ಕನ್ನಡಪ್ರಭ ವಾರ್ತೆ ಮೈಸೂರು
ಬೆಂಕಿ ಅವಘಡದಲ್ಲಿ ಮೃತಪಟ್ಟ ಇಬ್ಬರ ಮೃತದೇಹದ ಮರಣೋತ್ತರ ಪರೀಕ್ಷೆಯು ಮೈಸೂರಿನ ಕೆ.ಆರ್. ಆಸ್ಪತ್ರೆ ಶವಾಗಾರದಲ್ಲಿ ಮಂಗಳವಾರ ನಡೆಯಿತು.ದಟ್ಟಗಳ್ಳಿಯ ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್ ಮಾರಾ ರೆಸ್ಟೋ ಪಬ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಡಾರ್ಜಲಿಂಗ್ ಮೂಲದ ಸಾಹಿನ್ (26) ಮತ್ತು ನೇಪಾಳ ಮೂಲದ ಪ್ರಕಾಶ್ (24) ಮೃತಪಟ್ಟವರು.
ಡಾರ್ಜಿಲಿಂಗ್ ನ ಆರೆಂಜ್ ವ್ಯಾಲೆ ಊರಿನ ಸಾಹಿನ್ ಗೆ ತಂದೆ, ತಾಯಿ, ತಮ್ಮ, ಅಕ್ಕ ಇದ್ದಾರೆ. ಸಾಹಿನ್ ಅಕ್ಕ ಅನಾಮಿಕ ಮುಖ್ಯಾ ಬೆಂಗಳೂರಿನ ಪಾರ್ಲರ್ ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಸಾಹಿನ್ ಐದು ವರ್ಷದ ಹಿಂದೆ ಬೆಂಗಳೂರಿಗೆ ಬಂದು ಕೆಲಸದಲ್ಲಿ ಮಾಡಿಕೊಂಡಿದ್ದು, ಕಳೆದ 6 ತಿಂಗಳಿಂದ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದರು.ಚಂಡೀಗಡದ ಕುದ್ಧಾ ಲಾಹೋರಾ ಗ್ರಾಮದಲ್ಲಿ ನೆಲೆಸಿರುವ ಪ್ರಕಾಶ್ ತಂದೆ ರಮೇಶ್ ಕೇಸಿ, ಮೂಲತಃ ನೇಪಾಳದವರು.
ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ನಂತರ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ತೆರಳಿ, ಅಲ್ಲಿಂದ ವಿಮಾನದಲ್ಲಿ ಮೃತದೇಹವನ್ನು ಅವರ ಹುಟ್ಟೂರಿಗೆ ಕೊಂಡೊಯ್ಯಲು ರೆಸ್ಟೋರೆಂಟ್ ಮಾಲೀಕರೇ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
----
ಪಬ್, ಕಟ್ಟಡದ ಮಾಲೀಕರ ವಿರುದ್ಧ ಪ್ರಕರಣ ದಾಖಲುಅಗ್ನಿ ಅವಘಡ ಸಂಬಂಧಿಸಿ ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್ ನ ಮಾರಾ ರೆಸ್ಟೋ ಪಬ್ ಮಾಲೀಕ ಪ್ರೀತಂ ಪುನೀತ್ ಮತ್ತು ಕಟ್ಟಡದ ಮಾಲೀಕ ಕೇಶವಮೂರ್ತಿ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ನಿವಾಸಿ ನೀಡಿದ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ನೇಹಿತೆಯೊಂದಿಗೆ ಮಧ್ಯಾಹ್ನ ಊಟಕ್ಕಾಗಿ ಮಾರಾ ರೆಸ್ಟೋರೆಂಟ್ ಗೆ ತೆರಳಿದ್ದೆ. ಅಲ್ಲಿ ತೆರಳಿದ ಕೆಲ ಸಮಯದಲ್ಲಿ ವಿದ್ಯುತ್ ಬೋರ್ಡ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಅಲಂಕಾರಕ್ಕಾಗಿ ಬಳಸಿದ್ದ ಒಣ ಹುಲ್ಲಿಗೆ ಬೆಂಕಿ ತಗುಲಿ ಕ್ಷಣಾರ್ಧದಲ್ಲಿ ಎಲ್ಲೆಡೆ ಬೆಂಕಿ ಆವರಿಸಿತು. ರೆಸ್ಟೋರೆಂಟ್ ನಲ್ಲಿ ಬೆಂಕಿ ತಗುಲಿದಾಗ ತುರ್ತಾಗಿ ಹೊರ ಬರಲು ತುರ್ತು ನಿರ್ಗಮನ ಬಾಗಿಲು ಇರಲಿಲ್ಲ. ಫೈರ್ ಎಸ್ಟಿಂಗ್ಯುಷರ್ ಅಥವಾ ಫೈಯರ್ ಅಲರಾಂ ಇರಲಿಲ್ಲ. ಯಾವುದೇ ಮುನ್ನೆಚ್ಚರಿಕೆ ಹಾಗೂ ಸುರಕ್ಷತೆ ಇಲ್ಲದ ಕಾರಣ, ಮಾಲೀಕರ ನಿರ್ಲಕ್ಷ್ಯದಿಂದ ಇಬ್ಬರು ಮೃತಪಟ್ಟಿದ್ದಾರೆ. 6 ಮಂದಿ ಗಾಯಗೊಂಡಿದ್ದಾರೆ. ಹೀಗಾಗಿ ಮಾಲೀಕರ ವಿರುದ್ಧ ಕ್ರಮ ವಹಿಸಬೇಕು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.