ತ್ಯಾಗರ್ತಿ: ಒಂದು ವರ್ಷದಿಂದ ನೆಡೆಯುತ್ತಿದೆ 1ಕಿ.ಮೀ ಮಾದರಿ ರಸ್ತೆ ಕಾಮಗಾರಿ

| Published : May 16 2025, 01:56 AM IST

ತ್ಯಾಗರ್ತಿ: ಒಂದು ವರ್ಷದಿಂದ ನೆಡೆಯುತ್ತಿದೆ 1ಕಿ.ಮೀ ಮಾದರಿ ರಸ್ತೆ ಕಾಮಗಾರಿ
Share this Article
  • FB
  • TW
  • Linkdin
  • Email

ಸಾರಾಂಶ

ತ್ಯಾಗರ್ತಿ: ಸಾಗರ ತಾಲೂಕಿನ ತ್ಯಾಗರ್ತಿಯ ಮುಖ್ಯ ರಸ್ತೆಗೆ 2022ರಲ್ಲಿ 3 ಕೋಟಿ ರು. ಅನುಮೋದನೆ ಪಡೆದು ಜನವರಿ 2023ರಂದು ಟೆಂಡರ್ ಪ್ರಕಟಣೆಗೊಂಡು ಮೇ 2024ರಂದು ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇದುವರೆಗೂ ಪ್ರತಿನಿತ್ಯ ಕಾಮಗಾರಿ ನೆಡೆಯುತ್ತಿದೆ ಎಂದು ಧೂಳೆಬ್ಬಿಸುತ್ತಿದ್ದಾರೆ.

ತ್ಯಾಗರ್ತಿ: ಸಾಗರ ತಾಲೂಕಿನ ತ್ಯಾಗರ್ತಿಯ ಮುಖ್ಯ ರಸ್ತೆಗೆ 2022ರಲ್ಲಿ 3 ಕೋಟಿ ರು. ಅನುಮೋದನೆ ಪಡೆದು ಜನವರಿ 2023ರಂದು ಟೆಂಡರ್ ಪ್ರಕಟಣೆಗೊಂಡು ಮೇ 2024ರಂದು ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇದುವರೆಗೂ ಪ್ರತಿನಿತ್ಯ ಕಾಮಗಾರಿ ನೆಡೆಯುತ್ತಿದೆ ಎಂದು ಧೂಳೆಬ್ಬಿಸುತ್ತಿದ್ದಾರೆ.

ತ್ಯಾಗರ್ತಿ ಗ್ರಾಮದ 1 ಕಿ.ಮೀ ಮುಖ್ಯ ರಸ್ತೆಯನ್ನು ದ್ವಿಪದ ರಸ್ತೆಯಾಗಿಸಲು 3 ಕೋಟಿ ರು. ಮಂಜೂರಾಗಿದ್ದು, ಕಾಮಗಾರಿ ನೆಡೆಸುವಲ್ಲಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳ ನಿರ್ಲಕ್ಷವೋ ಅಥವಾ ಗುತ್ತಿಗೆದಾರರ ನಿರಾಸಕ್ತಿಯಿಂದಲೋ ತಿಂಗಳಿಗೊಂದು ನೆಪವೊಡ್ಡಿ ವರ್ಷಗಳೇ ಕಳೆದರೂ ಕಾಮಗಾರಿಯು ಮುಕ್ತಾಯ ಹಂತ ತಲುಪುವಲ್ಲಿ ವಿಫಲವಾಗಿದೆ.

