ಲಾಠಿ ಚಾರ್ಜ್ ಮಾಡಿದರೆ ಎಡೆಮಟ್ಟೆಯಿಂದ ಎದುರೇಟು

| Published : Jul 03 2024, 12:16 AM IST

ಸಾರಾಂಶ

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಮಾಡಲು ಬಿಡುವುದಿಲ್ಲ. ಈ ಸಮಯದಲ್ಲಿ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದರೆ 500 ಟ್ಯಾಕ್ಟರ್ ತೆಂಗಿನ ಎಡೆಮಟ್ಟೆ ತಂದು ಪೊಲೀಸರಿಗೆ ಎದುರೇಟು ನೀಡಬೇಕಾಗುತ್ತದೆ ಎಂದು ತುರುವೇಕೆರೆ ಶಾಸಕ ಎಂ. ಟಿ. ಕೃಷ್ಣಪ್ಪ ತಿಳಿಸಿದರು

ಕನ್ನಡಪ್ರಭ ವಾರ್ತೆ ಗುಬ್ಬಿ

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಮಾಡಲು ಬಿಡುವುದಿಲ್ಲ. ಈ ಸಮಯದಲ್ಲಿ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದರೆ 500 ಟ್ಯಾಕ್ಟರ್ ತೆಂಗಿನ ಎಡೆಮಟ್ಟೆ ತಂದು ಪೊಲೀಸರಿಗೆ ಎದುರೇಟು ನೀಡಬೇಕಾಗುತ್ತದೆ ಎಂದು ತುರುವೇಕೆರೆ ಶಾಸಕ ಎಂ. ಟಿ. ಕೃಷ್ಣಪ್ಪ ತಿಳಿಸಿದರು

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರು, ಮಾಸ್ತಿ ಗೌಡ್ರು, ವೈ. ಕೆ .ರಾಮಯ್ಯ ಇವರ ಬಲಿದಾನ ಹಾಗೂ ಶ್ರಮದಿಂದ ಈ ಭಾಗದ ರೈತರಿಗೆ ನೀರು ಹರಿಸಲು ಸಹಕರಿಸಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕೆಲಸ ಮಾಡಲು ಬಿಡುವುದಿಲ್ಲ. ರೈತರು ಹಾಗೂ ಸಾರ್ವಜನಿಕರು ಜೊತೆಗೂಡಿ ಜೆಸಿಬಿ ಮುಖಾಂತರ ಕಾಮಗಾರಿ ಮುಚ್ಚುವುದಾಗಿ ತಿಳಿಸಿದರು.

ಕಾಂಗ್ರೆಸ್ ಸರ್ಕಾರದಿಂದ ನನಗೇನು ಆಗಬೇಕಾಗಿಲ್ಲ. ನನ್ನ ಹೋರಾಟ ರೈತರ ಪರ ಇರುತ್ತದೆ. ಈ ಕಾಂಗ್ರೆಸ್ ಸರ್ಕಾರ ರೈತರ ಭೂಮಿಯನ್ನು ಕಬಳಿಸಿ ಕೆನಾಲ್ ಕೆಲಸ ಮಾಡುತ್ತಿದ್ದಾರೆ. ಕಾನೂನು ಗಾಳಿಗೆ ತೂರಿ ರೈತರ ಹೊಟ್ಟೆಗೆ ಹೊಡೆಯುತ್ತಿದ್ದಾರೆ ಎಂದರು.

ತಾಂತ್ರಿಕಾ ಸಮಿತಿ ತೀರ್ಮಾನವಾಗದ ಹೊರತು ಯಾವುದೇ ರೀತಿಯ ಕೆಲಸವನ್ನು ಮಾಡಲು ಬಿಡುವುದಿಲ್ಲ. ಉಪಮುಖ್ಯಮಂತ್ರಿಗಳ ಸಭೆಯಲ್ಲಿ ಏನು ತೀರ್ಮಾನ ಆಗಿದೆಯೋ ಅದರಂತೆ ಸರ್ಕಾರ ನಡೆದುಕೊಂಡರೆ ಬಹಳ ಉತ್ತಮ. ಇಲ್ಲದೆ ಹೋದರೆ ರೈತರು ಎಡಮಟ್ಟೆ ತೆಗೆದುಕೊಂಡು ನಿಲ್ಲುವುದಂತು ಸತ್ಯ ಎಂದು ಸರ್ಕಾರ, ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.