ಭಾರತೀಯರು ಶಾಂತಿಪ್ರಿಯರು. ಆದರೆ ನಮ್ಮ ತಾಳ್ಮೆ ಹಾಗೂ ಸಂಯಮವನ್ನು ಹೆಚ್ಚು ಪರೀಕ್ಷಿಸುವಂತಿಲ್ಲ. ಈಗಾಗಲೇ ಅನ್ಯರಾಷ್ಟ್ರಗಳಿಗೆ ನಮ್ಮ ದೇಶದ ಶಕ್ತಿಯನ್ನು ನಾವು ತೋರಿಸಿದ್ದೇವೆ .

ಕನ್ನಡಪ್ರಭ ವಾರ್ತೆ ಸಕಲೇಶಪುರ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹತ್ಯೆ ಹಾಗೂ ಹಲ್ಲೆಗಳನ್ನು ಖಂಡಿಸಿ ಪಟ್ಟಣದಲ್ಲಿ ಶನಿವಾರ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಸ್ವಯಂಪ್ರೇರಿತ ಬಂದ್ ಹಾಗೂ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಭಾರತೀಯರು ಶಾಂತಿಪ್ರಿಯರು. ಆದರೆ ನಮ್ಮ ತಾಳ್ಮೆ ಹಾಗೂ ಸಂಯಮವನ್ನು ಹೆಚ್ಚು ಪರೀಕ್ಷಿಸುವಂತಿಲ್ಲ. ಈಗಾಗಲೇ ಅನ್ಯರಾಷ್ಟ್ರಗಳಿಗೆ ನಮ್ಮ ದೇಶದ ಶಕ್ತಿಯನ್ನು ನಾವು ತೋರಿಸಿದ್ದೇವೆ ಎಂದು ಹೇಳಿದರು. ಬಾಂಗ್ಲಾದೇಶದಲ್ಲಿ ಮತಾಂಧ ಶಕ್ತಿಗಳಿಂದ ನಡೆಯುತ್ತಿರುವ ಹತ್ಯೆ ಮತ್ತು ಹಲ್ಲೆಗಳು ಖಂಡನೀಯ. ಬಾಂಗ್ಲಾದೇಶದಲ್ಲಿ ಹತ್ಯೆಗೀಡಾದ ರಾಮದಾಸ್ ಪ್ರಕರಣಕ್ಕೆ ಭಾರತ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಕೆ ನೀಡಿದರು. ನಮ್ಮ ದೇಶದ ಸೈನಿಕರ ಪ್ರಾಣತ್ಯಾಗದ ಫಲವಾಗಿ ಸ್ವಾತಂತ್ರ್ಯ ಪಡೆದಿರುವ ಬಾಂಗ್ಲಾದೇಶ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದರು.

ಸ್ಥಳೀಯವಾಗಿ ನುಸುಳಿರುವ ಅಕ್ರಮ ಬಾಂಗ್ಲಾ ನುಸುಳಿಕೋರರನ್ನು ಪೊಲೀಸರು ಪತ್ತೆಹಚ್ಚಬೇಕು. ಕಾಫಿ ಬೆಳೆಗಾರರು ತಮ್ಮ ತೋಟಗಳಲ್ಲಿ ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಬೇಕು. ಯಾವುದೇ ಅನುಮಾನ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ನಮ್ಮ ಜೀವಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಆರ್‌ಎಸ್‌ಎಸ್ ಮುಖಂಡ ಅಣ್ಣಪ್ಪಸ್ವಾಮಿ ಮಾತನಾಡಿ, ಸ್ಥಳೀಯವಾಗಿ ನುಸುಳಿರುವ ಅಕ್ರಮ ಬಾಂಗ್ಲಾ ಹಾಗೂ ರೋಹಿಂಗ್ಯಾ ಮುಸ್ಲಿಮರಿಂದ ನಮ್ಮ ಸಮಾಜಕ್ಕೆ ಕಂಟಕ ಉಂಟಾಗಿದೆ ಎಂದು ಹೇಳಿದರು. ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಬರುತ್ತಿರುವವರ ಹಿಂದೆ ಬೇರೆ ಉದ್ದೇಶಗಳಿವೆ. ಅವರಿಂದ ಸಮಾಜದಲ್ಲಿ ಕಳ್ಳತನ, ಸುಲಿಗೆ ಹಾಗೂ ಅಕ್ರಮ ಮಾದಕ ವಸ್ತುಗಳ ವಹಿವಾಟು ನಡೆಯುತ್ತಿದೆ. ಗುಂಪುಗುಂಪಾಗಿ ಬಂದು ಸ್ಥಳೀಯರ ಸಹಕಾರದಿಂದ ಆಧಾರ್‌ ಹಾಗೂ ಮತದಾರರ ಪಟ್ಟಿಗೆ ಸೇರಿಕೊಳ್ಳುತ್ತಿರುವುದು ನಮ್ಮ ವ್ಯವಸ್ಥೆಯ ದೊಡ್ಡ ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.

ಹೋರಾಟಗಾರ ಯಡೇಹಳ್ಳಿ ಮಂಜುನಾಥ್ ಮಾತನಾಡಿ, ತಾಲೂಕಿನ ಅಕ್ರಮ ವಲಸಿಗರಿಂದ ಗಾಂಜಾ ಸೇರಿದಂತೆ ಇನ್ನಿತರ ಮಾದಕ ವಸ್ತುಗಳು ಪೂರೈಕೆಯಾಗುತ್ತಿರುವುದು ಕಂಡುಬರುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮ ವಹಿಸಬೇಕೆಂದು ಹೇಳಿದರು. ಸ್ವಯಂಪ್ರೇರಿತ ಬಂದ್ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯುವವರೆಗೆ ಪಟ್ಟಣದ ಬಹುತೇಕ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಪ್ರತಿಭಟನೆಯ ನಂತರ ರಾಷ್ಟ್ರಪತಿಗಳಿಗೆ ಡಿವೈಎಸ್‌ಪಿ ಮೂಲಕ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ವಿಶ್ವಹಿಂದು ಪರಿಷತ್ ಮುಖಂಡರಾದ ರಘು, ವಿಷ್ಣುರಾವ್, ಕರಡಿಗಾಲ ಹರೀಶ್, ವಿಜಯಕುಮಾರ್‌, ಗೊಡುಮನೆ ಪರಮೇಶ್, ಕೀರುವಾಲೆ ಶಶಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.