ಮಕ್ಕಳ ಸೃಜನಶೀಲತೆಗೆ ಸಾಹಿತ್ಯ ಸಂಭ್ರಮ ಸಹಕಾರಿ: ಜಿಪಂ ಸಿಇಒ ಸದಾಶಿವ ಪ್ರಭು

| Published : Feb 22 2024, 01:48 AM IST

ಮಕ್ಕಳ ಸೃಜನಶೀಲತೆಗೆ ಸಾಹಿತ್ಯ ಸಂಭ್ರಮ ಸಹಕಾರಿ: ಜಿಪಂ ಸಿಇಒ ಸದಾಶಿವ ಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ಪುಸ್ತಕ ಓದುವ ಹಾಗೂ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕಥೆ, ಕಾದಂಬರಿ, ಕವನಗಳನ್ನು ಬರೆಯಬೇಕು.

ಹೊಸಪೇಟೆ: ಮೊಬೈಲ್ ಗೀಳು ಜಾಸ್ತಿ ಆಗುತ್ತಿರುವ ಇಂದಿನ ಕಾಲದಲ್ಲಿ ಮಕ್ಕಳ ಸೃಜನಶೀಲತೆಗೆ ಹೆಚ್ಚಿನ ಒತ್ತನ್ನು ಈ ಸಾಹಿತ್ಯ ಸಂಭ್ರಮ ನೀಡಲಿದೆ. ಓದಿಗೆ ಯಾವುದೇ ಪರ್ಯಾಯವಿಲ್ಲ. ನಾವು ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಓದು ಅತೀ ಮುಖ್ಯ. ಇಂತಹ ಓದು, ಬರವಣಿಗೆ ಮಕ್ಕಳಲ್ಲಿ ಮೂಡಿಸಲು ಮಕ್ಕಳ ಸಾಹಿತ್ಯ ಸಂಭ್ರಮ ಅನುಕೂಲಕರವಾಗಿದೆ ಎಂದು ವಿಜಯನಗರ ಜಿಪಂ ಸಿಇಒ ಸದಾಶಿವ ಪ್ರಭು ಬಿ. ತಿಳಿಸಿದರು.

ತಾಲೂಕಿನ ಮಲಪನಗುಡಿಯ ಸ.ಹಿ.ಪ್ರಾ .ಶಾಲೆಯಲ್ಲಿ ವಿಜಯನಗರ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಂಟಿ ಸಹಯೋಗದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಥೆ ಕಟ್ಟೋಣ, ಕವಿತೆ ಕಟ್ಟೋಣ, ನಾನು ರಿಪೋರ್ಟರ್, ನಾಟಕ ಮಾಡೋಣ ಎಂಬ ನಾಲ್ಕು ಕಾರ್ನರ್ ಗಳನ್ನು ರೂಪಿಸಲಾಗಿದೆ. ಆ ಮೂಲಕ ವಿದ್ಯಾರ್ಥಿಗಳು ತಮ್ಮ ಓದು ಮತ್ತು ಬರವಣಿಗೆಗೆ ಆದ್ಯತೆ ನೀಡಿ ಸೃಜನಶೀಲತೆಗೆ ಆದ್ಯತೆ ನೀಡಬಲ್ಲರು ಎಂದರು.

ತಾಪಂ ಇಒ ಎಂ. ಉಮೇಶ್ ಮಾತನಾಡಿ, ಹೊಸಪೇಟೆ ತಾಲೂಕಿನಲ್ಲಿ ನಡೆಯುತ್ತಿರುವ ಮಕ್ಕಳ ಸಾಹಿತ್ಯ ಸಂಭ್ರಮದ ಕಾರ್ಯಕ್ರಮಕ್ಕಾಗಿ ಬೇಕಾದ ಎಲ್ಲ ಪರಿಕರಗಳನ್ನು ಮತ್ತು ಸೌಲಭ್ಯಗಳನ್ನು ಒದಗಿಸಲಾಗಿದೆ. ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಆಗಲಿವೆ ಎಂದರು.

ಬಿಇಒ ಎಂ. ಚನ್ನಬಸಪ್ಪ ಮಾತನಾಡಿ, ಈ ಸಾಹಿತ್ಯ ಸಂಭ್ರಮದ ಚಟುವಟಿಕೆಗಳು ನಮ್ಮ ಸರ್ಕಾರಿ ಶಾಲೆಯ ಮಕ್ಕಳಿಗೆ ಹೊಸ ದಾರಿಯನ್ನು ತೋರಲಿದೆ. ಮಕ್ಕಳು ಪುಸ್ತಕ ಓದುವ ಹಾಗೂ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕಥೆ, ಕಾದಂಬರಿ, ಕವನಗಳನ್ನು ಬರೆಯಬೇಕು. ಮಕ್ಕಳಲ್ಲಿ ಈಗಿನಿಂದಲೇ ಸೃಜನಶೀಲತೆ ಬೆಳೆಸಿದರೆ ಮುಂದೆ ಅವರು ನಾಡಿನ ಸಾಹಿತ್ಯ ಲೋಕ ಹಾಗೂ ಕಲಾ ಲೋಕದಲ್ಲಿ ಹೆಸರು ಮಾಡಬಲ್ಲರು ಎಂದರು.

