ಸಾರಾಂಶ
ಧಾರವಾಡ: ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಇಲಾಖೆಗಳ ಸರ್ಕಾರಿ ನೌಕರರು ತಮಗೆ ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ಪ್ರಯೋಜನವಾಗುವ ಸಂಬಳ ಪ್ಯಾಕೇಜ್ ಖಾತೆ ಹೊಂದಬೇಕು. ಈ ಕುರಿತು ಆಯಾ ಇಲಾಖೆಯ ಜಿಲ್ಲಾ ಮುಖ್ಯಸ್ಥರು ಖಾತೆಯ ಕ್ರಮ ವಹಿಸಿ, ಏಪ್ರಿಲ್ ಅಂತ್ಯದೊಳಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು. ಜಿಪಂ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಬಳ ಪ್ಯಾಕೇಜ್ ಖಾತೆ ಹಾಗೂ ನೌಕರರ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಅಧಿಕಾರಿಗಳ ವಿಶೇಷ ಸಭೆ ಜರುಗಿಸಿದ ಅವರು, ಸರ್ಕಾರದಿಂದ ನೇರವಾಗಿ ಮತ್ತು ಪರೋಕ್ಷವಾಗಿ ನೇಮಕಗೊಂಡಿರುವ ಅಧಿಕಾರಿಗಳಿಗೆ, ನೌಕರರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ನೌಕರ ತನ್ನ ಸಂಬಳ ಖಾತೆಯನ್ನು ಸ್ಯಾಲರಿ ಪ್ಯಾಕೇಜ್ ಅಕೌಂಟ್ ಮಾಡಿಸಿಕೊಂಡರೆ ಉಚಿತವಾಗಿ ಒಂದು ಕೋಟಿ ಮೊತ್ತದ ವಿಮೆ ಲಭ್ಯವಾಗುತ್ತದೆ ಮತ್ತು ಎಟಿಎಂ, ಚೆಕ್ ಬುಕ್, ಎಸ್.ಎಂ.ಎಸ್. ಸೇರಿದಂತೆ ವಿವಿಧ ಅಗತ್ಯ ಸೇವೆಗಳು ಉಚಿತವಾಗಿ ದೊರೆಯುತ್ತವೆ ಎಂದರು.
ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಸಂಬಳ ಪ್ಯಾಕೇಜ್ ಖಾತೆ ಮಾಡುತ್ತಿದ್ದಾರೆ. ಜಿಲ್ಲೆಯ ಎಲ್ಲ ನೌಕರರಿಗೆ ಇದರ ಪ್ರಯೋಜನ ಲಭ್ಯವಾಗಬೇಕು. ಪ್ರತಿ ಇಲಾಖೆಯ ಡಿಡಿಒ (ಬಟವಡೆ) ಅಧಿಕಾರಿಗಳು ನೇರವಾಗಿ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಯನ್ನು ಸಂಪರ್ಕಿಸಿ, ಖಾತೆ ಹೊಂದಲು ಅಥವಾ ಸಂಬಳ ಪ್ಯಾಕೇಜ್ ಖಾತೆಯಾಗಿ ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಕೇಂದ್ರಿಕೃತ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎ ದಿಂದ ಡಿ ಗ್ರೂಪ್ ವರೆಗೆ ಇರುವ ಸುಮಾರು 2 ಸಾವಿರ ಸರ್ಕಾರಿ ನೌಕರರು ಪ್ರಯೋಜನೆ ಪಡೆಯಲಿ ಎಂದರು.ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಎನ್.ಎಂ. ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಗತಿ ಕುರಿತು ಸಭೆಯಲ್ಲಿ ವಿವರಿಸಿದರು. ಜಿಪಂ ಸಿಇಒ ಭುವನೇಶ ಪಾಟೀಲ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ ಸ್ವಾಗತಿಸಿದರು.