ಎರಡ್ಮೂರು ವರ್ಷಗಳಲ್ಲಿ ಸೈನಿಕ ಶಾಲೆ ಕಟ್ಟಡ ಪೂರ್ಣ: ಸಚಿವ ಭಗವಂತ ಖೂಬಾ

| Published : Feb 13 2024, 12:46 AM IST

ಎರಡ್ಮೂರು ವರ್ಷಗಳಲ್ಲಿ ಸೈನಿಕ ಶಾಲೆ ಕಟ್ಟಡ ಪೂರ್ಣ: ಸಚಿವ ಭಗವಂತ ಖೂಬಾ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನ ಬಿವಿಬಿ ಕಾಲೇಜಿನ ಆವರಣದಲ್ಲಿ ಸೈನಿಕ ಶಾಲೆ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿ, ಬೀದರ್‌ ನಗರದಲ್ಲಿ ತಿಂಗಳಾಂತ್ಯದಲ್ಲಿ ಮನೆ ಮನೆಗೆ ಗ್ಯಾಸ್‌ ಪೈಪ್‌ಲೈನ್‌ ಕಲ್ಪಿಸಿ, ಸೈನಿಕ ಶಾಲೆಗೆ ಶಿಕ್ಷಣ/ಸಂಸ್ಥೆ ನ್ಯಾಶನಲ್‌ ಸ್ಕೂಲ್‌ನ ಶೇ.60 ವಿದ್ಯಾರ್ಥಿಗಳು ಬರಲ್ಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್‌

ಕೇಂದ್ರ ಸರ್ಕಾರದಿಂದ ಮಂಜೂರಾದ ಸೈನಿಕ ಶಾಲೆಯು ಕೇವಲ ಮಂಜೂರಾತಿ, ಶಿಲಾನ್ಯಾಸಕ್ಕೆ ಸೀಮಿತವಾಗದೇ ಎರಡ್ಮೂರು ವರ್ಷದಲ್ಲಿ ಭವ್ಯವಾದ ಕಟ್ಟಡ ನಿರ್ಮಾಣವಾಗುವ ಭರವಸೆ ಇದೆಯಲ್ಲದೇ, ಇಲ್ಲಿನ ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿವಿಬಿ ಕಾಲೇಜು ಮೈದಾನದಲ್ಲಿ ಸ್ಥಾಪನೆಯಾಗಲಿರುವ ಸೈನಿಕ ಶಾಲೆಯು ಜಿಲ್ಲೆಯ ಗೌರವವನ್ನು ಎತ್ತಿ ಹಿಡಿಯುತ್ತದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.

ಅವರು ಸೋಮವಾರ ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆ ಬಿವಿಬಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಸೈನಿಕ ಶಾಲೆ ಕಟ್ಟಡ ನಿರ್ಮಾಣ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ದೇಶದಲ್ಲಿ ಪ್ರಸಕ್ತ ಸಾಲಿನಲ್ಲಿ ಮಂಜೂರಾದ 23 ಸೈನಿಕ ಶಾಲೆಗಳ ಪೈಕಿ ಬೀದರ್‌ ಕೂಡ ಒಂದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ರಕ್ಷಣಾ ಸಚಿವರ ಸಹಕಾರದಿಂದ ಸಾಕಷ್ಟು ಪ್ರಯತ್ನದ ನಂತರ ಮಂಜೂರಾಗಿದೆ ಎಂದರು.

ಇನ್ನು ಜಿಲ್ಲೆಯ ಅನೇಕ ಯೋಜನೆಗಳು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತಿಬಿಂಬಿಸುವಂತಾಗಿವೆ. ಒಂದೇ ಜಿಲ್ಲೆಯಲ್ಲಿ 12 ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಆಗಿದ್ದು, ರಾಷ್ಟ್ರದಲ್ಲಿಯೇ ಮಾದರಿ. ನದಿಗೆ ಬಾಂದಾರ ಸೇತುವೆ ಕಟ್ಟಿರುವ ಉದಾಹರಣೆಯೇ ಇಲ್ಲ. ಆದರೆ ಕೌಠಾ (ಬಿ) ಗ್ರಾಮದ ಬಳಿ ಮಾಂಜ್ರಾ ನದಿಗೆ ಬಾಂದಾರ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ರಾಸಾಯನಿಕ ಹಾಗೂ ಪ್ಲಾಸ್ಟಿಕ್ ಕೈಗಾರಿಕೋದ್ಯಮದಲ್ಲಿ ಮಾನವ ಸಂಪನ್ಮೂಲದ ಬೇಡಿಕೆ ಪೂರೈಸುವ ಸಿಪೆಟ್‌ ಕಾಲೇಜು ಬೀದರ್‌ನಲ್ಲಿ ಆರಂಭಿಸಿದ್ದು, ಇಲ್ಲಿನವರಿಗೆ ಸಾಕಷ್ಟು ಉದ್ಯೋಗ ಒದಗಿಸಿ ನಿರುದ್ಯೋಗ ಸಮಸ್ಯೆ ದೂರ ಮಾಡಲಾಗುತ್ತದೆ ಎಂದು ತಿಳಿಸಿದರು.