ಭಾರತ ಜ್ಞಾನ, ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷೆ ಎಚ್. ಸೌಭಾಗ್ಯಲಕ್ಷ್ಮಿ ಮಾತನಾಡಿ, ಮಕ್ಕಳ ಸಾಹಿತ್ಯ ಸಂಭ್ರಮದ ಯೋಜನೆಯ ರೂಪಿಸಲು ಆರು ತಿಂಗಳಿನಿಂದ ಶ್ರಮಪಡಲಾಗಿದೆ. ರಾಜ್ಯದ ವಿವಿಧ ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಸಾಹಿತ್ಯ ಸಂಭ್ರಮಕ್ಕೆ ಬೇಕಾದ ಕೈಪಿಡಿಯನ್ನು ತಯಾರಿಸಿದ್ದಾರೆ. ಮಕ್ಕಳು ಸುಲಭ ರೀತಿಯಲ್ಲಿ ಸಾಹಿತ್ಯ ರಚಿಸುವಂತೆ ಅನೇಕ ಚಟುವಟಿಕೆಗಳನ್ನು ಇದರಲ್ಲಿ ರೂಪಿಸಲಾಗಿದೆ. ಈ ಕಾರ್ಯಕ್ರಮದ ಉದ್ದೇಶ ಶಿಕ್ಷಕರ ಬೋಧನಾ ವಿಧಾನವನ್ನು ತಿಳಿಸುವುದಾಗಿದೆ. ಮಕ್ಕಳ ಅಭಿವ್ಯಕ್ತಿಯ ಕ್ರಮವನ್ನು ಚಟುವಟಿಕೆಗಳ ಮೂಲಕ ಅನಾವರಣಗೊಳಿಸುವುದಾಗಿದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಲಪನಗುಡಿಯ ಕಾರ ಮಂಚಪ್ಪ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ಆಹ್ವಾನಿಸಿ ಸನ್ಮಾನಿಸಲಾಯಿತು.

ಮಲಪನನ ಗುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ, ಹಂಪಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್, ಎಂ ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಸುಧಾದೇವಿ, ಗುರುಬಸವರಾಜ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಕಡ್ಲಿ ವೀರಭದ್ರೇಶ, ಪ್ರೌಢಶಾಲಾ ಬಡ್ತಿ ಮುಖ್ಯಗುರುಗಳ ಸಂಘದ ಅಧ್ಯಕ್ಷೆ ಅಕ್ಕಮಹಾದೇವಿ, ವಿಜಯನಗರ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಶೇಖರ್ ಗಿರಡ್ಡಿ, ಮಕ್ಕಳ ಸಾಹಿತ್ಯ ಸಂಭ್ರಮದ ನೋಡಲ್ ಅಧಿಕಾರಿ ಕಾವ್ಯಶ್ರೀ, ಮಧ್ಯಾಹ್ನ ಬಿಸಿಊಟದ ನಿರ್ದೇಶಕ ಸುಧಾಕರ್, ಮೂರು ಪಂಚಾಯಿತಿಗಳ ಪಿಡಿಒಗಳು, ಸಿಆರ್‌ಪಿಗಳು, ಭಾರತ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿ ಡಾ. ಟಿ.ಎಂ. ಉಷಾರಾಣಿ ಇದ್ದರು. ವಿದ್ಯಾವತಿ ಮತ್ತು ಕೆ. ಶಾಂತಲಾ, ಪ್ರಭಾರ ಮುಖ್ಯ ಗುರು ಟಿ. ವಿಶ್ವನಾಥ್ ನಿರ್ವಹಿಸಿದರು.ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸುವ ಉದ್ದೇಶಗ್ರಾಮೀಣ ಭಾಗದ ಗ್ರಂಥಾಲಯಗಳ ಸಬಲೀಕರಣದ ಭಾಗವಾಗಿ ಈ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರಾಜ್ಯಾದ್ಯಂತ ಒಟ್ಟು 75 ತಾಲೂಕುಗಳಲ್ಲಿ ಮಕ್ಕಳ ಶಿಬಿರಗಳನ್ನು ಹಮ್ಮಿಕೊಂಡಿದೆ. ಮಕ್ಕಳಲ್ಲಿ ಸಾಹಿತ್ಯ ಶಕ್ತಿಯನ್ನು ಮೂಡಿಸಿ ಓದುವ ಅಭಿರುಚಿಯನ್ನು ಬೆಳೆಸುವ ಪ್ರಮುಖ ಧ್ಯೇಯೋದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.

ಜೋಡೆತ್ತಿನ ಬಂಡಿಯಲ್ಲಿ ಸಾಹಿತ್ಯ ಸಂಭ್ರಮದ ನಿಮಿತ್ತ ದೊಡ್ಡ ಪುಸ್ತಕದ ಮೆರವಣಿಗೆ ನಡೆಸಲಾಯಿತು. ಮಕ್ಕಳ ನೃತ್ಯ ದೊಂದಿಗೆ ಮಲ್ಲಿಕಾರ್ಜುನ ದೇವಾಲಯ ದಿಂದ ಶಾಲೆ ವರೆಗೆ ಅದ್ಧೂರಿ ಮೆರವಣಿಗೆ ನಡೆಯಿತು. 6 ಆಡಿ ಪುಸ್ತಕದ ಮಾದರಿಯನ್ನು ಬಂಡಿಯಲ್ಲಿಟ್ಟು, ಊರಿನಲ್ಲಿ ಪ್ರದರ್ಶನ ಮಾಡಲಾಯಿತು. ಅಧಿಕಾರಿಗಳು ಮತ್ತು ಮಕ್ಕಳು ಕೋಲಾಟ ಆಡುತ್ತಾ, ಹಾಡುತ್ತಾ ಕುಣಿಯುತ್ತ ಮೆರವಣಿಗೆಯಲ್ಲಿ ಪಾಲ್ಗೊಂಡರು.