ಸಾರಾಂಶ
ಬೆಂಗಳೂರಿನ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಪ್ರತಿ ವರ್ಷ ನೀಡುವ ಅಳಿಕೆ ಯಕ್ಷ ಸಹಾಯ ನಿಧಿ 2024 -25 ನೇ ಸಾಲಿಗೆ ಹಿರಿಯ ಯಕ್ಷಗಾನ ಕಲಾವಿದ, ತೆಂಕುತಿಟ್ಟಿನ ಬಣ್ಣದ ವೇಷಧಾರಿ ಸಿದ್ದಕಟ್ಟೆಸದಾಶಿವ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ
ಕನ್ನಡಪ್ರಭ ವಾರ್ತೆ ಮಂಗಳೂರು
ಯಕ್ಷಗಾನ ಕಲಾವಿದ ದಿ. ಅಳಿಕೆ ರಾಮಯ್ಯ ರೈ ಅವರ ಹೆಸರಿನಲ್ಲಿ ಬೆಂಗಳೂರಿನ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಪ್ರತಿ ವರ್ಷ ನೀಡುವ ಅಳಿಕೆ ಯಕ್ಷ ಸಹಾಯ ನಿಧಿ 2024 -25 ನೇ ಸಾಲಿಗೆ ಹಿರಿಯ ಯಕ್ಷಗಾನ ಕಲಾವಿದ, ತೆಂಕುತಿಟ್ಟಿನ ಬಣ್ಣದ ವೇಷಧಾರಿ ಸಿದ್ದಕಟ್ಟೆಸದಾಶಿವ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ ಎಂದು ಅಳಿಕೆ ರಾಮಯ್ಯ ರೈ ಅವರ ಪುತ್ರ ಹಾಗೂ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾ ಪ್ರಸಾದ್ ರೈ ತಿಳಿಸಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಅನಾರೋಗ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಕಟ್ಟೆಸದಾಶಿವ ಶೆಟ್ಟಿಗಾರ್ ಅವರ ಸಿದ್ದಕಟ್ಟೆಯ ನಿವಾಸಕ್ಕೆ ತೆರಳಿ ಮೇ 19ರಂದು ಗೃಹ ಸನ್ಮಾನದೊಂದಿಗೆ 20,000 ರು. ಸಮರ್ಪಣೆ ಮಾಡಲಾಗುವುದು ಎಂದರು.ಸದಾಶಿವ ಶೆಟ್ಟಿಗಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಸಾರ್ವಜನಿಕರು, ಯಕ್ಷಾಭಿಮಾನಿಗಳು ಕೂಡ ಅವರ ಸಹಾಯಕ್ಕೆ ಮುಂದಾಗಬೇಕು ಎಂದು ಆಯ್ಕೆ ಸಮಿತಿ ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದರು.ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಪ್ರಸ್ತುತ ಬಹುಬೇಡಿಕೆಯ ಕಲಾವಿದರಾದ ಸಿದ್ಧಕಟ್ಟೆಸದಾಶಿವ ಶೆಟ್ಟಿಗಾರ್ 18ನೇ ವಯಸ್ಸಿನಲ್ಲಿ ಯಕ್ಷಗಾನದತ್ತ ಆಕರ್ಷಿತರಾದವರು. ಹಿರಿಯ ಕಲಾವಿದ ರೆಂಜಾಳ ರಾಮಕೃಷ್ಣ ರಾಯರಿಂದ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕಲಿತರು. ಬಣ್ಣದ ವೇಷದ ದಂತಕಥೆ ಎನಿಸಿದ್ದ ದಿ. ಬಣ್ಣದ ಮಾಲಿಂಗರಿಂದ ಹಲವು ಬಗೆಯ ಬಣ್ಣದ ವೇಷಗಳ ಪಟ್ಟುಗಳನ್ನು ಅಭ್ಯಸಿಸಿ ಮೇಳದ ತಿರುಗಾಟಕ್ಕೆ ತೊಡಗಿದರು. ಅಗರಿ, ಬಲಿಪ, ಇರಾ, ಪದ್ಯಾಣ ಭಾಗವತರು ಹಾಗೂ ಹಲವು ಹಿರಿಯ ವೇಷಧಾರಿಗಳ ಒಡನಾಟದಲ್ಲಿ ಓರ್ವ ಪರಿಪೂರ್ಣ ಕಲಾವಿದರಾಗಿ ಬೆಳೆದರು ಎಂದು ವಿವರಿಸಿದರು.
ಕಲಾವಿದ ಉಬರಡ್ಕ ಉಮೇಶ ಶೆಟ್ಟಿ, ಪೋಷಕ ಕೆ. ಲಕ್ಷ್ಮೀ ನಾರಾಯಣ ರೈ ಹರೇಕಳ ಇದ್ದರು.