ಕನ್ನಡ ನಾಡಿನಲ್ಲಿ ಕನ್ನಡ ಶಾಲೆಗಳೇ ಬಂದ್ ದುಃಖದ ಸಂಗತಿ: ಶಾಸಕ ಜ್ಞಾನೇಂದ್ರ
KannadaprabhaNewsNetwork | Published : Nov 02 2023, 01:00 AM IST
ಕನ್ನಡ ನಾಡಿನಲ್ಲಿ ಕನ್ನಡ ಶಾಲೆಗಳೇ ಬಂದ್ ದುಃಖದ ಸಂಗತಿ: ಶಾಸಕ ಜ್ಞಾನೇಂದ್ರ
ಸಾರಾಂಶ
ತಹಸೀಲ್ದಾರ್ ಎಂ.ಲಿಂಗರಾಜ್ ರಾಷ್ಟ್ರಧ್ವಜವನ್ನು ಅನಾವರಣ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಒಂದು ಭಾಷೆ ಕೇವಲ ಭೂಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. ಇದರ ಹಿಂದೆ ಕಲೆ, ಸಾಹಿತ್ಯ, ಸಂಸ್ಕೃತಿ ಮಾತ್ರವಲ್ಲದೇ ಭಾವನಾತ್ಮಕ ಸಂಭಂಧವೂ ಒಳಗೊಂಡಿದೆ. 6.10 ಕೋಟಿ ಜನಸಂಖ್ಯೆ ಇರುವ ಕನ್ನಡನಾಡಿನಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಡಾ. ಯು.ಆರ್. ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಕನ್ನಡ ರಾಜ್ಯೋತ್ಸವದಲ್ಲಿ ನಾಡಧ್ವಜವನ್ನು ಅರಳಿಸಿ ಮಾತನಾಡಿದ ಅವರು, ಭಾಷೆಯ ಮೇಲಿನ ಅಭಿಮಾನ ನವೆಂಬರ್ 1ನೇ ತಾರೀಖಿಗೆ ಸೀಮಿತವಾಗಬಾರದು ಎಂದೂ ಹೇಳಿದರು. ಕರ್ನಾಟಕ ಆರ್ಥಿಕ, ಸಾಮಾಜಿಕವಾಗಿ ಬಲಾಢ್ಯವಾಗಿದ್ದರೂ ಭಾಷೆ ಮೇಲಿನ ಅಭಿಮಾನದಲ್ಲಿ ಹಿಂದುಳಿದಿದ್ದೇವೆ. ವ್ಯಾಪಾರಕ್ಕಾಗಿ ಬಂದಿದ್ದ ಆಂಗ್ಲರು ಹೇರಿಕೆ ಮಾಡಿದ್ದ ಇಂಗ್ಲಿಷ್‌ಗೆ ಮಾರುಹೋಗಿ ನಮ್ಮ ಮಾತೃಭಾಷೆ ಕಡೆಗಣಿಸುತ್ತಿದ್ದೇವೆ. ಕನ್ನಡವನ್ನು ವಿಜ್ಞಾನದ ಮತ್ತು ಅನ್ನದ ಭಾಷೆಯನ್ನಾಗಿ ಮಾಡುವ ಪ್ರಯತ್ನ ಆಗಬೇಕಿದೆ ಎಂದರು. ಪಪಂ ಅಧ್ಯಕ್ಷೆ ಗೀತಾ ರಮೇಶ್ ಮಾತನಾಡಿ, ಕನ್ನಡದ ಅಸ್ಮಿತೆಗೆ ಧಕ್ಕೆ ಆಗದಂತೆ ನಾವುಗಳು ಅಭಿಮಾನವನ್ನು ಬೆಳೆಸಿಕೊಳ್ಳಬೇಕಿದೆ. ಕನ್ನಡಕ್ಕೆ ಬಂದ ಎಂಟು ಜ್ಞಾನಪೀಠ ಪ್ರಶಸ್ತಿಗಳಲ್ಲಿ ಎರಡು ಪ್ರಶಸ್ತಿಯನ್ನು ಗಳಿಸಿರುವ ಹೆಮ್ಮೆ ನಮ್ಮ ತಾಲೂಕಿನದು ಎಂದರು. ತಹಸೀಲ್ದಾರ್ ಎಂ.ಲಿಂಗರಾಜ್ ರಾಷ್ಟ್ರಧ್ವಜವನ್ನು ಅನಾವರಣ ಮಾಡಿ ಧ್ವಜ ಸಂದೇಶ ನೀಡಿದರು. ಪಪಂ ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಸದಸ್ಯರಾದ ರತ್ನಾಕರ ಶೆಟ್ಟಿ, ಬಿ.ಗಣಪತಿ, ತಾಪಂ ಇಒ ಎಂ.ಶೈಲಾ, ಬಿಇಒ ವೈ.ಗಣೇಶ್, ಪಪಂ ಸಿಒ ಕುರಿಯಾಕೋಸ್, ಕರವೇ ಅಧ್ಯಕ್ಷ ಸುರೇಂದ್ರ ಇತರರು ಇದ್ದರು. - - - -ಫೋಟೋ: ತೀರ್ಥಹಳ್ಳಿ ಪಟ್ಟಣದ ಕನ್ನಡ ರಾಜ್ಯೋತ್ಸವದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಶಾಸಕ ಆರಗ ಜ್ಞಾನೇಂದ್ರ ಪುಷ್ಪಾರ್ಚನೆ ಸಲ್ಲಿಸಿದರು.