ಕನ್ನಡ ಬೆಳೆಸಲು ಸಾಹಿತ್ಯ ಸಮ್ಮೇಳನ ಸಹಕಾರಿ

| Published : Feb 14 2025, 12:30 AM IST

ಸಾರಾಂಶ

ಇಂದಿನ ಕೈಗಾರಿಕರಣ, ಜಾಗತೀಕರಣದ ಪ್ರಭಾವ ಪಟ್ಟಣದಲ್ಲಿ ಹೆಚ್ಚಾಗಿದ್ದು ,ಈಗ ಹಳ್ಳಿಗಳಲ್ಲೂ ಪ್ರಭಾವ ಬೀರುತ್ತಿದೆ, ಅನ್ಯಭಾಷಿಕರು ಗ್ರಾಮಗಳಿಗೆ ವಲಸೆ ಬರುತ್ತಿದ್ದಾರೆ. ಇಂತಹ ವಾತಾವರಣದಲ್ಲಿ ಗ್ರಾಮಗಳಲ್ಲಿ ಉಳಿದಿರುವ ಕನ್ನಡದ ಕಂಪನ್ನು ಉಳಿಸಲು ಇಂತಹ ಸಮ್ಮೇಳನ ಸಹಕಾರಿಯಾಗುತ್ತದೆ. ಕನ್ನಡಿಗರಲ್ಲಿ ಭಾಷಾಭಿಮಾನ ಕಡಿಮೆ ಎನ್ನಲು ಬೇಸರವಾಗುತ್ತದೆ.

ಕನ್ನಡಪ್ರಭ ವಾರ್ತೆ ಮಾಲೂರು

ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎನ್ನುವ ರಾಷ್ಟ್ರಪಿತ ಗಾಂಧೀಜಿ ಅವರ ಮಾತಿನಂತೆ ಗ್ರಾಮಗಳಲ್ಲಿ ಉಳಿದಿರುವ ಕನ್ನಡದ ಕಂಪನ್ನು ಉಳಿಸಿ ಬೆಳೆಸುವ ಮೂಲಕ ಕನ್ನಡ ಅಭಿವೃದ್ಧಿಯ ಕೆಲಸ ಮಾಡಬೇಕಾಗಿದೆ ಎಂದು ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೆ.ಮುನಿಕೃಷ್ಣಪ್ಪ ಹೇಳಿದರು. ಅವರು ತಾಲೂಕಿನ ಅರಳೇರಿ ಗ್ರಾಮದಲ್ಲಿ ಕಸಾಪ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದುವರೆ ಸಾವಿರ ವರ್ಷ ಇತಿಹಾಸವುಳ್ಳ ಕನ್ನಡ ಸಂಸ್ಕೃತಿ ಭಾಷಾಭಿಮಾನ ಇಂದಿಗೂ ಹಳ್ಳಿಗಳಲ್ಲಿ ಕಾಣಸಿಗುತ್ತದೆ ಎಂದರು.

