ಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದ ಹನುಮಾನ ನಗರದಲ್ಲಿ ನಡೆದ ಸಚಿನ್ ಮೆಮೋರಿಯಲ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಂದೀಪ್ ಶೇಟ್ ಮಾಲಿಕತ್ವದ ಗೋಲ್ಡನ್ ಸ್ಟಾರ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಐಪಿಎಲ್ ಮಾದರಿಯಲ್ಲಿ ನಡೆದ ಈ ಪಂದ್ಯಾವಳಿಯ ರೋಮಾಂಚಕಾರಿ ಅಂತಿಮ ಪಂದ್ಯದಲ್ಲಿ ಗುರು ನಾಯ್ಕ ಮಾಲೀಕತ್ವದ ಕಿಟ್ಟ ಇಲೆವೆಲ್ ತಂಡ ರನ್ನರ್ಸ್‌ ಅಪ್ ಆಯಿತು.

ಅಮೋಘ ಬ್ಯಾಟಿಂಗ್ ನೆರವಿನಿಂದ ತಂಡದ ಗೆಲುವಿಗೆ ಕಾರಣರಾದ ಅಭಿಷೇಕ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ನೇತಾಜಿ ಸ್ಪೋರ್ಟ್ಸ್‌ ಕ್ಲಬ್ಬಿನ ಹಿರಿಯ ಸದಸ್ಯರಾಗಿದ್ದ ದಿ. ಸಚಿನ್ ಮಹಾಲೆ ಸ್ಮರಣಾರ್ಥ ನಡೆದಿದ್ದ ಎರಡು ದಿನಗಳ ಈ ಪಂದ್ಯದಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು.

ಸಮಾರೋಪ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ವಿವೇಕ ಮಹಾಲೆ ಮಾತನಾಡಿ, ಮಾದರಿ ಪಂದ್ಯಾವಳಿ ಸಂಘಟಿಸುವ ಮೂಲಕ ಸಚಿನ್ ಮಹಾಲೆಯವರಿಗೆ ನಿಜವಾದ ಶ್ರದ್ಧಾಂಜಲಿ ಅರ್ಪಿಸಲಾಗಿದೆ ಎಂದರು.


ಅತಿಥಿಗಳಾದ ಮಡಿವಾಳ ಸಮಾಜದ ಮುಖಂಡ ರಘುರಾಮ ಮಡಿವಾಳ ಮತ್ತು ನಾಮಧಾರಿ ಸಮಾಜದ ಮುಖಂಡ ಕೃಷ್ಣ ನಾಯ್ಕ ಮಾತನಾಡಿದರು. ನೇತಾಜಿ ಸ್ಪೋರ್ಟ್ಸ್‌ ಕ್ಲಬ್ ಅಧ್ಯಕ್ಷ ಅಮಿತ್ ಶಿವಾನಂದ ಮಹಾಲೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಮಹಾಲೆ ಸಮಾಜದ ಅಧ್ಯಕ್ಷ ರಾಜೇಶ ಜಿ. ಮಹಾಲೆ, ಹನುಮಾನ ನಗರ ಶಾಲೆಯ ಅಧ್ಯಕ್ಷ ಈಶ್ವರ ಡಿ. ನಾಯ್ಕ, ದೈವಜ್ಞ ಸಮಾಜದ ಮುಖಂಡ ಸದಾನಂದ ರಾಯ್ಕರ ವೇದಿಕೆಯಲ್ಲಿದ್ದರು. ಚಾಂಪಿಯನ್ ಗೋಲ್ಡನ್ ಸ್ಟಾರ್ ತಂಡಕ್ಕೆ ₹22 ಸಾವಿರ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ಪಡೆದರೆ, ರನ್ನರ್ ಅಪ್ ಕಿಟ್ಟ ಬಾಯ್ಸ್ ತಂಡಕ್ಕೆ ₹11 ಸಾವಿರ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿಯನ್ನು ಅತಿಥಿಗಳು ವಿತರಿಸಿದರು. ಪಂದ್ಯಾವಳಿ ಉದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದ ಕಿಟ್ಟ ಬಾಯ್ಸ್ ತಂಡದ ಸಚಿನ್ ನಾಯ್ಕ ಸರಣಿ ಶ್ರೇಷ್ಠ ಪ್ರಶಸ್ತಿ ಮತ್ತು ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ್ದಕ್ಕೆ ಆರೆಂಜ್ ಕ್ಯಾಪ್ ಪಡೆದರು.

ಅತಿ ಹೆಚ್ಚು ವಿಕೆಟ್ ಪಡೆದ ಕಿಟ್ಟ ಬಾಯ್ಸ್ ತಂಡದ ಕಿಟ್ಟ ಪರ್ಪಲ್ ಕ್ಯಾಪ್ ಪಡೆದರು.