ಸೈನಿಕ ಹುಳುವಿನ ಪಾಲಾದ ಸಜ್ಜೆ

| Published : Sep 01 2025, 01:04 AM IST

ಸಾರಾಂಶ

ಅಧಿಕಾರಿಗಳ ಬಳಿ ಸಲಹೆ ಪಡೆದು ಕ್ರಿಮಿನಾಶಕ ಸಿಂಪಡಿಸಿದರೂ ಹುಳು ಬಾಧೆ ನಿಯಂತ್ರಣವಾಗಿಲ್ಲ

ಎಂ. ಪ್ರಹ್ಲಾದ್ ಕನಕಗಿರಿ

ತಾಲೂಕಿನೆಲ್ಲೆಡೆ ಬೆಳೆಯಲಾದ ಸಜ್ಜೆಗೆ ಸೈನಿಕ ಹುಳುವಿನ ಬಾಧೆಯಿಂದ ರೈತ ಕಂಗಾಲಾಗಿದ್ದು, ಈ ಬಾರಿ ರೈತನಿಗೆ ಕೂಲಿ ಹಣವೂ ಸಿಗದಂತಾಗಿದೆ.

ಹೌದು, ತಾಲೂಕಿನ ಹುಡೇಜಾಲಿ, ಚಿಕ್ಕಮಾದಿನಾಳ, ಓಬಳಬಂಡಿ, ರಾಮದುರ್ಗಾ, ಮುಸಲಾಪುರ, ರಾಂಪುರ, ನಾಗಲಾಪುರ, ಹಿರೇ ಮಾದಿನಾಳ ಸೋಮಸಾಗರ, ಕನಕಗಿರಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿನ ರೈತರು ಬೆಳೆದ ಸಜ್ಜೆ ಬೆಳೆ ಸೈನಿಕ ಹುಳುವಿನ ಪಾಲಾಗುತ್ತಿದೆ.

ಕಳೆದ ೨೦ ದಿನಗಳಿಂದ ಸಜ್ಜೆ ತೆನೆಯ ಸುತ್ತಲೂ ಅಂಟಿಕೊಂಡಿರುವ ಹುಳುಗಳು ಬೀಜ ತಿಂದು ಹಾಕುತ್ತಿದ್ದು, ಇದರಿಂದ ತೆನೆಯಲ್ಲಿ ಕಾಳು ಹೋಗಿ ಹುಳುವಿನ ಲದ್ದಿ ಉಳಿದುಕೊಳ್ಳುತ್ತಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಥೇಚ್ಛವಾಗಿ ಸಜ್ಜೆ ಬೆಳೆಯುವ ರೈತರಿಗೆ ಈ ವರ್ಷ ಲಕ್ಷಾಂತರ ಹಾನಿಯಾಗಿದೆ.

ಅಧಿಕಾರಿಗಳ ಬಳಿ ಸಲಹೆ ಪಡೆದು ಕ್ರಿಮಿನಾಶಕ ಸಿಂಪಡಿಸಿದರೂ ಹುಳು ಬಾಧೆ ನಿಯಂತ್ರಣವಾಗಿಲ್ಲ. ಬೆಳಗಿನ ಜಾವ ಮತ್ತು ಸಂಜೆ ವೇಳೆ ತೆನೆಯಿಂದ ಬೀಜ ತಿಂದು ಹಾಕುತ್ತಿರುವುದರಿಂದ ಹುಳುವಿನ ನಿಯಂತ್ರಣ ಕಷ್ಟಸಾಧ್ಯವಾಗಿದೆ. ಹುಳುವಿನ ಬಾಧೆಯಿಂದ ರೈತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ.

೨೫ ವರ್ಷದ ಬಳಿಕ ಬಾಧೆಗೆ ರೈತ ತತ್ತರ: ಸುಮಾರು ೨೫ ವರ್ಷಗಳ ಹಿಂದೊಮ್ಮೆ ಇದೇ ರೀತಿ ಸಜ್ಜೆ ಬೆಳೆಗೆ ಹುಳು ಬಿದ್ದು ಫಸಲೇ ಇಲ್ಲದಂತಾಗಿತ್ತು. ಇದೀಗ ಸೈನಿಕ ಹುಳು ಸಜ್ಜೆ ಬೆಳೆ ತಿಂದು ತೇಗುತ್ತಿವೆ. ಬೆಳೆ ವೀಕ್ಷಣೆಗೆ ತೆರಳುವ ರೈತರು ತೆನೆಯಲ್ಲಿ ಕಾಳು ಇಲ್ಲದಿರುವುದನ್ನು ಕಂಡು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.

ಕನಕಗಿರಿ ತಾಲೂಕಿನಾದ್ಯಂತ ಸಜ್ಜೆ ಬೆಳೆಗೆ ಸೈನಿಕ ಹುಳು ಬಿದ್ದು ರೈತರಿಗೆ ನಷ್ಟವಾಗಿದೆ. ಪ್ರತಿ ತೆನೆಗೆ ೧೦ರಿಂದ ೧೫ ಹುಳು ಸೇರಿಕೊಂಡು ಕಾಳನ್ನು ಸಂಪೂರ್ಣವಾಗಿ ತಿನ್ನುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಹಾನಿಯಾದ ಪ್ರದೇಶ ಪರಿಶೀಲಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಕನಕಪ್ಪ ಮಮ್ಮಳಿ ತಿಳಿಸಿದ್ದಾರೆ.

ಸೈನಿಕ ಹುಳುವಿನ ಬಾಧೆಗೆ ಸಜ್ಜೆ ಬೆಳೆ ಹಾನಿಯಾಗಿದೆ. ಹುಳುವಿನ ಹತೋಟಿಗೆ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪಡಿಸಲು ರೈತರಿಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಕೃಷಿ ಅಧಿಕಾರಿ ನವೀನ್ ತಿಳಿಸಿದ್ದಾರೆ.