ಭವಿಷ್ಯದ ಜನಾಂಗ ರೂಪಿಸುತ್ತಿರುವ ಸದ್ಗುರು ಸಾಯಿ

| Published : Sep 28 2025, 02:00 AM IST

ಭವಿಷ್ಯದ ಜನಾಂಗ ರೂಪಿಸುತ್ತಿರುವ ಸದ್ಗುರು ಸಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾಮೀಜಿ ಮಾಡುತ್ತಿರುವ ಕೆಲಸಗಳನ್ನು ನೋಡಿ ಕೆಲವರು ಆಶ್ಚರ್ಯಚಕಿತರಾಗುತ್ತಾರೆ. ಅವರು ಅವನ್ನು ನಿರ್ಮಿಸುವುದಿಲ್ಲ, ಸೃಷ್ಟಿಸುತ್ತಾರೆ ಎಂದೇ ಹೇಳುತ್ತೇನೆ. ಅವರು ಕಟ್ಟಡಗಳನ್ನು ಸೃಷ್ಟಿಸುತ್ತಿಲ್ಲ, ಭವಿಷ್ಯದ ಜನಾಂಗವನ್ನು ರೂಪಿಸುತ್ತಿದ್ದಾರೆ. ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಸಂಸ್ಕಾರ, ಸಂಸ್ಕೃತಿ, ಭಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸ ಇರುತ್ತದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕೆಲವರಲ್ಲಿ ಜ್ಞಾನವಿರುತ್ತದೆ, ಕೆಲವರಲ್ಲಿ ಧ್ಯಾನ ಮಾತ್ರವೇ ಇರುತ್ತದೆ. ಇವೆರೆಡೂ ಸಮಾಗಮವಾಗಿರುವ ವ್ಯಕ್ತಿತ್ವಗಳು ಅಪರೂಪ. ಅಂಥ ಅಪರೂಪದ ವ್ಯಕ್ತಿತ್ವ ಸದ್ಗುರು ಶ್ರೀ ಮಧುಸೂದನ ಸಾಯಿ. ಸದ್ಗುರುಗಳು ಕೇಳಿದ್ದನ್ನೆಲ್ಲವನ್ನೂ ಭಗವಂತ ಅನುಗ್ರಹಿಸುತ್ತಿದ್ದಾನೆ. ಮುದ್ದೇನಹಳ್ಳಿಗೆ ಬಂದಾಗಲೆಲ್ಲವೂ ನಮ್ಮ ಅಂತರಂಗದ ಪ್ರಯಾಣ ಆರಂಭವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಜ್ಞ, ನವರಾತ್ರಿ ಹೋಮ ಹಾಗೂ ದುರ್ಗಾ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಅವರು ಮಾತನಾಡಿ, ತಮ್ಮ ಮತ್ತು ಮಧುಸೂದನ ಸಾಯಿ ಅವರ ಸಂಬಂಧ ದೈವದತ್ತವಾದುದು ಎಂದು ಬಣ್ಣಿಸಿದರು.

ಸದ್ಗುರು ಶಕ್ತಿಗೆ ಮಿತಿಯೇ ಇಲ್ಲ

ನಾನು ಮೊದಲ ಬಾರಿ ಅವರನ್ನು ಭೇಟಿಯಾದಾಗ ಒಬ್ಬ ವ್ಯಕ್ತಿ ಅಲ್ಲ, ಒಂದು ಶಕ್ತಿ ನನ್ನೊಂದಿಗೆ ಮಾತನಾಡುತ್ತಿದೆ ಎನಿಸಿತು. ಆ ಶಕ್ತಿಯು ಮಾನವಕುಲದ ಒಳಿತಿಗಾಗಿ ಶ್ರಮಿಸುತ್ತಿದೆ. ಇದು ಆಲೋಚನೆ ಮತ್ತು ಕಾರ್ಯಗಳಲ್ಲಿ ಶುದ್ಧತೆ ಇದ್ದಾಗ ಮಾತ್ರ ಸಾಧ್ಯ. ನಾವೆಲ್ಲರೂ ಚೈತನ್ಯದ ಕೇಂದ್ರವೇ ಆಗಿದ್ದೇವೆ. ಆದರೆ ಮಧುಸೂದನ ಸಾಯಿ ಅವರ ಶಕ್ತಿಗೆ ಮಿತಿಯಿಲ್ಲ. ಇಲ್ಲಿ ನಾವೇನು ನೋಡುತ್ತೇವೆಯೋ ಅದು ಪವಾಡದಂತೆ ಇದೆ ಎಂದರು. ಗುರುವಿನ ಮೂಲಕ ನಾವು ದೇವರನ್ನು ತಲುಪುತ್ತೇವೆ. ಭಕ್ತಿ ಎನ್ನುವುದು ಕರಗುವ, ಐಕ್ಯವಾಗುವ ಭಾವನೆ. ನಾವು ಕೇವಲ ಕರಗುವುದಷ್ಟೇ ಅಲ್ಲ, ಗುರುವಿನೊಂದಿಗೆ ಒಂದಾಗಬೇಕು. ಆಗ ಮಾತ್ರ ದೇವರನ್ನು ತಲುಪಲು ಸಾಧ್ಯವಾಗುತ್ತದೆ. ಯಾರು ಪ್ರೀತಿಸುತ್ತಾರೋ ಅವರು ಸೇವೆ ಮಾಡಬೇಕು. ಸೇವೆಯನ್ನು ಪ್ರೀತಿಯಿಂದ ಮಾಡಬೇಕು ಎನ್ನುವುದು ಬಾಬಾ ಅವರ ಆಶಯ. ಮಧುಸೂದನ ಸಾಯಿ ಅವರು ಅದರಂತೆಯೇ ನಡೆದುಕೊಳ್ಳುತ್ತಿದ್ದಾರೆಂದರು.