ಕಾಮಗಾರಿಯು ಉದ್ಘಾಟನೆಗೊಂಡು ಪ್ರಾರಂಭಗೊಳ್ಳುವಾಗ ವಿದ್ಯುತ್ ಕಂಬ ಅಡಚಣೆ ನೀಡುತ್ತಿದೆಯೆಂದು ನೆಪವೊಡ್ಡಿ ಕೆಲವು ತಿಂಗಳು ಕಳೆದು ನಂತರ ಮಳೆಗಾಲದಲ್ಲಿ ರಸ್ತೆ ಕಾಮಗಾರಿ ಮಾಡಲು ಸಾಧ್ಯವಿಲ್ಲವೆಂದು ಕಾಮಗಾರಿ ಮುಂದೂಡಿದರು. ನಂತರ ಅಕ್ಟೋಬರ್ 2024ರಂದು ಕಾಮಗಾರಿ ಪ್ರಾರಂಭಿಸಿ ಮೂಲ ರಸ್ತೆಯ ಅಕ್ಕಪಕ್ಕ ಅಗಲೀಕರಣಗೊಳಿಸಲು ಜೆಸಿಬಿ ಮುಖಾಂತರ ಕೆಲಸ ಪ್ರಾರಂಭಿಸಿ 1 ಕಿ.ಮೀ. ರಸ್ತೆಯನ್ನು 3 ತಿಂಗಳಲ್ಲಿ ಸಿಮೆಂಟ್‍ಮಿಶ್ರಿತ ಜೆಲ್ಲಿಕಲ್ಲುಗಳಿಂದ ಅಗಲೀಕರಣಗೊಳಿಸಿದರು. ನಂತರ ತ್ಯಾಗರ್ತಿ ಜಾತ್ರೆಯ ಅಂಗವಾಗಿ ಕಾಮಗಾರಿ ನಿಲ್ಲಿಸಲಾಯಿತು. ಫೆಬ್ರವರಿ 2025ರಲ್ಲಿ ರಸ್ತೆಗೆ ಹೊಂದಿಕೊಂಡಿರುವ ಮೋರಿ ಕಾಮಗಾರಿಗಳನ್ನು ಪ್ರಾರಂಭಿಸಿ ತಿಂಗಳಿಗೊಂದರಂತೆ ಎರಡು ಮೋರಿ ಕಾಮಗಾರಿಗಳನ್ನು ಪೂರೈಸಿದ್ದಾರೆ. ರಸ್ತೆಯ ಎರಡೂ ಬದಿಯ ಚರಂಡಿ ಕಾಮಗಾರಿಯನ್ನು ನೆಡೆಸುತ್ತಿದ್ದು, ತಿಂಗಳುಗಳೇ ಕಳೆಯುತ್ತಿದೆ.

2025 ಮೇ ಕಳೆಯುತ್ತಾ ಬಂದರೂ ರಸ್ತೆ ಡಾಂಬರ್ ಕಾಣುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ಬಗ್ಗೆ ಸ್ಥಳೀಯರು ಹಾಗೂ ವರ್ತಕರು ಇಂತಹ ಮಾದರಿ ರಸ್ತೆಗಳನ್ನು ನಿರ್ಮಿಸಲು ಸರ್ಕಾರಕ್ಕೆ ಎಷ್ಟು ವರ್ಷಗಳು ಬೇಕಾಗಬಹುದು ಎಂದು ಪ್ರಶ್ನಿಸುತ್ತಿದ್ದಾರೆ.

ಗುತ್ತಿಗೆದಾರರು 2 ತಿಂಗಳಿಗೊಮ್ಮೆ ಜನ ಕಳುಹಿಸಿ ರಸ್ತೆಯ ಧೂಳು ಗುಡಿಸಿ ನಾಳೆಯಿಂದ ಡಾಂಬರೀಕರಣ ಕೆಲಸ ಪ್ರಾರಂಭಿಸುವುದಾಗಿ ಹೇಳುತ್ತಾರೆಯೇ ಹೊರತು ನಾಳೆಯೆಂಬುದು ಇಂದಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

- ಇಸಾಕ್ ತ್ಯಾಗರ್ತಿ, ಗ್ರಾಪಂ ಸದಸ್ಯರು

ಗುತ್ತಿಗೆದಾರರಿಗೆ ಹಲವು ಬಾರಿ ಸೂಚನೆ ನೀಡಿದ್ದರೂ ಕಾಮಗಾರಿ ವಿಳಂಬವಾಗುತ್ತಿದೆ. ಡಾಂಬರೀಕರಣ ಮಾತ್ರಾ ಬಾಕಿಯಿದ್ದು ಇನ್ನು ಕೆಲವು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.

- ಅನಿಲ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಿಡಬ್ಲೂಡಿ ಸಾಗರ