ಸಾರಾಂಶ
-ದೋರನಹಳ್ಳಿಯಲ್ಲಿ ಮಹಾಂತೇಶ್ವರ ಜಾತ್ರೆ ಪ್ರಯುಕ್ತ ಬೃಹತ್ ದನಗಳ ಜಾತ್ರೆ
-----ಕನ್ನಡಪ್ರಭ ವಾರ್ತೆ ಶಹಾಪುರಸಗರನಾಡಿನ ಆರಾಧ್ಯ ದೈವ, ಸದ್ಗುರು ಮಹಾಂತೇಶ್ವರ ಜಾತ್ರೆಯಂಗವಾಗಿ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದ ಜಾನುವಾರು ಜಾತ್ರೆ ಕಣ್ಮನ ಸೆಳೆಯಿತು.
ಬಿಜಾಪುರ, ಇಂಡಿ, ಅಕ್ಕಲಕೋಟ, ಚಡಚಣ, ಅಲ್ಮೇಲ್, ಸಿಂಧಗಿ, ದೇವದುರ್ಗ, ಲಿಂಗಸುಗೂರು, ಮುದ್ದೇಬಿಹಾಳ ಸೇರಿದಂತೆ ಸುತ್ತಮುತ್ತಲಿನ ಜಿಲ್ಲಾ ಹಾಗೂ ತಾಲೂಕುಗಳಿಂದ ನಾನಾ ತಳಿಯ 8ಸಾವಿರಕ್ಕೂ ಹೆಚ್ಚು ಜಾನುವಾರು ಜಾತ್ರೆಗೆ ಸೇರಿವೆ. ರಾಸುಗಳನ್ನು ಮದುಮಗನಂತೆ ಶೃಂಗಾರಗೊಳಿಸಲಾಗಿತ್ತು.ಕೃಷಿಗೆ ಬೇಕಾಗುವ ಪರಿಕರಗಳ ಮಾರಾಟವು ಜಾತ್ರೆಯಲ್ಲಿ ಭರ್ಜರಿಯಾಗಿ ನಡೆಯಿತು. ಕೃಷಿಗೆ ಬೇಕಾಗುವ ಹಗ್ಗ, ಎತ್ತುಗಳಿಗೆ ಕಟ್ಟುವ ಬಣ್ಣ ಬಣ್ಣದ ಗೊಂಡೆಗಳು, ಬಾರಕೋಲು ಸೇರಿದಂತೆ ಬಿದಿರು ಬುಟ್ಟಿಗಳು, ಕುರೂಪಿ, ಸಲಿಕೆ, ಬೆಡಗ, ಪಲಗ ಸೇರಿದಂತೆ ಕಬ್ಬಿಣದ ಪರಿಕರಗಳು ಎಲ್ಲಾ ರೀತಿಯ ವಸ್ತುಗಳು ಜಾತ್ರೆಯಲ್ಲಿ ಮಾರಾಟವಾದವು.
ಜಾತ್ರೆಗೆ ಬಂದ ಭಕ್ತರಿಗೆ ಶ್ರೀಮಠದ ವತಿಯಿಂದ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಜನರು ಖುಷಿಯಿಂದಲೇ ಹಿಂತಿರುಗಬೇಕು ಎಂಬ ಸಂಕಲ್ಪ ದೊಂದಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಅಭಿನವ ಮಹಾಂತೇಶ್ವರ ಶಿವಾಚಾರ್ಯ ತಿಳಿಸಿದರು.ಸುಮಾರು ವರ್ಷಗಳಿಂದ ಈ ಜಾತ್ರೆಗೆ ಬರುತ್ತಿದ್ದೇನೆ. ಯಾವುದೇ ಅನಾನುಕೂಲತೆ ಇಲ್ಲ, ಕಳ್ಳಕಾಕರ ಭಯವಿಲ್ಲ. ಇಲ್ಲಿ ಸಕಲ ವ್ಯವಸ್ಥೆ ಶ್ರೀಮಠದ ಕಡೆಯಿಂದ ಮಾಡುತ್ತಾರೆ ಎಂದು ಚಡಚಣ ರಾಸುಗಳ ವ್ಯಾಪಾರಿ ಅಯ್ಯಪ್ಪ ಪೂಜಾರಿ ಹೇಳಿದ್ದಾರೆ.
----5ವೈಡಿಆರ್6: ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಸದ್ಗುರು ಮಹಾಂತೇಶ್ವರ ಜಾತ್ರೆ ಅಂಗವಾಗಿ ಬೃಹತ್ ದನಗಳ ಜಾತ್ರೆ ನಡೆಯುತ್ತಿರುವುದು.