ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಖಿಯರ ಮಹಾ ಒಕ್ಕೂಟ ಹೋರಾಟ ಪ್ರತಿಭಟನೆ

| Published : Nov 30 2024, 12:50 AM IST

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಖಿಯರ ಮಹಾ ಒಕ್ಕೂಟ ಹೋರಾಟ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದಿಂದ ನೇರವಾಗಿ ಮುಖ್ಯ ಪುಸ್ತಕ ಬರಹಗಾರರಿಗೆ ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ವೇತನ ಜಮೆಯಾಗಬೇಕು. ನಮ್ಮ ಕೆಲಸದ ಜೊತೆಗೆ ಪಂಚಾಯತಿಗಳ ಹಲವು ಕೆಲಸಗಳನ್ನು ನಿರ್ವಹಣೆ ಮಾಡುತ್ತಿದ್ದು, ರಾಜ್ಯದ ಎಲ್ಲ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ವಹಿಸುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ವೇತನ ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರ, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಸಖಿಯರ ಮಹಾ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು ಘೋಷಣೆ ಕೂಗಿದರು. ಎಂ.ಬಿ.ಕೆ ಮತ್ತು ಜಿ.ಪಿ.ಎಲ್.ಎಫ್ ನ ಸಂಪನ್ಮೂಲ ವ್ಯಕ್ತಿಗಳಿಗೆ ಚೆಕ್‌ಗೆ ಸಹಿ ಹಾಕುವ ಅಧಿಕಾರ ಕೊಡಬೇಕು. ಒಕ್ಕೂಟದಲ್ಲಿ ಈಗ ಗೌರವಧನ ತೆಗೆದುಕೊಳ್ಳುತಿದ್ದೇವೆ. ಆದರೆ, ಒಕ್ಕೂಟಗಳು ಆರ್ಥಿಕವಾಗಿ ಬಲಿಷ್ಠವಾಗಿರದ ಕಾರಣ ಎಸ್‌ಎಚ್‌ಜಿ ಮಹಿಳೆಯರಿಗೆ ಚಟುವಟಿಕೆ ನಡೆಸಲು ಸಿಐಎಫ್ ನೀಡಲು ತೊಂದರೆಯಾಗುತ್ತಿದೆ. ಆದ್ದರಿಂದ ಬೆಳಗಾವಿ ಅಧಿವೇಶನದಲ್ಲಿ ವಾರ್ಷಿಕ ಬಜೆಟ್‌ನಲ್ಲಿ ವೇತನಕ್ಕೆ 200 ಕೋಟಿ ರು. ಮೀಸಲಿಡುವಂತೆ ಒತ್ತಾಯಿಸಿದರು.

ಗ್ರಾಪಂ ಮಟ್ಟದ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಿಗೆ 20 ಸಾವಿರ ರು., ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ 15 ಸಾವಿರ ರು., ಗ್ರಾಪಂ ಮಟ್ಟದ ಒಕ್ಕೂಟದ ಸಖಿಯರಿಗೆ 15 ಸಾವಿರ ರು.ನಿಗದಿಗೆ ಆಗ್ರಹಿಸಿದರು.

ಸರ್ಕಾರದಿಂದ ನೇರವಾಗಿ ಮುಖ್ಯ ಪುಸ್ತಕ ಬರಹಗಾರರಿಗೆ ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ವೇತನ ಜಮೆಯಾಗಬೇಕು. ನಮ್ಮ ಕೆಲಸದ ಜೊತೆಗೆ ಪಂಚಾಯತಿಗಳ ಹಲವು ಕೆಲಸಗಳನ್ನು ನಿರ್ವಹಣೆ ಮಾಡುತ್ತಿದ್ದು, ರಾಜ್ಯದ ಎಲ್ಲ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ವಹಿಸುವುದು. ವೇತನ ಸಹಿತ ಹೆರಿಗೆ ರಜೆ ಮಂಜೂರು ಮಾಡಬೇಕು. ಮಹಿಳಾ ಸಿಬ್ಬಂದಿ ಮೇಲೆ ನಡೆಯುತ್ತಿರುವ ಮಾನಸಿಕ ದೌರ್ಜನ್ಯ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ಸೇರಿದಂತೆ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ಬೆಳಗಾವಿ ಅಧಿವೇಶನ ನಡೆಯುವ ಸಮಯದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕಲಾವತಿ, ಜಯರತ್ನ, ಪವಿತ್ರಾ, ಕವಿತಾ, ಸುನೀತಾ, ಶೋಭಾ, ಅನಿತಾ, ಸೌಭಾಗ್ಯ, ಸುಕನ್ಯಾ ಭಾಗವಹಿಸಿದ್ದರು.