ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಶಿಕ್ಷಣದ ಮಹತ್ವವನ್ನು ಸಾರುವ ಮೂಲಕ ಎಲ್ಲರೂ ಶಿಕ್ಷಿತರಾಗಿ ಅಕ್ಷರ ಜ್ಞಾನವನ್ನು ಪಡೆದು ಜಗತ್ತಿಗೆ ದಾರಿ ದೀಪವಾಗಿ ಎಂದು ತಮ್ಮ ತತ್ವಗಳ ಜ್ಞಾನದ ಮೂಲಕ ಸಾರುತ್ತಾ ಸಮುದಾಯದಲ್ಲಿ ಸ್ವಾಭಿಮಾನ ಕಲಿಸಿದವರು ಸಂತ ಸೇವಾಲಾಲರು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಶಿವಾನಂದ ಜೀನ್‌ನಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದ ವತಿಯಿಂದ ಭಾನುವಾರ ನಡೆದ ಸಂತ ಸೇವಾಲಾಲ ಜಯಂತ್ಯುತ್ಸವ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಭರತ ಖಂಡದ ಧಾರ್ಮಿಕ ರಾಯಭಾರಿ ಎಂದೇ ಹೆಸರಾದ ಸಂತ ಸೇವಾಲಾಲರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು. ತಮ್ಮ ಲೀಲೆಗಳನ್ನು ಪ್ರದರ್ಶನ ಮಾಡುತ್ತಾ, ಜಗದಂಬೆಯ ಆರಾಧಕರಾಗಿ ಇಡೀ ಜೀವಮಾನದುದ್ದಕ್ಕೂ ಬ್ರಹ್ಮಚರ್ಯವನ್ನೇ ಪಾಲನೆ ಮಾಡಿದರು. ಇಂದಿಗೂ ಜನ ಮಾನಸದಲ್ಲಿ ಗುರುವಿನ ಸ್ಥಾನ ಪಡೆದಿದ್ದಾರೆ. ಜನತೆಗೆ ವ್ಯಸನ ಮುಕ್ತರಾಗಿ ಎಂದು ಬೋಧಿಸಿದ ಅವರು ಸತ್ಯ, ಅಹಿಂಸೆ, ತ್ಯಾಗ ಮನೋಭಾವದ ನೀತಿಮಾತು ಹೇಳಿದ್ದರು. ಅಷ್ಟೇ ಅಲ್ಲದೆ ಶಿಕ್ಷಣದ ಮಹತ್ವವನ್ನು ಸಾರುವ ಮೂಲಕ ಎಲ್ಲರೂ ಶಿಕ್ಷಿತರಾಗಿ ಅಕ್ಷರ ಜ್ಞಾನವನ್ನು ಪಡೆದು ಜಗತ್ತಿಗೆ ದಾರಿ ದೀಪವಾಗಿ ಎಂದು ತಮ್ಮ ತತ್ವಗಳ ಮೂಲಕ ಲೋಕಕ್ಕೆ ಜ್ಞಾನದ ಮುಕ್ತಿ ಮಾರ್ಗ ತೋರಿಸಿದವರು. ಸರ್ವರನ್ನು ಒಳಗೊಂಡ ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವನೆಯನ್ನು ಮೂಡಲು ಪ್ರೇರೇಪಿಸಿದರು ಎಂದರು.

ಡಾ. ಎಂ.ಎಸ್. ದಡ್ಡೆನ್ನವರ, ನಗರಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಬಸವರಾಜ ಯಂಕಂಚಿ, ಶಿವಾನಂದ ಟವಳಿ, ಸತ್ಯನಾರಾಯಣ ಹೆಮಾದ್ರಿ, ಗುಂಡುರಾವ ಶಿಂದೆ, ಅಂಭಾಜಿ ಜೋಷಿ, ಶಿವಾನಂದ ರಾಠೋಡ, ದೀಲಿಪ್ ರಾಠೋಡ, ಗಂಗಾರಾಮ ಚವ್ಹಾಣ, ಗಣೇಶ ರಾಥೋಡ, ಹನಮಂತ ಚವ್ಹಾಣ, ರಣಧೀರ ರಾಠೋಡ, ಸುರೇಶ ಲಮಾಣಿ, ಸುನೀಲ ಚವ್ಹಾಣ, ಆನಂದ ಕೊಟಗಿ, ಗೀರಿಶ ಭಾಂಡಗೆ, ವೀರಣ್ಣ ಹಳೆಗೌಡರ, ಉಮೇಶ ಹಂಚಿನಾಳ ಸೇರಿದಂತೆ ಅನೇಕರು ಇದ್ದರು