ತೋಳೂರು ಶೆಟ್ಟಳ್ಳಿ ಗ್ರಾಮದಲ್ಲಿ ಸಬ್ಬಮ್ಮ ದೇವರ ಸುಗ್ಗಿ ಉತ್ಸವ ಸಂಭ್ರಮ

| Published : Apr 27 2024, 01:15 AM IST

ತೋಳೂರು ಶೆಟ್ಟಳ್ಳಿ ಗ್ರಾಮದಲ್ಲಿ ಸಬ್ಬಮ್ಮ ದೇವರ ಸುಗ್ಗಿ ಉತ್ಸವ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ತೋಳೂರು ಶೆಟ್ಟಳ್ಳಿ ಗ್ರಾಮದಲ್ಲಿ ಸಬ್ಬಮ್ಮ ದೇವರ ಸುಗ್ಗಿ ಉತ್ಸವ ಶುಕ್ರವಾರ ಶ್ರದ್ಧಾಭಕ್ತಿ ಹಾಗೂ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಪುಷ್ಪಗಿರಿ ಬೆಟ್ಟದಲ್ಲಿ ಮಳೆ ಕರೆಯುವ ಮೂಲಕ ಹಾಗೂ ಬೀರೇದೇವರ ಹಬ್ಬ ಆಚರಣೆಯೊಂದಿಗೆ ಸುಗ್ಗಿ ಪ್ರಾರಂಭವಾಯಿತು ಭಾನುವಾರ ಹೆದ್ದೇವರ ಬನಕ್ಕೆ ಹಾಲೆರೆಯುವ ಮೂಲಕ ತೆರೆ ಬೀಳಲಿದೆ.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಲ್ಲಿಗೆ ಸಮೀಪದ ತೋಳೂರು ಶೆಟ್ಟಳ್ಳಿ ಗ್ರಾಮದಲ್ಲಿ ಸಬ್ಬಮ್ಮ ದೇವರ ಸುಗ್ಗಿ ಉತ್ಸವ ಶುಕ್ರವಾರ ಶ್ರದ್ಧಾಭಕ್ತಿ ಹಾಗೂ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಪುಷ್ಪಗಿರಿ ಬೆಟ್ಟದಲ್ಲಿ ಮಳೆ ಕರೆಯುವ ಮೂಲಕ ಹಾಗೂ ಬೀರೇದೇವರ ಹಬ್ಬ ಆಚರಣೆಯೊಂದಿಗೆ ಸುಗ್ಗಿ ಪ್ರಾರಂಭವಾಯಿತು. ಗುಮ್ಮನ ಮರಿ ಪೂಜೆ, ಗ್ರಾಮದಲ್ಲಿ ಸಾಮೂಹಿಕ ಭೋಜನ ನಡೆಯಿತು. ಊರೊಡೆಯನ ಪೂಜೆ, ಬೆಂಕಿಕೊಂಡ ಹಾಯುವುದು, ಊರು ಸುಗ್ಗಿ, ದೇವರ ಗಂಗಾಸ್ನಾನ ಸೇರಿದಂತೆ ಇನ್ನಿತರ ಪೂಜಾ ಕಾರ್ಯಗಳು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು.

ಶ್ರೀ ಸಬ್ಬಮ್ಮ ದೇವರ ಉತ್ಸವ ಮೂರ್ತಿಯನ್ನು ಸುಗ್ಗಿಕಟ್ಟೆಯಲ್ಲಿ ಇರಿಸಿ ಪೂಜಾ ಕಾರ್ಯವನ್ನು ಅರ್ಚಕರು ನಡೆಸಿದರು. ನಂತರ ಉತ್ಸವ ಮೂರ್ತಿಯನ್ನು ಸುಗ್ಗಿಕಟ್ಟೆಯ ಸುತ್ತ ಪ್ರದಕ್ಷಿಣೆ ಹಾಕಿದರು. ಈ ಸಂದರ್ಭ ಸ್ಥಳೀಯರೊಂದಿಗೆ, ಸುತ್ತಲಿನ ಗ್ರಾಮಸ್ಥರು ಪ್ರದಕ್ಷಿಣೆಯಲ್ಲಿ ಪಾಲ್ಗೊಂಡು, ಹರಕೆಯ ತೆಂಗಿನ ಕಾಯಿಯನ್ನು ಕಲ್ಲಿಗೆ ಹೊಡೆದರು. ಸುಗ್ಗಿ ತಂಡದವರು ಹಾಗೂ ಸ್ಥಳೀಯರು ಸುಗ್ಗಿ ಕುಣಿತದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಭಾನುವಾರ ಹೆದ್ದೇವರ ಬನಕ್ಕೆ ಹಾಲೆರೆಯುವ ಮೂಲಕ ಈ ಬಾರಿಯ ಸುಗ್ಗಿ ಉತ್ಸವಕ್ಕೆ ತೆರೆ ಬೀಳಲಿದೆ.

ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಡಿ.ಎನ್. ರಾಜ್‍ಗೋಪಾಲ್, ಕಾರ್ಯದರ್ಶಿ ಎಚ್.ಜೆ. ಮಹೇಶ್, ಖಜಾಂಚಿ ಮನೋಹರ ಹಾಗೂ ಸುಗ್ಗಿ ಆಚರಣ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.