ಬೀದರ್‌ ನಗರದ ಅಭಿವೃದ್ಧಿಗೆ 225ಕೋಟಿ ರು.ಗಳ ಒಳಚರಂಡಿ, ರಸ್ತೆ, ಉದ್ಯಾನ ವನಗಳ ಅಭಿವೃದ್ಧಿಗೆ ನೀಡಲಾಗಿದೆ. ವಿಮಾನಯಾನ ಕೂಡ ಕಲಬುರಗಿಗಿಂತ ಮುನ್ನ ಬೀದರ್‌ಗೆ ಉಡಾನ್ ಜಾರಿ. 10 ವರ್ಷದಲ್ಲಿ 13 ಹೊಸ ರೈಲುಗಳು ಆರಂಭಿಸಿರುವದು ಐತಿಹಾಸಿಕ. ಬೀದರ್‌ ಕಲಬುರಗಿ ರೈಲ್ವೆ ಲೈನ್‌ ಕಾಮಗಾರಿ 20 ವರ್ಷಗಳಿಂದ ಮಂದಗತಿಯಲ್ಲಿ ನಡೆಯುತ್ತಿದ್ದನ್ನು ನಾನು ಸಂಸದನಾದ ಮೇಲೆ ಕೇವಲ ಎರಡು ವರ್ಷದಲ್ಲಿ 1650ಕೋಟಿ ರು.ಗಳ ಯೋಜನೆ ಪೂರ್ಣಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಳಿಸಿದ್ದು ಇತಿಹಾಸ ಸೃಷ್ಟಿಸಿದಂತಿದೆ ಎಂದು ವಿವರಿಸಿದರು.

ಬೀದರ್‌ ನಗರದಲ್ಲಿ ತಿಂಗಳಾಂತ್ಯದಲ್ಲಿ ಮನೆ ಮನೆಗೆ ಗ್ಯಾಸ್‌ ಪೈಪ್‌ಲೈನ್‌ :

ಇದೇ ತಿಂಗಳ ಕೊನೆ ವಾರದಲ್ಲಿ ಬೀದರ್‌ ನಗರದ ಪ್ರತಿ ಮನೆಗೆ ಗ್ಯಾಸ್‌ ಪೂರೈಕೆ ಪೈಪ್‌ಲೈನ್‌ ಸೌಲಭ್ಯ ಆರಂಭಿಸಲಾಗುವದು. ಅಲ್ಲದೆ ಇಡೀ ದಕ್ಷಿಣ ಭಾರತದಲ್ಲಿ ಅತೀ ಹೆಚ್ಚಿನ ಸಾಮರ್ಥ್ಯದ ಗ್ರಿಡ್‌ ಪಾವರ್‌ ಸ್ಟೇಷನ್‌ ಔರಾದ್‌ ತಾಲೂಕಿನಲ್ಲಿ 100 ಸಾವಿರ ಕೋಟಿ ರು.ಗಳ ವೆಚ್ಚದಲ್ಲಿ 10ಸಾವಿರ ಕೋಟಿ ರು.ಗಳ ಹೂಡಿಕೆಯಲ್ಲಿ ಸ್ಥಾಪನೆಯಾಗಲಿದೆ. ಈ ಸ್ಥಾವರ ಸ್ಥಾಪನೆಯಿಂದಾಗಿ ಜಿಲ್ಲೆಯ 500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರಕಲಿದೆ ಎಂದು ತಿಳಿಸಿದರು.

ಶಿಕ್ಷಣ ಸಂಸ್ಥೆಯ ಕೌನ್ಸಿಲ್‌ ಸದಸ್ಯ ಡಾ. ರಜನೀಶ್‌ ವಾಲಿ ಅವರು ಮಾತನಾಡಿ, ಹೈ-ಕ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳ ಪುನರುಜ್ಜೀವನಕ್ಕೆ ವಿವಿಧ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಳವಾಗಿದೆ. ಅಲ್ಲದೆ ನೂರಾರು ಕೋಟಿ ರು.ಗಳ ಆಸ್ತಿಯನ್ನು ಸುಸ್ಥಿರಗೊಳಿಸಲಾಗಿದೆ ಎಂದು ತಿಳಿಸಿದರು.

ಸೈನಿಕ ಶಾಲೆಗೆ ಹೈ-ಕ ಶಿಕ್ಷಣ ಸಂಸ್ಥೆಯ ನ್ಯಾಶನಲ್‌ ಸ್ಕೂಲ್‌ನ ಶೇ.60 ವಿದ್ಯಾರ್ಥಿಗಳು:

ಬೀದರ್‌ನಲ್ಲಿ ಆರಂಭವಾಗಲಿರುವ ಸೈನಿಕ ಶಾಲೆಗೆ ಕೇಂದ್ರ ಸರ್ಕಾರದಿಂದ ನಡೆಯುವ ಪ್ರವೇಶಾತಿ ಪ್ರಕ್ರಿಯೆಯಿಂದ ಶೇ. 40ರಷ್ಟು ಮತ್ತು ನಮ್ಮ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ಅಭ್ಯಶಿಸುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೇ. 60ರಷ್ಟು ಪ್ರವೇಶಾತಿ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ನಿರ್ಭಯಾನಂದ ಸ್ವಾಮೀಜಿಗಳು ಹಾಗೂ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೌನ್ಸಿಲ್‌ ಸದಸ್ಯರು, ಸದಸ್ಯರು ಸೇರಿದಂತೆ ಕಾಲೇಜು ಪ್ರಾಂಶುಪಾಲರು, ಸಿಬ್ಬಂದಿಗಳು ಇದ್ದರು.