ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಪಟ್ಟಣದಲ್ಲಿ ಬೀದಿನಾಯಿಗಳ ಉಪಟಳ ಮೀತಿ ಮೀರಿದ್ದು, ನಿರ್ಜನ ಪ್ರದೇಶದಲ್ಲಿ ಜನಜಾನುವಾರುಗಳು ಸಂಚರಿಸುವುದು ದುಸ್ತರವಾಗಿದೆ.ಪಟ್ಟಣದಾದ್ಯಂತ ಜನರಿಗಿಂತ ಬೀದಿನಾಯಿಗಳ ಸಂಖ್ಯೆಯೇ ಹೆಚ್ಚುತ್ತಿದೆ ಎಂದರೆ ಅಚ್ಚರಿಯಿಲ್ಲ. ಬೀದಿನಾಯಿಗಳ ಹತ್ಯೆಗೆ ಪ್ರಾಣಿ ಪ್ರಿಯರು ಅಪಸ್ವರ ಎತ್ತಿದ ನಾಲ್ಕುವರ್ಷದಲ್ಲಿ ಬೀದಿ ನಾಯಿಗಳ ಸಂಖ್ಯೆ ಅಗಣಿತವಾಗಿ ಬೆಳೆದಿದ್ದು ಕಡಿವಾಣ ಹಾಕಲು ಪುರಸಭೆಗೆ ದಾರಿ ಕಾಣದಾಗಿದೆ.
ಪಟ್ಟಣದ ಎಪಿಎಂಸಿ ಆವರಣ, ಪಟ್ಟಣದ ಅಜಾದ್ ರಸ್ತೆ, ತೇಜಸ್ವಿ ವೃತ್ತ, ಚಂಪಕನಗರ ಟೋಲ್‌ಗೇಟ್ ಸಮೀಪ ಇರುವ ಪ್ರತಿಯೊಂದು ಬೀದಿನಾಯಿಗಳ ಗುಂಪಿನಲ್ಲಿ ನೂರಕ್ಕೂ ಅಧಿಕ ನಾಯಿಗಳಿದ್ದು, ಕ್ರೂರವಾಗಿ ವರ್ತಿಸುವ ನಾಯಿಗಳಿಂದ ಜನರು ಒಂಟಿಯಾಗಿ ಸಂಚರಿಸುವುದು ಅಸಾಧ್ಯವಾಗಿದೆ. ಬೀದಿನಾಯಿಗಳ ನಿಗ್ರಹಕ್ಕೆ ಆಗ್ರಹ:ಪಟ್ಟಣದಲ್ಲಿ ಕಳೆದ ಹಲವು ವರ್ಷಗಳಿಂದ ಬೀದಿನಾಯಿಗಳ ಉಪಟಳ ತಪ್ಪಿಸುವಂತೆ ಆಗ್ರಹ ಕೇಳಿ ಬರುತ್ತಿದ್ದು, ಕಳೆದ ಒಂದು ತಿಂಗಳ ಹಿಂದೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿಪರಿಶೀಲನ ಸಭೆಯಲ್ಲಿ ಬೀದಿನಾಯಿ ಹಾವಳಿ ಹತೋಟಿಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಈ ವೇಳೆ ಮಾಹಿತಿ ನೀಡಿದ ಪುರಸಭೆ ಮುಖ್ಯಾಧಿಕಾರಿ ನಟರಾಜ್, ಬೀದಿನಾಯಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಹಾವಳಿ ತಡೆಯಲು ಉದ್ದೇಶಿಸಿದ್ದು, ಇದಕ್ಕಾಗಿ ಟೆಂಡರ್ ಕರೆಯಲಾಗುವುದು ಎಂದಿದ್ದರು. ಆದರೆ, ಸಭೆ ನಡೆದು ತಿಂಗಳುಗಳೇ ಕಳೆದರೂ ಯಾವುದೇ ಪ್ರಗತಿ ಸಾಧ್ಯವಾಗಿಲ್ಲ.
