ಸಾರಾಂಶ
- ಸೂರಗೊಂಡನಕೊಪ್ಪ ಭಾಯ್‌ಗಾಡ್‌ನ ಪೂರ್ವಭಾವಿ ಸಭೆಯಲ್ಲಿ ಶಾಸಕ ಶಾಂತನಗೌಡ
- - - ಕನ್ನಡಪ್ರಭ ವಾರ್ತೆ ನ್ಯಾಮತಿದೇಶದಲ್ಲಿಯೇ ಸಂತ ಸೇವಾಲಾಲ್ ಜನ್ಮಸ್ಥಾನ ನಮ್ಮ ಕ್ಷೇತ್ರದಲ್ಲಿ ಇರುವುದು ಪುಣ್ಯದ ಸಂಗತಿ. ಅವರ ಜಯಂತ್ಯುತ್ಸವ ಆಚರಿಸಿ, ಸೇವೆ ಮಾಡುವುದು ನಮಗೆ ಒದಗಿದ ಪುಣ್ಯವಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ಚಿನ್ನಿಕಟ್ಟೆ ಸಮೀಪದ ಸೂರಗೊಂಡನಕೊಪ್ಪ ಭಾಯ್‌ಗಾಡ್‌ನಲ್ಲಿ ಶನಿವಾರ ದಾವಣಗೆರೆ ಜಿಲ್ಲಾಡಳಿತ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ನಿರ್ವಾಹಣ ಪ್ರತಿಷ್ಠಾಪನ ಹಾಗೂ ಮಹಾಮಠ ಸೇವಾ ಸಮಿತಿಯು ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಫೆ.13ರಿಂದ 15ರವರೆಗೆ ಜಿಲ್ಲಾಡಳಿತ ನೇತೃತ್ವದಲ್ಲಿ ನಡೆಯುವ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಬರುವಂತಹ ಮಾಲಾಧಾರಿಗಳು ಮತ್ತು ಭಕ್ತರಿಗೆ ಕುಂದುಕೊರತೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ನೇತೃತ್ವದಲ್ಲಿ ಸಹಕಾರ ನೀಡಲಾಗುವುದು. ಚಿನ್ನಿಕಟ್ಟೆ ಮುಖ್ಯ ರಸ್ತೆಯಿಂದ ಸೂರಗೊಂಡನಕೊಪ್ಪವರೆಗೆ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿ ಅಚ್ಚುಕಟ್ಟಾಗಿ ಗುಣಮಟ್ಟದಿಂದ, ಶೀಘ್ರವಾಗಿ ಪೂರ್ಣಗಳಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ದೇಶದ ವಿವಿಧ ಭಾಗಗಳಿಂದ 3 ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದೆ. ಅವರಿಗೆ ಅಗತ್ಯ ಮೂಲ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಶೌಚಾಲಯ, ಆಹಾರ, ಸಾರಿಗೆ ಸೇರಿದಂತೆ ವಾಹನ ನಿಲುಗಡೆಗೆ ಯಾವುದೇ ಆಡಚಣೆ ಆಗದಂತೆ ಆಯಾ ಇಲಾಖೆಯವರಿಗೆ ಕೊಟ್ಟಿರುವ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದರು.ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರು, ವಿಪಕ್ಷ ನಾಯಕರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಆಗಮಿಸಲಿದ್ದಾರೆ. ಯಾರಿಗೂ ಅನಾನುಕೂಲ ಆಗದಂತೆ ಜವಾಬ್ದಾರಿಗಳನ್ನು ನಿಭಾಯಿಸುವಂತೆ ಹೇಳಿದರು.
ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಜಯದೇವ ನಾಯ್ಕ ಮಾತನಾಡಿ, ಕಳೆದ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ₹8.84 ಕೋಟಿ ಖರ್ಚಾಗಿದೆ. ಈ ಬಾರಿ ಸುಮಾರು ₹10 ಕೋಟಿ ಖರ್ಚಾಗಬಹುದೆಂದು ಅಂದಾಜಿಸಲಾಗಿದೆ. ನಿಗಮದಿಂದ ಅಗತ್ಯ ಅನುದಾನ ತರುವಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ಜಿಪಂ ಸಿಇಒ ಸುರೇಶ್ ಇಟ್ನಾಳ್, ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ವಿಜಯಕುಮಾರ್, ಎಂ.ಸಂತೋಷ್, ಜೆ.ಮಂಜುನಾಥ, ಚನ್ನಗಿರಿ ಡಿವೈಎಸ್ಪಿ ಶ್ಯಾಮ್ ವರ್ಗಿಸ್, ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ರಾಜು, ಉಪವಿಭಾಗಾಧಿಕಾರಿ ವಿ.ಅಭಿಷೇಕ್, ತಹಸೀಲ್ದಾರ್ ಎಚ್.ಬಿ. ಗೋವಿಂದಪ್ಪ, ಪ್ರಧಾನ ಕಾರ್ಯದರ್ಶಿ ಅರುಣಕುಮಾರ್, ರಾಘವೇಂದ್ರ ನಾಯ್ಕ, ಈಶ್ವರ್ ನಾಯ್ಕ, ಕೆ.ಟಿ. ನಾಗರಾಜ್ ನಾಯ್ಕ, ಭೋಜ್ಯ ನಾಯ್ಕ, ಸೇವ್ಯಾ ನಾಯ್ಕ, ವಿವಿಧ ಇಲಾಖೆಗಳ ಅಧಿಕಾರಿಗಳು, ಮಹಾಮಠ ಸಮಿತಿ ಸದಸ್ಯರು ಭಾಗವಹಿಸಿದ್ದರು.
ಸವಳಂಗದಲ್ಲಿ ಹಾಸ್ಟೆಲ್ ಸ್ಥಾಪಿಸಿ:ಸವಳಂಗದಲ್ಲಿ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸುವಂತೆ ರಾಜ್ಯ ಬಂಜಾರ ಯುವಕರು ಮತ್ತು ವಿದ್ಯಾರ್ಥಿ ಸಂಘದವರು ಸೇವಾಲಾಲ್ ಜಯಂತ್ಯುತ್ಸವ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಸವಳಂಗದಲ್ಲಿ ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿ ನಿಲಯ ಸ್ಥಾಪಿಸಬೇಕು. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಡಿ.ಆರ್.ಯಾಗ್ರಹಿಸಿದರು.- - - (-ಫೋಟೋ:)