ಸಾರಾಂಶ
ಎಸ್‌ಎಸ್‌ಕೆ ಪಂಚ ಟ್ರಸ್ಟ್ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ ನಡೆಯುತ್ತಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳಗ್ಗೆ 6ಕ್ಕೆ ಪವಮಾನಹೋಮ, ಕೂಷ್ಮಾಂಡ ಹೋಮ ಅದ್ಧೂರಿಯಾಗಿ ನಡೆಯಿತು. ಸಂಜೆ 5ಕ್ಕೆ ಸುದರ್ಶನ ಹೋಮ, ವಿಷ್ಣುಸಹಸ್ರನಾಮ ಪಾರಾಯಣ, ಪಂಜಿನ ಬೆಳಕಿನಲ್ಲಿ ವಿಷ್ಣು ಪೂಜೆ, ಮಂಡಲಪೂಜೆ ಮತ್ತು ಪ್ರವಚನ ಕಾರ್ಯಕ್ರಮ ನಡೆಯಿತು.
ಹುಬ್ಬಳ್ಳಿ: ನಗರದ ದಾಜಿಬಾನಪೇಟದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಸಹಸ್ರ ಚಂಡಿಕಾಯಾಗದ ಐದನೇ ದಿನ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.
ಎಸ್‌ಎಸ್‌ಕೆ ಪಂಚ ಟ್ರಸ್ಟ್ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ ನಡೆಯುತ್ತಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳಗ್ಗೆ 6ಕ್ಕೆ ಪವಮಾನಹೋಮ, ಕೂಷ್ಮಾಂಡ ಹೋಮ ಅದ್ಧೂರಿಯಾಗಿ ನಡೆಯಿತು. ಸಂಜೆ 5ಕ್ಕೆ ಸುದರ್ಶನ ಹೋಮ, ವಿಷ್ಣುಸಹಸ್ರನಾಮ ಪಾರಾಯಣ, ಪಂಜಿನ ಬೆಳಕಿನಲ್ಲಿ ವಿಷ್ಣು ಪೂಜೆ, ಮಂಡಲಪೂಜೆ ಮತ್ತು ಪ್ರವಚನ ಕಾರ್ಯಕ್ರಮ ನಡೆಯಿತು.ಸಹಸ್ರ ಚಂಡಿಕಾಯಾಗದ ಪೂಜಾ ಕಾರ್ಯಗಳ ನೇತೃತ್ವ ವಹಿಸಿರುವ ಬೆಂಗಳೂರಿನ ವೇದಬ್ರಹ್ಮ ಶ್ರೀ ಚಂದ್ರೇಶ ಶರ್ಮಾ, ಹುಬ್ಬಳ್ಳಿಯ ವೇದಬ್ರಹ್ಮ ಶ್ರೀ ರವೀಂದ್ರಾಚಾರ್ಯ ಅವರನ್ನೊಳಗೊಂಡ 100 ಪುರೋಹಿತರಿಂದ 1 ಸಾವಿರ ಸಂಖ್ಯೆ ಶ್ರೀ ದುರ್ಗಾಸಪ್ತಶತೀ ಪಾರಾಯಣದ ಸಂಖ್ಯಾ ಪರಿಪೂರ್ತಿಗಾಗಿ ಪಾರಾಯಣವು 3ನೇ ದಿನವು ಮುಂದುವರಿಯಿತು.
ಶ್ರೀದೇವಿಗೆ ನಿತ್ಯ ಬೆಳಗ್ಗೆ ಪಂಚಾಮೃತ ಅಭಿಷೇಕ, ಮಹಾಭಿಷೇಕ, ವಿಶೇಷ ಅಲಂಕಾರ, ವಿಶೇಷ ನೈವೇದ್ಯ, ಮಹಾಮಂಗಳಾರತಿ, ದೇವಿಯ ಸಾನ್ನಿಧ್ಯ ವೃದ್ಧಿಗೆ ಕಲಾ ಹೋಮಾದಿಗಳು ನಡೆದವು. ಸಂಪೂರ್ಣ ಚತುರ್ವೇದ ಪಾರಾಯಣ, ಮಾರ್ಕಂಡೇಯ ಪುರಾಣ ಪಾರಾಯಣ ನಡೆಯಿತು. ನಂತರ 250 ದಂಪತಿಗಳಿಂದ ಸಂಕಲ್ಪ ಪೂಜೆ ನಡೆಯಿತು. ಸಾವಿರಾರು ಜನ ಭಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು.ಸಮಾರಂಭದಲ್ಲಿ ಎಸ್‌ಎಸ್‌ಕೆ ಪಂಚ ಟ್ರಸ್ಟ್ ಕಮೀಟಿ ಗೌರವ ಕಾರ್ಯದರ್ಶಿ ಭಾಸ್ಕರ ಎನ್. ಜಿತೂರಿ, ಜಾಯಿಂಟ್ ಚೀಫ್ ಟ್ರಸ್ಟಿ ನೀಲಕಂಠ ಜಡಿ, ಚೀಫ್ ಟ್ರಸ್ಟಿ ತಾರಾಸಾ ದೋಂಗಡಿ, ಕೋಶಾಧಿಕಾರಿ ಅಶೋಕ ಕೆ. ಕಲಬುರ್ಗಿ, ಟ್ರಸ್ಟಿಗಳಾದ ನಾಗೇಂದ್ರ ಹಬೀಬ, ಅಶೋಕ ಪವಾರ ಹಾಗೂ ಪಂಚಾಯಿತಿ ಘಟಕದ ಹಿರಿಯರು, ಯುವಕರು, ಮಹಿಳಾ ಮಂಡಳ ಸದಸ್ಯರು ಭಾಗವಹಿಸಿದ್ದರು.
ಇಂದಿನ ಕಾರ್ಯಕ್ರಮ: ಮೇ 8ರಂದು ಬೆಳಗ್ಗೆ 6ಕ್ಕೆ ಶ್ರೀರುದ್ರಪಾರಾಯಣ, ಶ್ರೀರುದ್ರ ಏಕಾದಶಿ ಹೋಮ ಸಂಜೆ 5ಕ್ಕೆ ಶ್ರೀ ದುರ್ಗಾದೇವಿ ದೇವಸ್ಥಾನದ ಹಿಂದಿನ ಶಾಲೆಯ ಆವರಣದಲ್ಲಿ ಶ್ರೀ ಸಹಸ್ರಚಂಡಿಕಾ ಯಾಗದ ಕಲಶ ಸ್ಥಾಪನೆ, ಮಂಡಲಾರಾಧನೆ, ಅಷ್ಟಾವಧಾನ ಸೇವೆ, ಹೋಮ ತಯಾರಿ ನಡೆಯಲಿದೆ. ಸಂಜೆ 6ರಿಂದ ರಾತ್ರಿ 8ರ ವರೆಗೆ ಪಂಜಿನ ಬೆಳಕಿನಲ್ಲಿ ಉಯ್ಯಾಲೆಯಲ್ಲಿರುವ ಅಮ್ಮನವರ ಪೂಜೆ, ಮಂಡಲಪೂಜೆ ಮತ್ತು ಗುರುವೃಂದದವರಿಂದ ವಿಶೇಷ ಪ್ರವಚನ ನಡೆಯಲಿದೆ.