ಅಹಂ ಇಲ್ಲಿ ಸುಟ್ಟು ಭಸ್ಮವಾಗುತ್ತದೆ

ಸ್ವಾಮೀಜಿ ಮಾಡುತ್ತಿರುವ ಕೆಲಸಗಳನ್ನು ನೋಡಿ ಕೆಲವರು ಆಶ್ಚರ್ಯಚಕಿತರಾಗುತ್ತಾರೆ. ಅವರು ಅವನ್ನು ನಿರ್ಮಿಸುವುದಿಲ್ಲ, ಸೃಷ್ಟಿಸುತ್ತಾರೆ ಎಂದೇ ಹೇಳುತ್ತೇನೆ. ಅವರು ಕಟ್ಟಡಗಳನ್ನು ಸೃಷ್ಟಿಸುತ್ತಿಲ್ಲ, ಭವಿಷ್ಯದ ಜನಾಂಗವನ್ನು ರೂಪಿಸುತ್ತಿದ್ದಾರೆ. ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಸಂಸ್ಕಾರ, ಸಂಸ್ಕೃತಿ, ಭಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸ ಇರುತ್ತದೆ. ನಮಗೆ ಸಮಾಜವು ಹೆಸರು, ಅಸ್ಮಿತೆ (ಗುರುತು) ಕೊಟ್ಟಿದೆ. ಇದರಿಂದಾಗಿಯೇ ಹಲವು ಸಣ್ಣಸಣ್ಣ ಅಹಂಗಳು ಸೇರುತ್ತಾ ಹೋಗುತ್ತವೆ. ಒಮ್ಮೆ ವೈದ್ಯ ಅಥವಾ ಎಂಜಿನಿಯರ್ ಆದರೆ ಸಮಾಜದಲ್ಲಿ ದೊಡ್ಡ ಸಾಧನೆ ಎನಿಸಿಕೊಳ್ಳುತ್ತದೆ. ಶಾಸಕನಾದರೆ, ಸಚಿವನಾದರೆ ಅಹಂ ಬೆಳೆಯುತ್ತಾ ಹೋಗುತ್ತದೆ. ಆದರೆ ಇಲ್ಲಿ ಅಹಂಕಾರವು ಸುಟ್ಟು ಹೋಗುತ್ತದೆ ಎಂದರು.

650 ಹಾಸಿಗೆಗಳ ಆಸ್ಪತ್ರೆ

ಈಗ ಸ್ವಾಮೀಜಿ ಅವರು ಬಡವರಿಗಾಗಿ 650 ಹಾಸಿಗೆಗಳ ಆಸ್ಪತ್ರೆ ನಿರ್ಮಿಸುತ್ತಿದ್ದಾರೆ. ಬಿಲ್ ಇಲ್ಲದ ಸೇವೆ ಒದಗಿಸಲು ಹೇಗೆ ಸಾಧ್ಯವಾಗುತ್ತಿದೆ ಎಂದು ಹಲವರು ಆಶ್ಚರ್ಯಪಡುತ್ತಾರೆ. ಇದೆಲ್ಲ ಹೇಗೆ ಸಾಧ್ಯವಾಯಿತು. ಸ್ವಾಮೀಜಿ ಸರ್ವಶಕ್ತ ಪರಮಾತ್ಮನಿಗೆ ಬ್ಲಾಂಕ್ ಚೆಕ್ ಕೊಟ್ಟಿದ್ದಾರೆ. ಪರಮಾತ್ಮನು ಇವರಿಗೆ ನಿರಂತರವಾಗಿ ವರದಾನ ಮಾಡುತ್ತಲೇ ಇದ್ದಾನೆಂದರು.

ದೇವರ ಅನುಗ್ರಹ ಇರಬೇಕುಇಲ್ಲಿನ ಗೋಶಾಲೆ ನೋಡಿ ನನಗೆ ಬಹಳ ಸಂತೋಷವಾಯಿತು. ನಾನು ಮುಖ್ಯಮಂತ್ರಿಯಾಗಿದ್ದಾಗ ಪುಣ್ಯಕೋಟಿ ಕಾರ್ಯಕ್ರಮ ರೂಪಿಸಿದ್ದೆ. ಗೋಶಾಲೆಗಳಲ್ಲಿರುವ ಪ್ರತಿ ಹಸುವಿನ ನಿರ್ವಹಣೆಗಾಗಿ ವರ್ಷಕ್ಕೆ 11 ಸಾವಿರ ಸಹಾಯಧನ ಕೊಡಲಾಗುತ್ತಿತ್ತು. ಪುಣ್ಯವನ್ನು ಎಲ್ಲರೂ ಸಂಪಾದಿಸಬೇಕು ಎಂದುಕೊಳ್ಳುತ್ತೇವೆ. ಆದರೆ ಅದು ದೇವರ ಅನುಗ್ರಹದಿಂದ ಸಿಗಬೇಕು ಎಂದು ತಿಳಿಸಿದರು.

ಇದೇ ವೇಳೆ ಎಬಿಬಿ ಗ್ರೂಪ್‌ನ ಪರಿಸರ ಮತ್ತು ಸುಸ್ಥಿರತೆ ವ್ಯವಹಾರಗಳ ಅಧಿಕಾರಿ ರೇಣುಕ ಶ್ರೀನಿವಾಸನ್, ಹಣಕಾಸು ವ್ಯವಸ್ಥಾಪಕ ಚುಡಾಮಣಿ ಎನ್.ಕೆ. ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ ‘ಸಿಎಸ್ಆರ್ ಸರ್ಕಲ್ ಆಫ್ ಹಾನರ್’ ಪುರಸ್ಕಾರ ನೀಡಿದರು