ಕನ್ನಡಿಗರಿಗೆ ಭಾಷಾಭಿಮಾನ ಕೊರತೆ

ಇಂದಿನ ಕೈಗಾರಿಕರಣ, ಜಾಗತೀಕರಣದ ಪ್ರಭಾವ ಪಟ್ಟಣದಲ್ಲಿ ಹೆಚ್ಚಾಗಿದ್ದು ,ಈಗ ಹಳ್ಳಿಗಳಲ್ಲೂ ಪ್ರಭಾವ ಬೀರುತ್ತಿದೆ, ಅನ್ಯಭಾಷಿಕರು ಗ್ರಾಮಗಳಿಗೆ ವಲಸೆ ಬರುತ್ತಿದ್ದಾರೆ. ಇಂತಹ ವಾತಾವರಣದಲ್ಲಿ ಗ್ರಾಮಗಳಲ್ಲಿ ಉಳಿದಿರುವ ಕನ್ನಡದ ಕಂಪನ್ನು ಉಳಿಸಲು ಇಂತಹ ಸಮ್ಮೇಳನ ಸಹಕಾರಿಯಾಗುತ್ತದೆ. ಕನ್ನಡಿಗರಲ್ಲಿ ಭಾಷಾಭಿಮಾನ ಕಡಿಮೆ ಎನ್ನಲು ಬೇಸರವಾಗುತ್ತದೆ. ಆದರೆ ಅದು ವಾಸ್ತವ. ಕನ್ನಡ ಶಾಲೆಗಳಲ್ಲಿ ಕಡಿಮೆಯಾಗುತ್ತಿರುವ ದಾಖಲಾತಿ ಸಂಖ್ಯೆ ಸ್ಥಳೀಯರಿಗೆ ಸ್ಥಳೀಯ ಕೈಗಾರಿಕೆಗಳಲ್ಲಿ ಉದ್ಯೋಗ ಅವಕಾಶ ಸಿಗದಿರುವುದು ಸಾರಿ ಸಾರಿ ಹೇಳುತ್ತಿದೆ ಎಂದರು.

ನಮ್ಮನಾಳುವವರು ಸ್ಥಳೀಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ನಿರೋದ್ಯೋಗ ಸಮಸ್ಯೆ ನೀಗಿಸಬೇಕು. ಸ್ಥಳೀಯರು ಉದ್ಯೋಗ ಆರಿಸಿ ಬಂದ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಜತೆಯಲ್ಲಿ ಅವರಿಗೆ ಕನ್ನಡ ಭಾಷೆ ಅನ್ನದ ಭಾಷೆಯಾಗುವಂತೆ ಮಾಡಬೇಕು ಎಂದರು.ಭಾಷೆಗೆ ಧಕ್ಕೆ ಬಂದಾಗ ಹೋರಾಟ

ಮಾಲೂರು ತಾಲೂಕು ಅತಿ ಹೆಚ್ಚು ಮಂದಿ ಕವಿಗಳು ಮತ್ತು ಸಾಹಿತಿಗಳನ್ನು ಹೊಂದಿರುವ ತಾಲೂಕಾಗಿದೆ. ಕನ್ನಡ ಭಾಷೆ ಸಂಸ್ಕೃತಿಗೆ ಧಕ್ಕೆ ಬಂದಾಗ ಹೋರಾಟ ಮಾಡುವ ಕನ್ನಡ ಮನಸ್ಸುಗಳು ಹೆಚ್ಚಾಗಿವೆ. ಸಾಹಿತ್ಯ ಪ್ರತಿಭೆಗಳಿಗೆ ಅವಕಾಶ ನೀಡುವಲ್ಲಿ ಸಂಘ-ಸಂಸ್ಥೆಗಳು ಶ್ರಮಿಸುತ್ತಿದ್ದು, ಇದರಲ್ಲಿ ರಾಜಕೀಯ ಜನಪ್ರತಿನಿಧಿಗಳ ಸಹಕಾರಗಳನ್ನು ಮರೆಯುವಂತಿಲ್ಲ ಎಂದರು.ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ ಮಾಲೂರು ತಾಲೂಕು ಗಡಿಭಾಗವಾದರೂ ತಮಿಳು-ತೆಲಗು ಭಾಷೆಯ ಪ್ರಭಾವ ಇಲ್ಲದೆ ಕೇವಲ ಕನ್ನಡದ ಕಂಪು ಹರಡಿದೆ. ಇದಕ್ಕೆ ಇಲ್ಲಿನ ಸಂಘ ಸಂಸ್ಥೆಗಳು ಸಾಹಿತಿ ಕ್ಷೇತ್ರದ ಕಾಣಿಕೆ ಬಹಳಷ್ಟಿದೆ. ಜ್ಞಾನಪೀಠ ಪ್ರಶಸ್ತಿ ಪಡೆದ ಮಹನೀಯರ ಜಿಲ್ಲೆಯಲ್ಲಿ ಹುಟ್ಟಿರುವ ತಮಗೆ ತಮ್ಮ ತಾಲೂಕಿನ ಮಾಣಿಕ್ಯ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರ ನೆನೆಪಿನಲ್ಲಿ ಶಾಶ್ವತ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಠ ಎಂದರು.

