ಸಾರಾಂಶ
ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಸೇರಿದಂತೆ ಇತರೆ ವಿವಿಧ ಇಲಾಖೆಯ ಸಾಧನೆಗಳನ್ನು ಜನರಿಗೆ ತಿಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಮಟ್ಟದಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 3 ಲಕ್ಷ ಜನ ಸೇರಲಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆದ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಗುತ್ತಿದೆ.
ಕೊಪ್ಪಳ:
ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮೇ 20ರಂದು ಹೊಸಪೇಟೆಯಲ್ಲಿ ಬೃಹತ್ ಮಟ್ಟದ ಸಾಧನಾ ಸಮಾವೇಶ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ತಾಲೂಕಿನ ಗಿಣಿಗೇರಾ ಬಳಿ ಏರೋಡ್ರೋಮ್‌ನಲ್ಲಿ ಪೊಲೀಸ್ ಗೌರವ ವಂದನೆ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಸೇರಿದಂತೆ ಇತರೆ ವಿವಿಧ ಇಲಾಖೆಯ ಸಾಧನೆಗಳನ್ನು ಜನರಿಗೆ ತಿಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಮಟ್ಟದಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 3 ಲಕ್ಷ ಜನ ಸೇರಲಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆದ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಗುವುದು. ಜನಪರವಾದ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಗಳಿಗೆ ಯಾವುದೇ ಹಣದ ಕೊರತೆ ಇರುವುದಿಲ್ಲ. ಇದಕ್ಕಾಗಿ ಬಜೆಟ್‌ನಲ್ಲಿ ಈ ವರ್ಷ ಪ್ರತ್ಯೇಕವಾಗಿ ಹಣ ಮೀಸಲಿಡಲಾಗಿದೆ ಎಂದರು.ಹೊಸಪೇಟೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ಸ್ಥಳ ಪರಿಶೀಲನೆಗಾಗಿ ಆಗಮಿಸಿದ್ದೇನೆ. ಸರ್ಕಾರದ ಸಾಧನಾ ಸಮಾವೇಶದಲ್ಲಿ ಸಂಪುಟದ ಸಚಿವರು, ಸಂಸದರು, ಶಾಸಕರು ಸೇರಿದಂತೆ ಅನೇಕರು ಪಾಲ್ಗೊಳ್ಳುವ ಜತೆಗೆ ವಿಜಯನಗರ ಜಿಲ್ಲೆಯ ಅಕ್ಕ-ಪಕ್ಕದ ಜಿಲ್ಲೆಗಳ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ವೇಳೆ ಸಚಿವರಾದ ಎಚ್.ಕೆ. ಪಾಟೀಲ್, ಕೃಷ್ಣ ಭೈರೆಗೌಡ, ಎನ್.ಎಸ್.ಭೋಸರಾಜು, ಶಿವರಾಜ ತಂಗಡಗಿ, ಜಮೀರ್ ಅಹ್ಮದ್ ಖಾನ್, ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ, ಸಂಸದ ಇ. ತುಕಾರಾಂ, ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ, ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ್, ಜೆ.ಎನ್. ಗಣೇಶ, ಎಚ್.ಆರ್. ಗವಿಯಪ್ಪ, ಮಾಜಿ ಸಂಸದ ಕರಡಿ ಸಂಗಣ್ಣ, ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಪಂ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಉಪಸ್ಥಿತರಿದ್ದರು.