸ್‌.ಎಂ.ಎಸ್‌. ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ.

ಬೆಳಗ್ಗೆ ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ದಿ.ಎಸ್‌.ಆರ್‌. ಕಾಶಪ್ಪನವರ ಗದ್ದುಗೆಗೆ ಪೂಜೆ ನಡೆಯಲಿದೆ. ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಜಗದ್ಗುರುಗಳು ಆಶೀರ್ವಚನ ನೀಡುವರು. ಶಾಸಕ ವಿಜಯಾನಂದ ಕಾಶಪ್ಪನವರ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿರುವರು.ವರ್ಣರಂಜಿತ ರಾಜಕಾರಣಿ:

ಜಿಲ್ಲೆಯ ಹುನಗುಂದ ತಾಲೂಕಿನ ಕೃಷ್ಣಾ ನದಿಯ ದಡದಲ್ಲಿರುವ ಪುಟ್ಟ ಗ್ರಾಮ ಹಾವರಗಿಯಲ್ಲಿ 1949ರ ಫೆ.26ರಂದು ಜನಿಸಿದ ಲಿಂ.ಎಸ್.ಆರ್. ಕಾಶಪ್ಪನವರ ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿ, ರಾಜ್ಯ ಸರ್ಕಾರದ ಸಂಪುಟ ದರ್ಜೆಯ ಸಚಿವರಾಗಿ ಗಮನ ಸೆಳೆದವರು.

ಹಾವರಗಿಯಂತಹ ಸಣ್ಣ ಹಳ್ಳಿಯಿಂದ ರಾಜಕೀಯ ಆರಂಭಿಸಿ ಮೊದಲ ಬಾರಿಗೆ ತಾಲೂಕು ಅಭಿವೃದ್ಧಿ ಮಂಡಳಿ(ಟಿಡಿಬಿ) ಸದಸ್ಯರಾಗಿ, ನಂತರ ಅಧ್ಯಕ್ಷರಾದರು. 1985ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ಅಲ್ಪಮತಗಳಿಂದ ಸೋಲುಂಡರೂ ಛಲ ಬಿಡದೇ ಪಕ್ಷ ಸಂಘಟಿಸಿ 1989ರಲ್ಲಿ ಭಾರಿ ಮತಗಳ ಅಂತರದಿಂದ ವಿಜಯಶಾಲಿಯಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ನಂತರ ಸತತ ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿ ರಾಜ್ಯ ಸರ್ಕಾರದ ಸಂಪುಟ ದರ್ಜೆ ಸಚಿವರಾಗಿ ಕಾರ್ಯನಿರ್ವಹಿಸಿದರು.

ರೈತಪರ ಕಾಳಜಿ: ಸದಾ ರೈತಪರ ಕಾಳಜಿಯುಳ್ಳ ಅವರು ಎಸ್‌.ಆರ್‌. ಕಾಶಪ್ಪನವರ ಭೀಮಾ ನದಿ ಗೇಟ್ ಕಿತ್ತಿದ್ದು ಇಂದಿಗೂ ರೈತರು ಸ್ಮೃತಿಪಟಲದಲ್ಲಿದೆ. ಇಂತಹ ಕಿಚ್ಚೆದೆಯ ರಾಜಕಾರಣಿ ಕಂಡಿದ್ದು ಅಪರೂಪ ಎಂದು ಇಂದಿಗೂ ಈ ಭಾಗದ ರೈತರು ನೆನಪಿಸಿಕೊಳ್ಳುತ್ತಾರೆ. ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡುತ್ತಿದ್ದ ಅವರು, ಗೆದ್ದ ನಂತರ ಪಕ್ಷಭೇದ ಮರೆತು ಕ್ಷೇತ್ರದ ಜನತೆಯನ್ನು ಪ್ರೀತಿ, ವಿಶ್ವಾಸದಿಂದ ಕಾಣುವ ಸ್ವಭಾವದವರಾಗಿದ್ದರು.

ವಿಶಿಷ್ಟ ಉಡುಪು: ಖಾದಿ ದೋತ್ರ, ನೆಹರು ಶರ್ಟ್, ಉಣ್ಣೆಯ ಟೋಪಿ ಅವರ ಆಕರ್ಷಕ ಉಡುಪು. ಜವಾರಿ ಮಾತು, ಒಂದಿಷ್ಟು ಒರಟುತನ, ಕ್ಷಣದಲ್ಲೇ ಮಗುವಿನಂತೆ ಮೃದುವಾಗುವ ಅವರ ಸ್ವಭಾವ, ತಾವು ಆಡಿದ್ದೇ ನಡೆಯಬೇಕೆಂಬ ಹಠದ ಸ್ವಭಾವ ಹೀಗೆ ವರ್ಣರಂಜಿತ ವ್ಯಕ್ತಿತ್ವದಿಂದ ಗಮನ ಸೆಳೆದಿದ್ದರು.

ತಮ್ಮ 14 ವರ್ಷದ ರಾಜಕೀಯ ಜೀವನದಲ್ಲಿ ತಾಲೂಕಿಗೆ ಕೋಟ್ಯಂತರ ರುಪಾಯಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿದರು. ಮರೋಳ ಏತನೀರಾವರಿ, ಕೂಡಲಸಂಗಮ ಅಭಿವೃದ್ಧಿ, ಜಿಟಿಟಿಸಿ ಕಾಲೇಜು ಸ್ಥಾಪನೆ, ಶಾಲಾ, ಕಾಲೇಜುಗಳ ನಿರ್ಮಾಣ, ಪಶು ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ, ರಸ್ತೆ ಸುಧಾರಣೆ, ಮುಳುಗಡೆ ಗ್ರಾಮಗಳ ಸ್ಥಳಾಂತರ, ಮನೆಗಳ ನಿರ್ಮಾಣ, ಹುನಗುಂದದಲ್ಲಿ ತಾಲೂಕು ಕ್ರೀಡಾಂಗಣ, ಇಳಕಲ್ಲದಲ್ಲಿ ಡೈಟ್ ಆರಂಭ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳ ಮೂಲಕ ಮಾದರಿ ಮತಕ್ಷೇತ್ರವಾಗಿಸುವ ನಿಟ್ಟಿನಲ್ಲಿ ಶ್ರಮಿಸಿದ್ದರು.

ಪಂಚಮಸಾಲಿ ಅಗ್ರಗಣ್ಯ ನಾಯಕ:

ಪಂಚಮಸಾಲಿ ಸಮಾಜ ಸಂಘಟನೆಯಲ್ಲಿ ಎಸ್‌.ಆರ್. ಕಾಶಪ್ಪನವರ ಕೊಡುಗೆ ಅಪಾರ. ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಗಮನಾರ್ಹ ಸೇವೆ ಸಲ್ಲಿಸಿದರು. ರಾಜ್ಯದ ವಿವಿಧ ಭಾಗಗಳಲ್ಲಿ ಸಮಾಜದ ಮುಖಂಡರನ್ನು ಬೆಳೆಸಿ ರಾಜಕಾರಣದಲ್ಲಿ ಮಿಂಚಿ ಮರೆಯಾದ ಮಾಣಿಕ್ಯ. 2003 ಜೂ.27ರಂದು ಆಕಸ್ಮಿಕ ಅಪಘಾತದಲ್ಲಿ ನಿಧನರಾದರು. ಇಂತಹ ಮೇರು ನಾಯಕ ಮರೆಯಾಗಿ ಎರಡು ದಶಕ ಸಂದಿವೆ. ಅಂತಹ ನಾಯಕರು ಮರಳಿ ಹುಟ್ಟಲಿ ಎನ್ನುವುದೇ ಅವರ ಅಭಿಮಾನಿಗಳ ಆಶಯವಾಗಿದೆ.