ಟೆಂಡರ್‌ನಲ್ಲಿ ಭಾಗವಹಿಸಲು ಹಿಂದೇಟು:ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ಮೂರು ಬಾರಿ ಟೆಂಡರ್ ಕರೆಯಲಾಗಿದೆ. ಆದರೆ, ಟೆಂಡರ್‌ನಲ್ಲಿ ಯಾವುದೇ ಟೆಂಡರ್‌ದಾರರು ಭಾಗವಹಿಸುತ್ತಿಲ್ಲ ಎನ್ನಲಾಗುತ್ತಿದೆ. ನಾಯಿಗಳ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಮಾನವನ ಶಸ್ತ್ರಚಿಕಿತ್ಸೆ ವೇಳೆ ಅನುಸರಿಸಬೇಕಾದ ಎಲ್ಲ ನಿಯಮಗಳನ್ನು ಅನುಸರಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಈ ಕಠಿಣ ನಿಯಮಗಳನ್ನು ಪೂರೈಸಲು ಸಾಧ್ಯವಿಲ್ಲದಿರುವುದು ಟೆಂಡರ್‌ದಾರರು ದೂರು ಉಳಿಯಲು ಕಾರಣ ಎನ್ನಲಾಗಿದ್ದರೆ, ಹಾಸನದಲ್ಲಿ ಬೀದಿನಾಯಿಗಳ ಶಸ್ತ್ರಚಿಕಿತ್ಸೆ ಟೆಂಡರ್ ಪಡೆದಿರುವ ವ್ಯಕ್ತಿಗೆ ಇಲ್ಲಿನ ಟೆಂಡರ್ ನೀಡಲು ಉದ್ದೇಶಿಸಿದ್ದರು. ಈ ವ್ಯಕ್ತಿ ಸಹ ಟೆಂಡರ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಪರಿಣಾಮ ಬೀದಿನಾಯಿಗಳ ಹಾವಳಿ ತಡೆಯಲು ಪುರಸಭೆಗೆ ಮಾರ್ಗವಿಲ್ಲದಂತಾಗಿದೆ.
ಜನಜಾನುವಾರುಗಳಿಗೆ ಕಂಟಕ:ಕಳೆದ ೧೧ ತಿಂಗಳ ಅವಧಿಯಲ್ಲಿ ಪಟ್ಟಣದ ಅಜಾದ್ ರಸ್ತೆಯ ಕೋಳಿ ಮಾಂಸ ಮಾರುಕಟ್ಟೆಯ ಹಿಂಬದಿಯ ನಿರ್ಜನ ಪ್ರದೇಶಕ್ಕೆ ಮೇವು ಅರಿಸಿ ಹೋಗಿದ್ದ ೪ ಜಾನುವಾರುಗಳು ಬೀದಿನಾಯಿಗಳಿಗೆ ಆಹಾರವಾಗಿದ್ದರೆ, ಮೂರು ಜಾನುವಾರುಗಳು ಮಾರಣಾಂತಿಕವಾಗಿ ಗಾಯಗೊಂಡಿವೆ. ಇನ್ನು ಎಪಿಎಂಸಿ ಆವರಣದಲ್ಲಿರುವ ಬೀದಿನಾಯಿಗಳು ದಿನದಿಂದ ದಿನಕ್ಕೆ ಉಗ್ರರೂಪ ಪ್ರದರ್ಶಿಸುತಿದ್ದು, ಸಂಜೆ ವೇಳೆ ಈ ಪ್ರದೇಶದಲ್ಲಿ ಸಂಚರಿಸುವುದು ಅಪಾಯ ಎಂಬುದು ಇಲ್ಲಿನ ಸಿಬ್ಬಂದಿಯ ಮಾತು.
