ಸಾರಾಂಶ
ಹಳೇ ಹುಬ್ಬಳ್ಳಿ ಠಾಣೆಯ ವ್ಯಾಪ್ತಿಯ ಆನಂದನಗರದ ಕುಷ್ಠರೋಗಿಗಳ ಆಸ್ಪತ್ರೆ ಬಳಿ ಶೆಡ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 9 ಜನರನ್ನು ಬಂಧಿಸಲಾಗಿದೆ. ಇವರಿಂದ ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಹುಬ್ಬಳ್ಳಿ:
ಗಾಂಜಾ ಮಾರಾಟ ಮಾಡುತ್ತಿದ್ದ ಒಬ್ಬ ಅಂತಾರಾಜ್ಯ ಪೆಡ್ಲರ್ ಸೇರಿದಂತೆ ಬರೋಬ್ಬರಿ 17 ಜನರನ್ನು ಹುಬ್ಬಳ್ಳಿ-ಧಾರವಾಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ₹ 4.37 ಲಕ್ಷ ಮೌಲ್ಯದ ಗಾಂಜಾ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಮಹಾನಿಂಗ ನಂದಗಾಂವಿ, ಹಳೇ ಹುಬ್ಬಳ್ಳಿ ಹಾಗೂ ಉಪನಗರ ಠಾಣೆಗಳ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ ಎಂದು ಈ ವಿಷಯ ತಿಳಿಸಿದರು. ಬಂಧಿತ 17 ಜನರಲ್ಲಿ ಮೂವರು ಪೆಡ್ಲರ್‌ಗಳಿದ್ದಾರೆ. ಉಳಿದವರು ಗಾಂಜಾ ಖರೀದಿಸುವವರಾಗಿದ್ದಾರೆ. ಪೆಡ್ಲರ್ ಪೈಕಿ ಒಬ್ಬ ಅಂತಾರಾಜ್ಯ ಪೆಡ್ಲರ್ ಆಗಿದ್ದಾನೆ ಎಂದರು.ಹಳೇ ಹುಬ್ಬಳ್ಳಿ ಠಾಣೆಯ ವ್ಯಾಪ್ತಿಯ ಆನಂದನಗರದ ಕುಷ್ಠರೋಗಿಗಳ ಆಸ್ಪತ್ರೆ ಬಳಿ ಶೆಡ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 9 ಜನರನ್ನು ಬಂಧಿಸಲಾಗಿದೆ. ಮೀರಜ್‌ನ ಆಷ್ಪಾಕ್ ಮುಲ್ಲಾ, ಹಳೇ ಹುಬ್ಬಳ್ಳಿಯ ಶಿವಕುಮಾರ ತುಮಕೂರ, ಇಕ್ಸಾಲ್ ಅಹ್ಮದ್ ಮುದಗಲ್, ಆರೀಫ್ ಗಲಗಲಿ, ಅಭಿಷೇಕ ದೇವಮಾನೆ, ಅಮೃತ ಹವಳದ, ಮೊಹ್ಮದ್ ರೆಹಾನ್ ಗೋಕಾಕ, ಸಾಧಿಕ್ ಕಿತಾಬ್‌ವಾಲೆ, ಮೆಹಬೂಬಸಾಬ್ ಡೌಗಿ ಬಂಧಿತರು. ಇವರಿಂದ ₹1.25 ಲಕ್ಷ ಮೌಲ್ಯದ 1500 ಗ್ರಾಂ ಗಾಂಜಾ, ₹ 60 ಸಾವಿರ ಮೌಲ್ಯದ 6 ಮೊಬೈಲ್, ₹ 2 ಸಾವಿರ ನಗದು ಸೇರಿ ಒಟ್ಟು ₹ 1.87 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಉಪನಗರ ಠಾಣೆ ವ್ಯಾಪ್ತಿಯಲ್ಲಿ ಮೂವರು ಗಾಂಜಾ ಪೆಡ್ಲರ್ (ಮಾರಾಟ), ಮೂವರು ಖರೀದಿದಾರರು ಮತ್ತು ಇಬ್ಬರು ವ್ಯಸನಿಗಳನ್ನು ಬಂಧಿಸಲಾಗಿದೆ. ವೈಭವ ಪರಬ, ರಾಕೇಶ ನಾಯಕ, ಗಣಪತಸಾ ಅಥಣಿ, ಮಾರುತಿ ಸಬರದ, ಚಂದ್ರಪ್ಪ ಕಮ್ಮಾರ, ಗಣೇಶ ಯಾದವ, ರಮೇಶ ಮಾದರ, ನಿತಿನ್ ಮೇದಾರ ಬಂಧಿತರು. ಬಂಧಿತರಿಂದ 1630 ಗ್ರಾಂ ಗಾಂಜಾ.ಒಂದು ಬೈಕ್, 7 ಮೊಬೈಲ್ ಹಾಗೂ ₹ 2300 ನಗದು ಸೇರಿ ಒಟ್ಟು ₹2.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಈ ವೇಳೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸಿ.ಆರ್. ರವೀಶ, ಉತ್ತರ ವಿಭಾಗದ ಎಸಿಪಿ ಶಿವಪ್ರಕಾಶ ನಾಯಕ, ಕೇಶ್ವಾಪುರ ಠಾಣೆ ಪಿಐ ಕೆ.ಎಸ್. ಹಟ್ಟಿ, ಉಪನಗರ ಠಾಣೆ ಪಿಐ ಎಂ.ಎಸ್. ಹೂಗಾರ, ಹಳೇ ಹುಬ್ಬಳ್ಳಿ ಠಾಣೆ ಪಿಐ ಸುರೇಶ ಯಳ್ಳೂರ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.ಅಂತರ್ ಜಿಲ್ಲಾ ಕಳ್ಳನ ಬಂಧನ:
ಇಲ್ಲಿನ ಕೇಶ್ವಾಪುರ ನಾಗಶೆಟ್ಟಿಕೊಪ್ಪ ಶಾಂಡಿಲ್ಯಾಶ್ರಮ ಬಳಿಯ ಮನೆಯ ಕೀಲಿಮುರಿದು ಚಿನ್ನಾಭರಣ ಕಳ್ಳತನ ಮಾಡಿದ್ದ ನಟೋರಿಯಸ್ ಅಂತರ್ ಜಿಲ್ಲಾ ಕಳ್ಳನನ್ನು ಕೇಶ್ವಾಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆನಂದ ನಗರದ ಮಹಮ್ಮದ್‌ಅಲಿ ನಾಲಬಂದ ಬಂಧಿತ ಆರೋಪಿ. ಇವನಿಂದ ಕೇಶ್ವಾಪುರ, ಅಶೋಕನಗರ ಹಾಗೂ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ₹3.10 ಲಕ್ಷ ಮೌಲ್ಯದ 47 ಗ್ರಾಂ ಚಿನ್ನಾಭರಣ, ಒಂದು ಬೈಕ್ ವಶಪಡಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಇವನ ಮೇಲೆ ಹಳೇ ಹುಬ್ಬಳ್ಳಿಯಲ್ಲಿ 6, ಹೊಸಪೇಟೆಯಲ್ಲಿ 2, ಕೊಪ್ಪಳದಲ್ಲಿ 1, ಗದಗದಲ್ಲಿ 2 ಹೀಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಒಟ್ಟು 19 ಪ್ರಕರಣ ದಾಖಲಾಗಿವೆ ಎಂದರು.