ಮಾಸ್ತಿ ಗ್ರಾಮಾಭಿವೃದ್ಧಿಗೆ ಯತ್ನ

ಮಾಸ್ತಿಯವರು ಜನಿಸಿದ ಮಾಸ್ತಿ ಗ್ರಾಮ, ಓದಿದ ಶಿವಾರ ಪಟ್ಟಣವನ್ನು ವಿಶೇಷವಾಗಿ ಅಭಿವೃದ್ಧಿಪಡಿಸುವ ಜತೆಗೆ ಮಾಸ್ತಿ ಗ್ರಾಮದಲ್ಲಿ ಇದೇ ೨೧ ರಂದು ಅವರ ಹೆಸರಿನಲ್ಲಿ ನೂತನ ಬಸ್‌ ನಿಲ್ದಾಣ ಲೋಕಾರ್ಪಣೆಗೊಳಿಸುವ ಅವಕಾಶ ನನಗೆ ಸಿಕ್ಕಿದೆ. ತಾಲೂಕಿನಲ್ಲಿ ಕನ್ನಡ ಪರ ಕಾರ್ಯಕ್ರಮಕ್ಕೆ ಸದಾ ಸಹಕಾರ ನೀಡುವುದಾಗಿ ತಿಳಿಸಿದರು.

ಕವಿ ಡಾ.ಚಂದ್ರಶೇಖರ್‌ ನಂಗಲಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಎನ್.ಬಿ.ಗೋಪಾಲಗೌಡ ಆಶಯ ನುಡಿಗಳನ್ನಾಡಿದರು.ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಅರಳೇರಿ ಪಂಚಾಯ್ತಿಯಿಂದ ಕಾರ್ಯಕ್ರಮ ವೇದಿಕೆ ಇದ್ದ ಸರ್ಕಾರಿ ಶಾಲೆವರಗೆ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.ಮಧ್ಯಾಹ್ನ ನಡೆದ ಮೂರು ಗೋಷ್ಠಿಗಳಲ್ಲಿ ಸಾಹಿತಿಗಳು ಕವಿಗಳು ಭಾಗವಹಿಸಿದ್ದರು.ಸಂಜೆ ಸಮಾರೋಪ ಸಮಾರಂಭ ನಡೆಯಿತು.ಕಸಾಪ ತಾಲೂಕು ಅಧ್ಯಕ್ಷ ಹನುಮಂತಯ್ಯ,ಮಾಸ್ತಿ ಕೃಷ್ಣಪ್ಪ,ಡಾ.ನಾ.ಮುನಿರಾಜು, ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಮ್ಮ ರಾಜಪ್ಪ ,ಗೋಪಾಲಕೃಷ್ಣ,ಗೋಪಾಲಪ್ಪ ,ಡಾ.ಎನ್.ಸಿ.ಚಂದ್ರಪ್ಪ ,ಸಿ.ಬಿ.ವೀರಭದ್ರಚಾರಿ,ಎಸ್.ಎನ್.ನಾರಾಯಣಸ್ವಾಮಿ,ಟಿ.ಸಿ.ಮುನಿರಾಜು,ಗಂಗಪ್ಪ ತಳವಾರ್‌,ಮಾ.ಚಿ.ನಾಗರಾಜ್‌,ಗುಲ್ಜಾರ್‌,ಇಂದಿರಮ್ಮ ,ಸುಮಂಗಲಮೂರ್ತಿ,ಜೆ.ಮಂಜುನಾತ್‌,ಎಸ್.ಎಂ.ರಾಜು,ದಯಾನಂದ್‌,ಶಿವಾರ ನಾಣಿ,ಚಾಕನಹಳ್ಳಿ ನಾಗರಾಜ್ ಇನ್ನಿತರರು ಇದ್ದರು.