ಕಳೆದೊಂದು ವಾರದ ಹಿಂದೆ ಎಪಿಎಂಸಿ ಆವರಣದಲ್ಲಿ ಹಾಡುಹಗಲೇ ಕುರಿಯೊಂದನ್ನು ತಿಂದು ಹಾಕಿ, ಮತ್ತೆರಡು ಕುರಿಗಳನ್ನು ಕಚ್ಚಿಗಾಯಗೊಳಿಸಿದ್ದು, ಸಾರ್ವಜನಿಕರ ಸಕಾಲಿಕ ಪ್ರವೇಶದಿಂದ ಕುರಿಗಳು ಅಪಾಯದಿಂದ ಪರಾಗಿವೆ. ಎರಡು ತಿಂಗಳ ಹಿಂದೆ ಪಟ್ಟಣದ ಮುಖ್ಯರಸ್ತೆಯಲ್ಲೆ ಒಂದೆ ದಿನದಲ್ಲಿ ೮ ಜನರಿಗೆ ಬೀದಿನಾಯಿಯೊಂದು ಕಚ್ಚಿಗಾಯಗೊಳಿಸಿದ್ದರೆ, ಕಳೆದ ಒಂದು ವರ್ಷದ ಅವಧಿಯಲ್ಲಿ ೩೧ ಜನರಿಗೆ ಬೀದಿನಾಯಿಗಳು ಕಚ್ಚಿರುವುದು ಪರಿಸ್ಥಿತಿಯ ಭೀಕರತೆಯನ್ನು ಸೂಚಿಸುತ್ತಿದೆ.ರೋಗಪೀಡಿತ ಬೀದಿನಾಯಿಗಳು:
ಪಟ್ಟಣದಲ್ಲಿರುವ ಸಾಕಷ್ಟು ಬೀದಿನಾಯಿಗಳು ರೋಗ ಪೀಡಿತಗೊಂಡಿದ್ದು ಬಾಯಿಯಿಂದ ಜೊಲ್ಲು ಸುರಿಸುತ್ತಾ ಸಂಚರಿಸುತ್ತಿದ್ದರೆ ಸಾಕಷ್ಟು ನಾಯಿಗಳು ತೆವಳೆ ರೋಗದಿಂದ ಬಳಲುತ್ತಿದ್ದು, ತೆವಳೆ ಹಾಗೂ ಹೊಟ್ಟೆಹುಣ್ಣಿನಿಂದ ಬಳಲುತ್ತಿರುವ ನಾಯಿಗಳು ಮಧ್ಯ ರಸ್ತೆಯಲ್ಲೇ ಮಲಗುವುದರಿಂದ ವಾಹನ ಸಂಚಾರಕ್ಕೂ ತೊಡಕಾಗಿದೆ. ಇದಲ್ಲದೆ ಸಾಕಷ್ಟು ಬೀದಿನಾಯಿಗಳಲ್ಲಿ ರೇಬೀಸ್ ರೋಗವಿದೆ ಎನ್ನಲಾಗುತ್ತಿದೆ.ಸರ್ಕಾರಿ ಕಚೇರಿಗಳಲ್ಲೂ ಹಾವಳಿ:
ಪಟ್ಟಣದ ಸಾಕಷ್ಟು ಸರ್ಕಾರಿ ಕಚೇರಿಗಳು ಬೀದಿನಾಯಿಗಳ ಹಾವಳಿಯಿಂದ ಬಳಲುತ್ತಿದ್ದು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿವೇಳೆ ದಾಂದಲೆ ಮಾಡುವ ಬೀದಿನಾಯಿಗಳು ಒಳರೋಗಿಗಳ ಕೊಠಡಿಯಲ್ಲೆ ಮಲಗುತ್ತಿದ್ದರೆ, ಪ್ಲಾಸ್ಟಿಕ್ ಕವರ್‌ಗಳು,ಡಸ್ಟ್ ಬೀನ್‌ಗಳನ್ನು ಎಳೆದು ಚಲ್ಲಾಡುವುದರಿಂದ ಆಸ್ಪತ್ರೆ ಸಿಬ್ಬಂದಿ ಹೈರಾಣಾಗುವಂತಾಗಿದೆ. ಈ ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಕಳೆದ ತಿಂಗಳು ಶಾಸಕ ಸಿಮೆಂಟ್ ಮಂಜು ಅಧ್ಯಕ್ಷತೆಯಲ್ಲಿ ನಡೆದ ಆಸ್ಪತ್ರೆಯ ರಕ್ಷಾಸಮಿತಿ ಸಭೆಯಲ್ಲಿ ವೈದ್ಯರು ಮನವಿ ಮಾಡಿದರು. ಇದಕ್ಕೆ ಒಪ್ಪಿದ ಶಾಸಕರು ಆಸ್ಪತ್ರೆ ಆವರಣದಿಂದ ಬೀದಿನಾಯಿಗಳನ್ನು ಹೊರಗಟ್ಟಲು ಓರ್ವ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ತಾಲೂಕು ವೈಧ್ಯಾಧಿಕಾರಿಗೆ ತಾಕೀತು ಮಾಡಿದ್ದರು. ಆದರೆ, ೧೦ ಸಾವಿರ ಪಗಾರಕ್ಕೆ ಕೆಲಸ ಮಾಡಲು ಯಾರೂ ಸಿದ್ಧರಿಲ್ಲದ ಕಾರಣ ಬೀದಿನಾಯಿಗಳ ಹಾವಳಿ ತಡೆಯಲು ಸಾಧ್ಯವಿಲ್ಲದಾಗಿದೆ.ಇನ್ನೂ ಕಂದಾಯ ಇಲಾಖೆಯ ಕೆಲಸಕ್ಕಾಗಿ ಬರುವ ಜನರು ಸಹ ಮಿನಿವಿಧಾನಸೌಧದ ಎದುರು ಬೀದಿನಾಯಿಗಳ ಹಾವಳಿಯನ್ನು ಎದುರಿಸಲೇ ಬೇಕಿದ್ದು, ಸಾಕಷ್ಟು ಬೀದಿನಾಯಿಗಳು ಮಿನಿವಿಧಾನ ಸೌಧದ ಸುತ್ತಲಿನ ಪ್ರದೇಶದಲ್ಲಿ ಬೀಡುಬಿಡುತ್ತಿದ್ದು, ಸಂಜೆವೇಳೆ ನಿರ್ಜನವಾಗುವ ಈ ಪ್ರದೇಶದಲ್ಲಿ ಒಂಟಿಯಾಗಿ ಸಂಚರಿಸುವುದು ಅಪಾಯಕಾರಿಯಾಗಿದೆ. ಫೋಟೋ: ಎಪಿಎಂಸಿ ಆವರಣದಲ್ಲಿ ಮೇಕೆಯನ್ನು ಗಾಯಗೊಳಿಸಿರುವುದು.*ಹೇಳಿಕೆ-1
ಬೀದಿನಾಯಿಗಳ ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುವುದು ತೀರ ಕಷ್ಟಕರದ ಕೆಲಸವಾಗಿರುವುದರಿಂದ ಟೆಂಡರ್ ಕರೆದರೂ ಯಾರೂ ಸಹ ಟೆಂಡರ್‌ನಲ್ಲಿ ಭಾಗವಹಿಸುತ್ತಿಲ್ಲ. ಇದರಿಂದ ಬೀದಿನಾಯಿಗಳ ಹಾವಳಿ ತಡೆಗೆ ಮಾರ್ಗವಿಲ್ಲದಾಗಿದೆ.ನಟರಾಜ್, ಮುಖ್ಯಾಧಿಕಾರಿ, ಪುರಸಭೆ. *ಹೇಳಿಕೆ-2
ಎಪಿಎಂಸಿ ಆವರಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಇಲ್ಲಿ ಒಬ್ಬಂಟಿಯಾಗಿ ಸಂಚರಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಕಳೆದೊಂದು ವಾರದಲ್ಲಿ ಮೂರು ಕುರಿಗಳನ್ನು ಬೀದಿನಾಯಿಗಳು ತಿಂದು ಹಾಕಿವೆ.- ಎಚ್.ಎಸ್ ಕುಶಾಲಪ್ಪ, ಸ್ಥಳೀಯ