ಸಾರಾಂಶ
ಹಿಂದಿನ ಸರ್ಕಾರಗಳ ಕೆಟ್ಟ ನಿರ್ಧಾರ ಹಾಗೂ ಸ್ಪಷ್ಟ ನಿರ್ಧಾರಗಳಿಲ್ಲದೇ ಯುದ್ಧಗಳಲ್ಲಿ ನಾವು ಹಿನ್ನಡೆ ಕಂಡಿದ್ದೇವೆ. ಆದರೆ, ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ಯೋಧರಿಗೆ ಸಂಪೂರ್ಣ ಸ್ವಾತಂತ್ರ ಕೊಟ್ಟಿದ್ದರಿಂದ ಶತ್ರು ದೇಶಗಳು ನಮ್ಮನ್ನು ಕಂಡರೇ ನಡುಗುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿ:
ಸೈನಿಕರ ತ್ಯಾಗ, ಬಲಿದಾನ ಎಂದಿಗೂ ಮರೆಯುವುದಿಲ್ಲ. ಸೈನಿಕರ ಬಲಿದಾನಕ್ಕೆ ಬೆಲೆ ಇದೆ ಎಂದು ಕೇಂದ್ರ ಸರ್ಕಾರ ಮುನ್ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಇಲ್ಲಿನ ದೇಶಪಾಂಡೆ ನಗರದ ಗುಜರಾತ ಭವನದಲ್ಲಿ ಭಾನುವಾರ ಮಜೇಥಿಯಾ ಫೌಂಡೇಶನ್‌ನಿಂದ 31 ವೀರ ಯೋಧರ ಕುಟುಂಬಗಳಿಗೆ ಹಮ್ಮಿಕೊಳ್ಳಲಾಗಿದ್ದ "ವೀರ ನಮನ " ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿಂದಿನ ಸರ್ಕಾರಗಳ ಕೆಟ್ಟ ನಿರ್ಧಾರ ಹಾಗೂ ಸ್ಪಷ್ಟ ನಿರ್ಧಾರಗಳಿಲ್ಲದೇ ಯುದ್ಧಗಳಲ್ಲಿ ನಾವು ಹಿನ್ನಡೆ ಕಂಡಿದ್ದೇವೆ ಎಂದಿರುವ ಜೋಶಿ, ಆದರೆ, ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ಯೋಧರಿಗೆ ಸಂಪೂರ್ಣ ಸ್ವಾತಂತ್ರ ಕೊಟ್ಟಿದ್ದರಿಂದ ಶತ್ರು ದೇಶಗಳು ನಮ್ಮನ್ನು ಕಂಡರೇ ನಡುಗುತ್ತಿವೆ ಎಂದರು.ಈ ಹಿಂದಿನ ಸರ್ಕಾರದ ತಪ್ಪು ನಿರ್ಧಾರ ಹಾಗೂ ತ್ವರಿತ ನಿರ್ಧಾರ ತೆಗೆದುಕೊಳ್ಳಲು ವಿಫಲವಾಗಿರುವುದರಿಂದ ಯುದ್ಧಗಳಲ್ಲಿ ನಾವು ಸೋಲು ಕಂಡಿದ್ದೇವೆ. ಇದರಲ್ಲಿ ಸೈನಿಕರ ಯಾವುದೇ ತಪ್ಪುಗಳು ಇರಲಿಲ್ಲ ಎಂದು ಹೇಳಿದರು.
ನಿವೃತ್ತ ಏರ್ ಕಮಾಂಡರ್ ಸಿ.ಸಿ. ಹವಾಲ್ದಾರ್ ಮಾತನಾಡಿ, ಇಂದು ಭಾರತದ ಸೈನಿಕರು ಚೀನಾವನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗಿದ್ದಾರೆ. ಅಂದಿನ ಸ್ಥಿತಿಗೂ, ಇಂದಿಗ ಸ್ಥಿತಿಗೂ ತುಂಬಾ ಬದಲಾವಣೆಯಾಗಿದೆ. 1962 ಯುದ್ಧದ ಸೋಲು ಸೈನಿಕರ ಸೋಲಲ್ಲ, ಅದು ರಾಜನೀತಿಯ ಸೋಲು ಎಂದರು.ನಿವೃತ್ತ ಕಾರ್ಗಿಲ್ ವೀರ ಯೋಧ ಕ್ಯಾಫ್ಟ್‌ನ್ ನವೀನ ನಾಗಪ್ಪ ಮಾತನಾಡಿ, ಸೈನಿಕನ ಕುಟುಂಬದವರನ್ನು ಗೌರವಿಸದೇ ಮರೆಯುತ್ತೇವೆ. ಆದರೆ, ಮಜೇಥಿಯಾ ಫೌಂಡೇಶನ್ ಅದನ್ನು ಮಾಡುವ ಮೂಲಕ ಸೈನಿಕರ ಕುಟುಂಬದವರೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದೆ ಎಂದು ಹೇಳಿದರು.
ಮಜೇಥಿಯಾ ಫೌಂಡೇಶನ್ ಸಂಸ್ಥಾಪಕ ಜಿತೇಂದ್ರ ಮಜೇಥಿಯಾ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ 31 ವೀರ ಯೋಧರ ಕುಟುಂಬದವರಿಗೆ ಸನ್ಮಾನಿಸಲಾಯಿತು. ನಂತರ ಮಜೇಥಿಯಾ ದಂಪತಿಗಳಿಗೆ ಸೈನಿಕರ ಕುಟುಂಬದಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮಕ್ಕೂ ಮೊದಲು ಅಶೋಕ ನಗರದ ವೀರಾಂಜನೇಯ ದೇವಸ್ಥಾನದ ಗುಜರಾತ್ ಭವನದ ವರೆಗೂ 31 ವೀರ ಯೋಧರ ಕುಟುಂಸ್ಥರನ್ನು ಅದ್ಧೂರಿ ಮೆರವಣಿಗೆ ಮೂಲಕ ಕರೆತರಲಾಯಿತು.
ಈ ವೇಳೆ ರಮಿಲಾ ಮಜೇಥಿಯಾ, ಎಚ್.ಆರ್. ಪ್ರಹ್ಲಾದರಾವ್, ಸುನೀಲಕುಮಾರ ಕುಕನೂರ, ಅಮೃತಪಾಲ್ ಪಟೇಲ್, ಅಮರೇಶ ಹಿಪ್ಪರಗಿ ಸೇರಿದಂತೆ ಹಲವರಿರಿದ್ದರು. ಡಾ. ರಮೇಶ ಬಾಬು ಸ್ವಾಗತಿಸಿದರು. ಡಾ. ವಿ.ಬಿ. ನಿಟಾಲಿ ಪರಿಚಯಿಸಿದರು.