ಸಾರಾಂಶ
ಶಿಗ್ಗಾವಿ: ಸ್ವಾತಂತ್ರ್ಯ ಭಾರತದ ಶಿಕ್ಷಣ ವ್ಯವಸ್ಥೆಯಿಂದ ಬಜಾರ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಯಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ.ಭಾಸ್ಕರ್ ಹೇಳಿದರು.
ತಾಲೂಕಿನ ಗೊಟಗೋಡಿಯಲ್ಲಿನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆ ದಂಡೆ ಸಭಾಂಗಣದಲ್ಲಿ ಹಮ್ಮಿಕೊಂಡ ಸಂತ ಸೇವಾಲಾಲರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲ ಸಮುದಾಯಗಳಿಗೂ ಸಾಂಸ್ಕೃತಿಕ ನಾಯಕರಿರುತ್ತಾರೆ ಅದರಂತೆ ಸೇವಾಲಾಲರು ಕೂಡಾ ಒಬ್ಬರು. ಸಂಘರ್ಷದ ಈ ಸಂದರ್ಭದಲ್ಲಿ ಪ್ರತಿಯೊಂದು ಸಮುದಾಯಕ್ಕೆ ಒಬ್ಬ ಪ್ರಬಲ ಸಾಂಸ್ಕೃತಿಕ ನಾಯಕನ ಅವಶ್ಯಕತೆ ಇದೆ. ಹೀಗಾಗಿ ಮೌಢ್ಯ ಅವೈಜ್ಞಾನಿಕತೆ ಕಂದಾಚಾರ ಎಲ್ಲವು ಹೋಗಬೇಕಾದರೆ ಶಿಕ್ಷಣ ಅತಿ ಅವಶ್ಯವಾಗಿದೆ ಎಂದರು.೧೨ ನೇ ಶತಮಾನದಲ್ಲಿ ವೈಚಾರಿಕ ಕ್ರಾಂತಿಯ ಮೂಲಕ ಸಮಾನತೆ ಸಂದೇಶ ಸಾರಿದ ಜಗಜ್ಯೋತಿ ಬಸವೇಶ್ವರರು ಕರ್ನಾಟಕದಲ್ಲಿ ಇರುವ ಏಕೈಕ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಅವರು ಇತ್ತಿಚಿನ ಎಲ್ಲ ಸಮುದಾಯಗಳ ಸಾಂಸ್ಕೃತಿಕ ನಾಯಕರಿಗೆ ಮಾದರಿಯಾಗಿದ್ದಾರೆ.
ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್ ಮಾತನಾಡಿ, ಬಂಜಾರ ಸಮುದಾಯವಕ್ಕೆ ಸಾಂಸ್ಕೃತಿಕವಾಗಿ ಬಲ ತುಂಬಿದ ನಾಯಕ ಸಂತ ಸೇವಾಲಾಲರು, ಅವರು ಕರ್ನಾಟಕಕ್ಕೆ ಸೀಮಿತವಾಗಿರದೆ ಇಡಿ ಜಗತ್ತಿಗೆ ಪರಿಚಿತವಾದ ಒಬ್ಬ ಸಾಂಸ್ಕೃತಿಕ ನಾಯಕರಾಗಿದ್ದರು. ಅಂತವರ ಜಯಂತಿ ಆಚರಿಸುತ್ತಿರುವುದು ಸಂತೋಷ ತಂದಿದೆ ಎಂದರು.ಹಿರಿಯ ಸಂಶೋಧನಾಧಿಕಾರಿ ಡಾ. ಕೆ. ಪ್ರೇಮಕುಮಾರ ಮಾತನಾಡಿ, ಸಾಂಸ್ಕೃತಿಕ ನಾಯಕರನ್ನು ನೆನೆಸಿಕೊಳ್ಳುವ ಸೌಭಾಗ್ಯ ಇಂದು ನಮಗೆಲ್ಲ ಇದೆ . ಮುಂದಿನ ದಿನಗಳಲ್ಲಿ ಏಕ ಸಂಸ್ಕೃತಿ ಆಚರಣೆ ಮುನ್ನೆಲೆಗೆ ಬಂದರೆ ಇಂತಹ ಅನೇಕ ಸಾಂಸ್ಕೃತಿಕ ನಾಯಕರನ್ನು ನೆನೆಸಿಕೊಳ್ಳಲು ಸಾಧ್ಯವಾಗುವುದಿಲ್ಲ ಈ ಎಲ್ಲ ಸಾಂಸ್ಕೃತಿಕ ನಾಯಕರು ತಳ ಸಮುದಾಯದವರೆ ಎನ್ನುವುದು ಹೆಮ್ಮೆಯ ವಿಷಯ ಹಾಗಾಗಿ ಸಂತ ಸೇವಾಲಾಲರ ಜಯಂತಿ ಆಚರಣೆ ಅರ್ಥಪೂರ್ಣ ಎಂದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಹಾಜರಿದ್ದರು.ಕಿರಿಯ ಸಹಾಯಕ ಶರೀಫ ಮಾಕಪ್ಪನವರ ಪ್ರಾರ್ಥಿಸಿದರು. ಸಹಾಯಕ ಕುಲಸಚಿವ ಶಹಜಹಾನ್ ಮುದಕವಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ನಿರೂಪಿಸಿದರು. ಸಹಾಯಕ ಸಂಶೋಧನಾದಿಕಾರಿಗಳು ಹಾಗೂ ಬಂಜಾರ ಭಾಷಾ ಅಕಾಡಮಿಯ ಮಾಜಿ ಸದಸ್ಯ ಡಾ. ಬಸವರಾಜ ಎಸ್ ಜಿ ವಂದಿಸಿದರು.