ಸಾರಾಂಶ
ಗಜೇಂದ್ರಗಡ: ಪಟ್ಟಣದಲ್ಲಿ ನಡೆಯುತ್ತಿರುವ ಬಸವ ಪುರಾಣ ನಿಮಿತ್ತ ಪ್ರತಿದಿನ ಪುರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಹಾಲಕೆರೆ ಸಂಸ್ಥಾನಮಠದ ಪೀಠಾಧ್ಯಕ್ಷ ಮುಪ್ಪಿನಬಸಲಿಂಗ ಶ್ರೀಗಳು ಹಮ್ಮಿಕೊಂಡಿರುವ ಸದ್ಭಾವನಾ ಪಾದಯಾತ್ರೆಯ ಭಕ್ತ ಸಮೂಹದಲ್ಲಿ ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಗುವುದರ ಜತೆಗೆ ಗುಡಿ,ದರ್ಗಾ ಎಲ್ಲೆ ಮೀರಿ ಸಂಸ್ಕಾರ, ಪರಂಪರೆ ಹಾಗೂ ಆಚಾರ, ವಿಚಾರಗಳ ವಿನಿಮಯಕ್ಕೆ ಹೊಸ ನಾಂದಿ ಹಾಡಿದೆ.
ಸ್ಥಳೀಯ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ನ. ೨೫ ರಿಂದ ಡಿ.೨೬ರವರೆಗೆ ನಡೆಯುವ ಬಸವ ಪುರಾಣ ಹಿನ್ನೆಲೆ ಮುಪ್ಪಿನ ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ವಿವಿಧ ಮಠಾಧೀಶರು ಜನತೆಗೆ ದುರಾಚಾರ ಹಾಗೂ ದುಶ್ಚಟಗಳನ್ನು ನಮ್ಮ ಜೋಳಿಗೆ ಹಾಕಿ ಸದ್ಗುಣಗಳನ್ನು ಪಡೆದು ನೆಮ್ಮದಿಯ ಜೀವನ ಪಡೆಯಿರಿ ಎಂದು ಇಲ್ಲಿನ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ ಭಕ್ತರ ಮನಸ್ಸನ್ನು ಸೂರೆಗೊಳ್ಳುತ್ತಿದ್ದು ಬಸವ ಪುರಾಣಕ್ಕೆ ಜನಸಾಗರ ಕರೆತರುತ್ತಿದೆ.ಪಟ್ಟಣದಲ್ಲಿ ಮೊದಲ ದಿನದಂದು ಅಗಸಿ ಬಾಗಿಲು ಮುಂಭಾಗದಿಂದ ಆರಂಭವಾದ ಸದ್ಭಾವನಾ ಪಾದಯಾತ್ರೆಯಲ್ಲಿ ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಚನ್ನಬಸವ ಸ್ವಾಮೀಜಿ, ದರೂರು ಸಂಗನಬಸವೇಶ್ವರ ಮಠದ ಕೊಟ್ಟರು ಸ್ವಾಮೀಜಿ, ಹೊಸೂರು-ಜಿಗೇರಿಯ ಗುರು ಸಿದ್ಧೇಶ್ವರ ಶಿವಾಚಾರ್ಯ, ಗರಗನಾಗಲಾಪೂರ ಒಪ್ಪತೇಶ್ವರ ಸಂಸ್ಥಾನಮಠದ ನಿರಂಜನ ಪ್ರಭು ಸ್ವಾಮೀಜಿ, ಶ್ರೀಧರಗಡ್ಡೆ ಮರಿಕೊಟ್ಟರು ದೇಶಿಕರು, ಸಂಗನಾಳ ವಿಶ್ವೇಶ್ವರ ದೇವರು, ಪ್ರವಚನಕಾರ ಅನ್ನದಾನ ಶಾಸ್ತ್ರೀಗಳು ವಿರೂಪಾಕ್ಷೇಶ್ವರ ದೇವಸ್ಥಾನ, ಹಿರೇಬಜಾರ ಮಾರ್ಗವಾಗಿ ೮ನೇ ವಾರ್ಡ್‌ನಲ್ಲಿ ಮೊದಲ ದಿನ ಸದ್ಭಾವನಾ ಪಾದಯಾತ್ರೆ ನಡೆಸಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಬಸವ ಪುರಾಣವು ಸಮುದಾಯಗಳಲ್ಲಿ ಶಾಂತಿ ಮತ್ತು ಸೌಹಾರ್ದತೆ ಗಟ್ಟಿಗೊಳಿಸಲು ಹಾಗೂ ಸಮಾಜದಲ್ಲಿ ಸಮನ್ವಯ ಕಾರ್ಯಕ್ರಮದ ಅಡಿಯಲ್ಲಿ ನಡೆಯುತ್ತಿರುವ ಸದ್ಭಾವನಾ ಪಾದಯಾತ್ರೆ ಸಂಚರಿಸುವ ಮಾರ್ಗಗಳಲ್ಲಿ ಮನೆ ಮುಂದೆ ಮಹಿಳೆಯರು ರಂಗೋಲಿ ಬಡಿಸಿ, ಶ್ರೀಗಳ ಬರುವಿಕೆಗಾಗಿ ಆರತಿ ಹಿಡಿದು ರಸ್ತೆಗಳಲ್ಲಿ ತಳಿರು ತೋರಣಗಳಿಂದ ಅಲಂಕರಿಸಿದ್ದು ವಾರ್ಡ್‌ಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿ ಭಕ್ತರ ಭಕ್ತಿಯು ಮುಗಿಲು ಮುಟ್ಟುವಂತೆ ಮಾಡಿದೆ.ಪಟ್ಟಣದಲ್ಲಿ ನಡೆಯುತ್ತಿರುವ ಸದ್ಭಾವನಾ ಯಾತ್ರೆಯಲ್ಲಿ ಸರ್ವ ಸಮುದಾಯಗಳ ಜನತೆ ಭಾಗವಹಿಸುತ್ತಿದ್ದಾರೆ. ತಮ್ಮ ಮನೆ ಮುಂದೆ ಬರುವ ಶ್ರೀಗಳಿಗೆ ಜೈಕಾರ ಹಾಕುತ್ತಿದ್ದಾರೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆಯ ನಿರ್ಮಾಣಕ್ಕೆ ಆಯಾ ವಾರ್ಡಿನಲ್ಲಿನ ಸಮುದಾಯ ಭವನ, ಗುಡಿಗಳು ಹಾಗೂ ದರ್ಗಾಗಳಲ್ಲಿ ಶ್ರೀಗಳ ಆರ್ಶೀವಚನ ಕೇಳುತ್ತಿರುವ ಭಕ್ತ ಸಮೂಹಕ್ಕೆ ಶ್ರೀಗಳು ಜನರಿಗೆ ದುಶ್ಚಟ ಹಾಗೂ ದುರಾಚಾರ ಜೋಳಿಗೆಗೆ ಹಾಕಿ. ಸಂಸ್ಕಾರವಂತರಾಗಿ ಹಾಗೂ ಸದಾಚಾರಿಗಳಾಗಿ ಬದುಕು ಸಾಗಿಸಿ ಎಂದು ರುದ್ರಾಕ್ಷಿ ಹಾಗೂ ಭಸ್ಮಧಾರಣೆಯ ಮೂಲಕ ಸಮಾಜವನ್ನು ಸರಿದಾರಿಯತ್ತ ಸಾಗಿಸಲು ಮಾರ್ಗದರ್ಶಕರಾಗಿ ಕೈಗೊಂಡಿರುವ ಸದ್ಭಾವನಾ ಪಾದಯಾತ್ರೆಯು ಜನಮಾನಸದಲ್ಲಿ ಹೊಸ ಮನ್ವಂತರ ಹುಟ್ಟು ಹಾಕುತ್ತಿದೆ.
ಧಾರ್ಮಿಕವಾಗಿ ಹಿಂದುಳಿಯುತ್ತಿರುವ ಹಾಗೂ ಗೊಂದಲಗಳಲ್ಲಿ ಮುಳುಗುತ್ತಿರುವ ಮಾನವ ಜನಾಂಗದಲ್ಲಿ ಪರಿಣಾಮಕಾರಿ ಪ್ರಭಾವ ಬೀರುವುದು ಧರ್ಮವಾಗಿದೆ. ಹೀಗಾಗಿ ಧಾರ್ಮಿಕವಾಗಿ ಹಿಂದುಳಿಯುತ್ತಿರುವ, ಮನಸ್ಸಿನಲ್ಲಿ ಉಂಟಾಗುವ ಗೊಂದಲಗಳಿಗೆ ಬೆಳಕು ನೀಡುವುದು ಬಸವ ಪುರಾಣದ ಉದ್ದೇಶವಾಗಿದೆ ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನಬಸವಲಿಂಗ ಶ್ರೀಗಳು ತಿಳಿಸಿದ್ದಾರೆ.ಪಟ್ಟಣದಲ್ಲಿ ನಡೆಯುತ್ತಿರುವ ಬಸವ ಪುರಾಣ ಕಾರ್ಯಕ್ರಮಕ್ಕೆ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತಿ, ಜ್ಞಾನ ಹಾಗೂ ದಾಸೋಹದ ಪ್ರವಾಹವಾಗುತ್ತಿದ್ದು ಬಸವ ಪುರಾಣ ಆಲಿಸಿ ಭಕ್ತ ಸಮೂಹವು ಪಾವನರಾಗುತ್ತಿದ್ದೇವೆ ಎಂದು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ತಿಳಿಸಿದ್ದಾರೆ.