ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ದಕ್ಷಿಣ ಮಧ್ಯ ರೈಲ್ವೆಯ ಮಹಾಪ್ರಬಂಧಕರ ಅಧ್ಯಕ್ಷತೆಯಲ್ಲಿ ಸಿಕಂದರಾಬಾದ್‌ನಲ್ಲಿ ಗುರುವಾರ ನಡೆದ ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯ ಸಂಸದರ ಸಭೆಯಲ್ಲಿ ಭಾಗವಹಿಸಿದ ಸಂಸದ ಖಂಡ್ರೆ ಅವರು ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿದರು.ಬೀದರ್ ಮತ್ತು ಇತರ ಪ್ರಮುಖ ನಗರಗಳ ನಡುವಿನ ರೈಲು ಸಂಚಾರವನ್ನು ಹೆಚ್ಚಿಸುವ ಕುರಿತು ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಬೀದರ್ ಜಿಲ್ಲೆಯಿಂದ ಪ್ರತಿದಿನ ಸಾವಿರಾರು ಜನರು ಪ್ರಯಾಣಿಸುತ್ತಿದ್ದಾರೆ. ಪ್ರಸ್ತುತ, ಬೀದರ್- ಯಶವಂತಪುರ (16572) ರೈಲು ವಾರದಲ್ಲಿ ನಾಲ್ಕು ಬಾರಿ ಬೀದರ್‌ನಿಂದ ಹಾಗೂ ಮೂರು ಬಾರಿ ಲಾತೂರಿನಿಂದ ಸಂಚರಿಸುತ್ತಿದೆ. ಆದರೆ, ಬೀದರ್‌ನಿಂದ ಬೆಂಗಳೂರಿಗೆ ಪ್ರಯಾಣಿಸುವ ಜನಸಂಖ್ಯೆಗೆ ಅನುಗುಣವಾಗಿ ಈ ರೈಲು ಸಾಕಷ್ಟು ಅನುಕೂಲಕರವಲ್ಲ. ಆದ್ದರಿಂದ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಬೀದರ್-ಯಶವಂತಪುರ (16578) (ವಯಾ ಕಲಬುರಗಿ) ರೈಲು ಸೇವೆಯನ್ನು ಪ್ರತಿದಿನಕ್ಕೆ ವಿಸ್ತರಿಸಲು ಹಾಗೂ ಪ್ರಯಾಣಿಕರಿಗೆ ಹಿತಕರ ಸಮಯವನ್ನು ನೀಡಲು ಸೂಚಿಸಿದರು. ಇದೇ ವೇಳೆ, ಬೀದರ್-ಬೆಂಗಳೂರು ಹೊಸ ವಂದೇ ಭಾರತ್ ರೈಲು ಸೇವೆಯನ್ನು ಪ್ರಾರಂಭಿಸುವ ಕುರಿತು ಚರ್ಚಿಸಿದರು.
ಪ್ರಸ್ತುತ ಬೀದರ್-ಮುಂಬೈ ರೈಲು ವಾರದಲ್ಲಿ ಮೂರು ಬಾರಿ ಸಂಚರಿಸುತ್ತಿದ್ದು, ಈ ಮಾರ್ಗದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಈ ರೈಲು ಸೇವೆಯನ್ನು ಪ್ರತಿದಿನಕ್ಕೆ ವಿಸ್ತರಿಸುವ ಅಗತ್ಯವಿದೆ ಎಂದು ತಿಳಿಸಿದರು.ಇದಲ್ಲದೇ ತಾಂಡೂರು-ಜಹೀರಾಬಾದ್ ಹೊಸ ರೈಲು ಮಾರ್ಗವನ್ನು ಚಿಂಚೋಳಿ ಮೂಲಕ ಸಾಗಿಸಲು ಪ್ರಸ್ತಾಪಿಸಿ, ಇದು ಆ ಪ್ರದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ ಎಂದರು. ಖಾನಾಪುರಿನ ಪಿಟ್ ಲೈನ್ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲು ಕೂಡ ಸೂಚಿಸಿದರು.
ಬೀದರ್‌ನ ನೇರ ರೈಲು ಸಂಪರ್ಕವು ರಾಷ್ಟ್ರೀಯ ರಾಜಧಾನಿಗೆ ಅತ್ಯಂತ ಅವಶ್ಯಕವಾಗಿದ್ದು, ದಕ್ಷಿಣ ಎಕ್ಸಪ್ರೆಸ್ (12721) ರೈಲನ್ನು ಬೀದರ್‌ವರೆಗೆ ವಿಸ್ತರಿಸಲು ಸಂಸದ ಖಂಡ್ರೆ ಒತ್ತಾಯಿಸಿದರು.ಬೀದರ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ (ಎಲ್‌ಸಿ) ಗೇಟ್, ಆರ್‌ಒಬಿ ಮತ್ತು ರೈಲು ಅಂಡರ್‌ಬ್ರಿಡ್ಜ್‌ಗಳ (ಆರ್‌ಯುಬಿ) ನಿರ್ಮಾಣ ಅಥವಾ ಸುಧಾರಣೆಗೆ ಒಪ್ಪಿಗೆ ನೀಡಲು ಹಾಗೂ ತಕ್ಷಣದ ಅನುಮೋದನೆಗೆ ಆಗ್ರಹಿಸಿದರು.