ಸಾಲಿಗ್ರಾಮ: ವಾಣಿಶ್ರೀ ಅಶೋಕ್ ಐತಾಳರ ನಾಲ್ಕು ಕಥಾಸಂಕಲನ ಬಿಡುಗಡೆ

| Published : Aug 05 2025, 11:48 PM IST

ಸಾರಾಂಶ

ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಆವರಣದ ಕೂಟ ಬಂಧು ಭವನದಲ್ಲಿ ಬರಹಗಾರ್ತಿ ವಾಣಿಶ್ರೀ ಅಶೋಕ್ ಐತಾಳ ಅವರ ನಾಲ್ಕು ಕಥಾಸಂಕಲನಗಳ ಬಿಡುಗಡೆ ಕಾರ್ಯಕ್ರಮ ಭಾನುವಾರ ನಡೆಯಿತು.

ಕೋಟ: ಇಲ್ಲಿನ ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಆವರಣದ ಕೂಟ ಬಂಧು ಭವನದಲ್ಲಿ ಬರಹಗಾರ್ತಿ ವಾಣಿಶ್ರೀ ಅಶೋಕ್ ಐತಾಳ ಅವರ ನಾಲ್ಕು ಕಥಾಸಂಕಲನಗಳ ಬಿಡುಗಡೆ ಕಾರ್ಯಕ್ರಮ ಭಾನುವಾರ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಉಪೇಂದ್ರ ಸೋಮಯಾಜಿ ಮಾತನಾಡಿ, ಸುತ್ತಲಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಾಗೂ ಓದುಗನ ಮನಸ್ಸನ್ನು ಅರಳಿಸುವ ಸಾಹಿತ್ಯ ರಚನೆಯ ಪ್ರಸ್ತುತ ದಿನಗಳಲ್ಲಿಅಗತ್ಯತೆ ಇದೆ ಈ ದಿಸೆಯಲ್ಲಿ ವಾಣಿಶ್ರೀ ಇವರ ಸಾಹಿತಿಕ ಬದುಕು ಯಶಸ್ಸು ಕಾಣುವಂತಾಗಲಿ ಎಂದು ಹಾರೈಸಿದರು.ಈ ಕಾರ್ಯಕ್ರಮದಲ್ಲಿ ‘ನಿನಗಾಗಿ ಹೇಳುವೆ ಕಥೆ ನೂರನು’ ಎಂಬ ಕಥಾಸಂಕಲನವನ್ನು ಹೊನ್ನಾವರದ ಸಹಶಿಕ್ಷಕ ಗಣೇಶ ಹೆಗಡೆ, ‘ಗೆಜ್ಜೆ’ ಕಥಾಸಂಕಲನವನ್ನು ಸುವೃತ ಅಡಿಗ, ‘ಹೆಜ್ಜೆ’ ಕಥಾಸಂಕಲನವನ್ನು ಸುಮನ ಹೇರಳೆ ಹಾಗೂ ‘ಹನಿ ಇಬ್ಬನಿ’ ಎಂಬ ಕಥಾ ಸಂಕಲನವನ್ನು ಮಂಜುನಾಥ ಮರವಂತೆ ಪರಿಚಯಿಸಿದರು.

ಪುಸ್ತಕಗಳನ್ನು ಡಾ.ಟಿ.ಎಂ.ಎ.ಪೈ ಮಹಾವಿದ್ಯಾಲಯದ ಸಮನ್ವಯಧಿಕಾರಿ ಡಾ.ಮಹಾಬಲೇಶ್ವರ ರಾವ್, ಡಯಟ್ ಪ್ರಾಂಶುಪಾಲ ಡಾ.ಅಶೋಕ ಕಾಮತ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ಸೀತಾರಾಮ ಶೆಟ್ಟಿ ಬಿಡುಗಡೆಗೊಳಿಸಿದರು. ನಿವೃತ್ತ ಉಪನ್ಯಾಸಕಿ ಪಾರ್ವತಿ ಜಿ. ಐತಾಳ್ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಹಶಿಕ್ಷಕ ಸುರೇಶ ಮರಕಾಲ ಶುಭ ಹಾರೈಸಿದರು. ಅತಿಥಿ ಗಣ್ಯರು, ಗುರುಗಳನ್ನು ಗೌರವಿಸಲಾಯಿತು.ಕುಂದಾಪುರದ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಕೋಟ ಸಿಎ ಬ್ಯಾಂಕ್ ಪ್ರಭಂಧಕ ಅಶೋಕ ಐತಾಳ ಉಪಸ್ಥಿತರಿದ್ದರು.

ಸಹಶಿಕ್ಷಕಿ ಅರ್ಪಣಾ ಬಾಯಿ ನಿರ್ವಹಿಸಿದರು. ಕಥೆಗಾರ್ತಿ ವಾಣಿಶ್ರೀ ಅಶೋಕ ಐತಾಳ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅವನೀಶ ಐತಾಳ್ ಸ್ವಾಗತಿಸಿದರು. ರಾಜಶ್ರೀ ತಂತ್ರಿ ವಂದಿಸಿದರು.