ಸಾರಾಂಶ
ಧಾರವಾಡ:
ನಶಿಸಿ ಹೋಗುತ್ತಿರುವ ಕುಸುಬೆ ಬೀಜಗಳ ಉಳಿವಿಗಾಗಿ ಎಲ್ಲೆಡೆ ಹೆಚ್ಚು ಕುಸುಬೆ ಬೆಳೆಯಲು ರೈತರು ಮುಂದಾಗಬೇಕೆಂದು ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.ಜಿಲ್ಲಾ ಬಿಜೆಪಿ ರೈತ ಮೋರ್ಚಾ, ಬೆಂಗಳೂರಿನ ನಾಗರಭಾವಿ ಹೊಯ್ಸಳನಗರದ ದೇಸಿರಿ ನ್ಯಾಚುರಲ್ಸ್ ಸಂಸ್ಥೆ, ಜೀರಿಗವಾಡದ ಧಾರವಾಡ ತಾಲೂಕು ರೈತ ಉತ್ಪಾದಕ ಕಂಪನಿ ಹಾಗೂ ಕುಸುಬೆ ಬೆಳೆ ಪುನಶ್ಚೇತನ ಅಭಿಯಾನದ ಜಂಟಿ ಆಶ್ರಯದಲ್ಲಿ ಜೀರಿಗವಾಡ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಆಯ್ದ 100 ಜನ ರೈತರಿಗೆ ಕುಸುಬೆ ಬೀಜಗಳನ್ನು ಉಚಿತ ವಿತರಿಸಿ ಮಾತನಾಡಿದರು. ಮನುಕುಲದ ಆರೋಗ್ಯಕ್ಕೆ ಪೂರಕವಾಗಿರುವ ಕುಸುಬೆ ಎಣ್ಣೆ ಬಳಕೆ ಅಧಿಕಗೊಳ್ಳಬೇಕು ಎಂದರು.ಬಿಜೆಪಿ ರೈತ ಮೋರ್ಚಾ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ವಿದ್ಯಾ ವಿ ಎಂ. ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ರಸಾಯನಿಕ ಮುಕ್ತವಾದ ನೈಸರ್ಗಿಕ ಕೃಷಿ ಪ್ರೋತ್ಸಾಹಿಸಲು ‘ನ್ಯಾಷನಲ್ ಮಿಷನ್ ಆನ್ ನ್ಯಾಚುರಲ್ ಫಾರ‍್ಮಿಂಗ್’ ಸ್ಥಾಪಿಸಿ ನೈಸರ್ಗಿಕ ಕೃಷಿ ಮಾಡುವ ರೈತರಿಗೆ ಎಕರೆಗೆ ₹ 4 ಸಾವಿರ ಪ್ರೋತ್ಸಾಹಧನ ನೀಡುತ್ತಿದ್ದಾರೆ. ಕುಸುಬೆ ನಮ್ಮ ಪಾರಂಪರಿಕ ಎಣ್ಣೆ ಬೀಜದ ಬೆಳೆ. ಸಂಪೂರ್ಣ ಔಷಧೀಯ ಗುಣ ಹೊಂದಿದ್ದು, ಕುಸುಬೆಯ ಹಿಂಡಿ ಜಾನುವಾರುಗಳಿಗೂ ಶ್ರೇಷ್ಠ ಪೋಷಕ ಆಹಾರ. ಕಳೆದ ಎರಡು ದಶಕಗಳಲ್ಲಿ ಕುಸುಬೆ ಕೃಷಿ ಬಹಳಷ್ಟು ಕ್ಷೀಣಿಸಿದೆ. ರೈತರು ಹೆಚ್ಚು ಎಣ್ಣೆ ಕಾಳು ಬೆಳೆಯಬೇಕೆಂಬ ಉದ್ದೇಶದಿಂದ ಬಿಜೆಪಿ ರೈತ ಮೋರ್ಚಾ ಕುಸುಬೆ ಬೆಳೆ ಪುನಶ್ಚೇತನ ಅಭಿಯಾನ ಆರಂಭಿಸಿದ್ದು, ನೈಸರ್ಗಿಕವಾಗಿ ಹೆಚ್ಚು ಕುಸುಬೆ ಬೆಳೆಯಲು ರೈತರು ಆಸಕ್ತಿ ಹೊಂದಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಗಿರೀಶಕುಮಾರ ಬುಡರಕಟ್ಟಿಮಠ ಮಾಹಿತಿ ನೀಡಿ, ರೈತರು ತಮ್ಮ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವುದಕ್ಕೆ ಪೂರಕವಾಗಿ ಸಂಸ್ಕರಣ ಘಟಕ ಸ್ಥಾಪಿಸಲು ಪಡೆದ ಸಾಲದ ಮೇಲೆ ಶೇ. 50ರಷ್ಟು ಸಬ್ಸಿಡಿ ಲಭಿಸಲಿದೆ. ಜತೆಗೆ ಕೇಂದ್ರ ಸರ್ಕಾರದ ಅಗ್ರಿಕಲ್ಚರ್ ಇನ್ಫಾಸ್ಟ್ರಕ್ಚರ್ ಫಂಡ್(ಎಐಎಫ್) ಯೋಜನೆಯ ಸಾಲಕ್ಕೂ ಶೇ. 3ರಷ್ಟು ಬಡ್ಡಿಯ ವಿನಾಯತಿ ಲಭಿಸಲಿದೆ ಎಂದರು.ತಾಲೂಕು ರೈತ ಉತ್ಪಾದಕ ಕಂಪನಿಯ ಪ್ರಭಾಕರ ದೇಶಪಾಂಡೆ, ನವೀನಕುಮಾರ ಎಚ್.ಆರ್., ಶಶಿಮೌಳಿ ಕುಲಕರ್ಣಿ, ಮಹಾದೇವಪ್ಪ ದಂಡಿನ, ರೈತ ಮುಖಂಡರಾದ ನಿಂಗಪ್ಪ ಸುತಗಟ್ಟಿ, ಶಂಕರಕುಮಾರ ದೇಸಾಯಿ, ಈಶ್ವರ ಮಾಲಣ್ಣವರ, ಈರನಗೌಡ ಪಾಟೀಲ ಮಾತನಾಡಿದರು.