ಮಾಡುವ ಕಾಯಕದಲ್ಲಿ ಸತ್ಯ ಮತ್ತು ಪ್ರಾಮಾಣಿಕತೆ ಇದ್ದರೆ ಪರಿಶುದ್ಧ ಫಲ ನೀಡಬಲ್ಲದು.

ಗದಗ: ಸತ್ಯ, ಶಾಂತಿ, ಅಹಿಂಸಾ ಧರ್ಮಪಾಲನೆಯ ಮೂಲಕ ಮನುಷ್ಯ ಸದ್ಗತಿಯನ್ನು ಹೊಂದಬೇಕೆಂದು ಆಚಾರ್ಯ ಭಗವಾನ್ ವಿಜಯ್ ಚಂದ್ರಭೂಷಣ ಸೂರೀಶ್ವರಜಿ ತಿಳಿಸಿದರು.ನಗರದ ಪಂಜರಪೋಳದ ಗೋಶಾಲಾದಲ್ಲಿ ಮಂಗಳವಾರ ಮಹಾವೀರ ಗೋಸೇವಾ ಸಮಿತಿಯಿಂದ ನಡೆದ ಮಹಾವೀರ ಜನ್ಮಕಲ್ಯಾಣ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರದ್ಧೆ, ನಿಷ್ಠೆಯಿಂದ ಧರ್ಮದ ಹಾದಿಯಲ್ಲಿ ಮುನ್ನಡೆದರೆ ಧರ್ಮವು ನಮ್ಮನ್ನು ಸನ್ಮಾರ್ಗದೆಡೆಗೆ ಮುನ್ನಡೆಸುವುದು. ಮಾಡುವ ಕಾಯಕದಲ್ಲಿ ಸತ್ಯ ಮತ್ತು ಪ್ರಾಮಾಣಿಕತೆ ಇದ್ದರೆ ಪರಿಶುದ್ಧ ಫಲ ನೀಡಬಲ್ಲದು. ಅಂತಹ ಪರಿಶುದ್ಧ ಕಾಯಕ ನಡೆಸಿ ಎಂದರು.ಸಂಯಮ ಭೂಷಣ ವಿಜಯರಾಜಜೀ ಮಾತನಾಡಿ, ಧರ್ಮಾಭಿಮಾನಿಗಳು ಅಹಿಂಸಾ ಪರಮೋಧರ್ಮ ತತ್ವವನ್ನು ಪರಿಪಾಲಿಸಬೇಕಲ್ಲದೆ, ಧರ್ಮದ ಪಥದಲ್ಲಿ ಮುನ್ನಡೆದು ಮಾನವ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ಧರ್ಮವಾಣಿ, ಧರ್ಮ ಶ್ರವಣ ಮುಖ್ಯವಾಗಿದ್ದು, ಭಕ್ತಿಯಿಂದ ಪಾಲಿಸಬೇಕೆಂದರು.ಈ ವೇಳೆ ಸಾಧ್ವಿ ಕಾರುಣ್ಯ ಸುಧಾ ಶ್ರೀಜಿ, ಸಾಧ್ವಿ ಇಂದುಪ್ರಭಾಜೀ, ಮಹಾವೀರ ಗೋಸೇವಾ ಸಮಿತಿಯ ಅಧ್ಯಕ್ಷ ಅಶೋಕ ಫುಲಾಮುಥಾ, ಪಂಕಜ್ ಬಾಫಣಾ, ರೂಪಚಂದಜಿ ಪಾಲರೇಚಾ, ಸುರೇಶ ಕೊಠಾರಿ, ವಿಜಯಜಿ ಲೂಥಿಯಾ, ಪದ್ಮರಾಜ ಕುಲಕರ್ಣಿ, ಛಗರಾಜ ಪಟೇಲ್, ಬಾಬುಲಾಲಜ್ ಪರಮಾರ್, ವಿಜಯರಾಜ ಬಾಗಮಾರ ಸೇರಿದಂತೆ ಪ್ರಮುಖರು ಇದ್ದರು. ಸಚಿನ್ ಜೈನ್ ಸ್ವಾಗತಿಸಿ, ನಿರೂಪಿಸಿದರು. ನರೇಶ್ ಪಾಲರೇಚಾ ಪರಿಚಯಿಸಿ, ನಿರೂಪಿಸಿದರು. ಭರತ್ ಬನ್ಸಾಲಿ ವಂದಿಸಿದರು. ಮೆರವಣಿಗೆ

ಗದಗ: ನಗರದ ಮುಳಗುಂದ ನಾಕಾದ ಮಹಾವೀರ ಸರ್ಕಲ್‌ದಿಂದ ಮಹಾವೀರರ ಜಯಂತಿ ಅಂಗವಾಗಿ ಅಲಂಕೃತ ವಾಹನದಲ್ಲಿರಿಸಿದ ಮಹಾವೀರರ ಭಾವಚಿತ್ರದ ಮೆರವಣಿಗೆಯು ಪ್ರಾರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗೋಶಾಲಾ ಆವರಣಕ್ಕೆ ಆಗಮಿಸಿ ಧರ್ಮ ಸಮಾರಂಭವಾಗಿ ಮಾರ್ಪಟ್ಟಿತು. ಈ ವೇಳೆ ಸಮಸ್ತ ಜೈನ ಸಮಾಜದವರು, ಮಹಿಳಾ ಮಂಡಳ ಹಾಗೂ ಯುವಕ ಮಂಡಳದವರು ಇದ್ದರು.