ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆನಗರ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಪೇಪರ್, ಕವರ್‌ಗಳನ್ನು ಬಳಸುವುದು, ಮಾರಾಟ ಮಾಡುವುದು ಸೇರಿದಂತೆ ನಿಷೇಧಿತ ಪ್ಲಾಸ್ಟಿಕ್ ಬಳಸುವವರಿಗೆ ದಂಡ ವಿಧಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಗೋವಿಂದ ಬೀದಿ ಬದಿ ವ್ಯಾಪಾರಸ್ಥರಿಗೆ ಹಾಗೂ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಪುರಸಭೆ ಕಚೇರಿಯಲ್ಲಿ ಪಿಎಂ ನಿಧಿ ಬೀದಿ ವ್ಯಾಪಾರಸ್ಥರಿಗೆ ಡಿಜಿಟಲ್ ರೆಡಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಹಕರು ನಿಮ್ಮ ಬಳಿ ಬಂದಾಗ ಬ್ಯಾಗ್‌ಗಳನ್ನು ತರಬೇಕು ಎಂದು ತಿಳಿಸಬೇಕು ಎಂದರು.
ಫುಟ್‌ಪಾತ್ ಒತ್ತುವರಿ ಮಾಡದಿರಿಫುಟ್ಪಾತ್ ಮೇಲೆ ಯಾವುದೇ ಕಾರಣಕ್ಕೂ ಅಂಗಡಿಗಳನ್ನು ಇಡಬೇಡಿ ಈಗಾಗಲೇ ಪುರಸಭೆಗೆ ಸಾರ್ವಜನಿಕರಿಂದ ದೂರಗಳು ಹೆಚ್ಚಾಗಿ ಬರುತ್ತಿವೆ. ಫುಟ್ಪಾತ್ ಬಿಟ್ಟು ವ್ಯಾಪಾರ ಮಾಡಿಕೊಳ್ಳಿ ಈಗಾಗಲೇ ಎಲ್ಲರಿಗೂ ಎಚ್ಚರಿಕೆ ನೀಡಿದ್ದೇವೆ. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಕವರ್‌ಗಳಲ್ಲಿ ಹಾಕಿಕೊಡುವುದು, ಫುಟ್ಪಾತ್ ಒತ್ತುವರಿ ಮಾಡಿಕೊಳ್ಳಬೇಡಿ. ಇಲ್ಲವಾದ ಪಕ್ಷದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಇಂದು ಬ್ಯಾಂಕಿನವರು ಬಂದಿದ್ದಾರೆ, ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡವರು ಸರಿಯಾದ ಸಮಯಕ್ಕೆ ಕಟ್ಟಿ ಮತ್ತೆ ಸಾಲವನ್ನು ಪಡೆದುಕೊಳ್ಳಿ ಎಂದು ತಿಳಿಸಿದರು. ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಪ್ರಧಾನ೦ಮಂತ್ರಿ ಸ್ವನಿಧಿ ಯೋಜನೆಯಡಿ ಸಾಲಗಾರ ಸಾಲದ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿದರೆ, ನಂತರ ಅವರು ಹೆಚ್ಚುವರಿ ಪ್ರಯೋಜನ ಪಡೆಯುತ್ತಾರೆ. ಬಡ್ಡಿದರದಲ್ಲಿ ಶೇ.೭ ರಷ್ಟು ಸಬ್ಸಿಡಿ ದೊರೆಯುತ್ತದೆ. ಡಿಜಿಟಲ್ ವಹಿವಾಟಿನ ಮೂಲಕ ಮಾಡಿದ ಪಾವತಿಗಳ ಮೇಲೆ ವಾರ್ಷಿಕ ೧೨೦೦ ರೂ.ವರೆಗೆ ಕ್ಯಾಶ್‌ಬ್ಯಾಕ್ ಇರುತ್ತದೆ. ಮತ್ತೆ ಸಾಲ ತೆಗೆದುಕೊಳ್ಳುವವರಿಗೆ, ೧೦,೦೦೦ ದಿಂದ ೫೦,೦೦೦ದವರೆಗೆ ಸಾಲ ದೊರೆಯುತ್ತದೆ ಎಂದು ತಿಳಿಸಿದರು.ಬೀದಿ ವ್ಯಾಪಾರಿಗಳಿಗೆ ಅವಕಾಶ
ಎಲ್ಲಾ ಬೀದಿ ವ್ಯಾಪಾರಿಗಳು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಕೊರೊನಾ ವೈರಸ್ ಬೀದಿ ಬದಿ ವ್ಯಾಪಾರಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಹೇಳಬಹುದು. ಹೀಗಾಗಿ ಅವರನ್ನು ಬೆಂಬಲಿಸಲೆಂದೇ ಈ ಯೋಜನೆ ತರಲಾಗಿದೆ. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ೧೦,೦೦೦ ರೂ. ಸಾಲವನ್ನು ಪಡೆಯಬಹುದು. ಬೀದಿಬದಿ ವ್ಯಾಪಾರಿಗಳು, ಮೊಟ್ಟೆ ಮಾರಾಟಗಾರರು, ಹಣ್ಣು ಮಾರಾಟಗಾರರು, ತರಕಾರಿ ಮಾರಾಟಗಾರರು ಈ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.ಕೆನರಾ ಬ್ಯಾಂಕ್ ಮ್ಯಾನೇಜರ್ ಮಿಷನ್ ಮಾತನಾಡಿ, ಎಲ್ಲರೂ ಡಿಜಿಟಲ್ ವಹಿವಾಟು ಮಾಡುವ ಮುಖಾಂತರ ತಮ್ಮ ವ್ಯಾಪಾರವನ್ನು ನಡೆಸಿ ಬ್ಯಾಂಕಿನಿಂದ ಡಿಜಿಟಲ್ ಕ್ಯೂಆರ್ ಕೋಡ್ ನ ಸ್ಪೀಕರ್ ನೀಡಲಾಗುತ್ತದೆ. ನಿಮಗೆ ಯಾವುದೇ ಮಾಹಿತಿ ಬೇಕಾದಲ್ಲಿ ಬ್ಯಾಂಕ್ ಅನ್ನು ಸಂಪರ್ಕಿಸಬಹುದು ಬ್ಯಾಂಕಿನಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.ಪುರಸಭೆಯ ಉಪಾಧ್ಯಕ್ಷ ಚಂದ್ರವೇಣಿ ಮಂಜುನಾಥ್, ಪುರಸಭೆ ಮುಖ್ಯ ಅಧಿಕಾರಿ ಸತ್ಯನಾರಾಯಣ, ಪುರಸಭೆ ಅಧಿಕಾರಿಗಳಾದ ಶ್ರೀಕಾಂತ್, ಮದನ್, ಗೋವಿಂದ ಮೂರ್ತಿ ಇದ್ದರು.