ಮಂಗಳೂರು: ಸಹಕಾರ ಮನೋಭಾವ ಎಲ್ಲರಲ್ಲೂ ಇರಬೇಕು. ಸಹಕಾರಿ ಸಂಸ್ಥೆಯ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿ ಸಮಾಜದ ಜೊತೆ ಸಹಕಾರಿ ಮನೋಭಾವದಿಂದ ಕೆಲಸ ಮಾಡಬೇಕು. ಕೇಂದ್ರದಲ್ಲಿ ಸಹಕಾರ ಸಚಿವಾಲಯ ಆರಂಭವಾಗಿ ಸಹಕಾರ ಸಚಿವರಾದ ನಂತರ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸಹಕಾರ ಕ್ಷೇತ್ರ ಇನ್ನಷ್ಟು ಬಲಶಾಲಿಯಾಗಿ ಹೊರಹೊಮ್ಮಲು ಸಹಕಾರ ನೀತಿ ಕಾರಣವಾಗಲಿದೆ. ಜನಸಾಮಾನ್ಯರು ಸಹಕಾರಿ ಸಂಘಗಳಿಗೆ ಸಾಲ ಕೇಳಲು ಬರುವಾಗ ನಗು ಮುಖದ ಸೇವೆ ನೀಡಿ ಸಹಕಾರದ ಬೆಳವಣಿಗೆಗೆ ಕಾರಣವಾಗಬೇಕು. ಕ್ರೀಡಾಕೂಟದಲ್ಲಿ ಪರಸ್ಪರ ಕ್ರೀಡಾ ಮನೋಭಾವದಿಂದ ಪಾಲ್ಗೊಂಡು ಕ್ರೀಡಾಸ್ಫೂರ್ತಿ ಮೆರೆಯಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.ಸಹಕಾರ ಭಾರತಿ ಮಂಗಳೂರು ಮಹಾನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆ (ಗ್ರಾಮಾಂತರ) ಸಹಭಾಗಿತ್ವದಲ್ಲಿ ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿಗಾಗಿ ಅಡ್ಯಾರ್‌ನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ದ.ಕ. ಜಿಲ್ಲಾ ಮಟ್ಟದ ‘ಸಹಕಾರಿ ಕ್ರೀಡೋತ್ಸವ- ೨೦೨೬’ ವನ್ನು ಧ್ವಜಾರೋಹಣ ನೆರವೇರಿಸಿ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ ಸುಪ್ರೀತ್ ಆಳ್ವ ಪೊನ್ನೋಡಿ ಕ್ರೀಡಾ ಜ್ಯೋತಿ ಪ್ರಜ್ವಲನೆ ಮಾಡಿ ಮಾತನಾಡಿ, ದೇಶವು ಕ್ರೀಡಾ ಕ್ಷೇತ್ರದಲ್ಲಿ ಬಲಶಾಲಿಯಾಗಿ ಬೆಳೆಯುತ್ತಿದೆ. ಸಹಕಾರಿಗಳ ಈ ಕ್ರೀಡಾಕೂಟ ಅದಕ್ಕೆ ಪೂರಕವಾಗಿ ನಡೆಯಲಿ ಎಂದು ಹೇಳಿದರು. ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆ ಅಧ್ಯಕ್ಷ ಜಿ.ಆರ್. ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಟ್ಟು ಭಾರತದಲ್ಲಿ ಸುಮಾರು ೩೦ ಕೋಟಿಗೂ ಮಿಕ್ಕಿ ಸಹಕಾರಿ ಸದಸ್ಯರಿದ್ದಾರೆ. ೮.೫ ಲಕ್ಷ ಸಹಕಾರಿಗಳು ನಾನಾ ಕ್ಷೇತ್ರಗಳಲ್ಲಿ ಕಾರ್ಯವೆಸಗುತ್ತಿದೆ. ೧೯೭೮ರಲ್ಲಿ ಪ್ರಾರಂಭವಾಗಿ ಇದೀಗ ೬೫೦ ಜಿಲ್ಲೆಗಳಲ್ಲಿ ತನ್ನ ಸಂಘಟನೆ ಹೊಂದಿದ್ದು, ಬಹಳ ಪರಿಣಾಮಕಾರಿಯಾಗಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಹಾಗೂ ಕ್ಷಮತೆಗೆ ತನ್ನನ್ನು ತಾನು ತೊಡಗಿಸಿಕೊಂಡಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಸಹಕಾರಿ ಕ್ರೀಡೋತ್ಸವವನ್ನು ಆಯೋಜಿಸುತ್ತಿದ್ದೇವೆ ಎಂದರು. ಸಹಕಾರ ಭಾರತಿ ರಾಜ್ಯ ಸಹ ಕಾರ್ಯದರ್ಶಿ ಗಣೇಶ ಶೆಣೈ ಇದ್ದರು.

ದ.ಕ. ಜಿಲ್ಲೆ ಅಧ್ಯಕ್ಷ ಬಿ. ಸುಧಾಕರ ರೈ ಬೋಳಂತೂರು ಸ್ವಾಗತಿಸಿದರು. ಮಹಿಳಾ ಪ್ರಮುಖ್ ಸುಭದ್ರಾ ರಾವ್ ವಂದಿಸಿದರು. ಸದಸ್ಯರಾದ ಪ್ರಶಾಂತ್ ಪೈ, ಧನ್ಯ ಕುಲಾಲ್ ನಿರೂಪಿಸಿದರು.