ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಹಿಂದುಳಿದ ವರ್ಗದ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಸಮಾಜಗಳನ್ನು ಎಲ್ಲಾ ರೀತಿಯಲ್ಲೂ ಮೇಲೆತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಚಾಮರಾಜನಗರ ಕ್ಷೇತ್ರದ ಶಾಸಕ ಹಾಗೂ ಎಂಎಸ್‌ಐಎಲ್ ಅಧ್ಯಕ್ಷ ಪುಟ್ಟರಂಗಶೆಟ್ಟಿ ಹೇಳಿದರು.ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕುಗಳ ಶ್ರೀ ಭಗೀರಥ ಉಪ್ಪಾರರ ಸಂಘದ ವತಿಯಿಂದ ಪಟ್ಟಣದ ಶ್ರೀ ಉಪ್ಪಾರ ರಾಮ ಮಂದಿರದಲ್ಲಿ ನಡೆದ ಪ್ರತಿಭಾ ಪುರಸ್ಕಾರ, ಕ್ಯಾಲೆಂಡರ್ ಬಿಡುಗಡೆ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಉಪ್ಪಾರ ಸಮಾಜವನ್ನು ಪ್ರ.ವರ್ಗ- 1 ರಿಂದ ಪ.ಪಂಗಡಕ್ಕೆ ಸೇರಿಸಬೇಕೆಂಬ ಸಮಾಜದ ಬೇಡಿಕೆಯಿದ್ದು ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಕೇಂದ್ರಕ್ಕೆ ಕಳುಹಿಸಿಕೊಡುತ್ತಾರೆ. ಸಮಾಜದ ಹಲವು ಮುಖಂಡರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಮೈಸೂರು ನಗರದಲ್ಲಿ ಉಪ್ಪಾರ ಸಮಾಜದ ಸಮುದಾಯ ಭವನ ನಿರ್ಮಿಸಲು ಜಿಲ್ಲಾ ಸಂಘ ಮುಂದಾಗಬೇಕು. ಎಂಡಿಎಯಿಂದ ನಿವೇಶನ ಮಂಜೂರು ಮಾಡಿಸಲು ಮತ್ತು ಸರ್ಕಾರದಿಂದ ಅನುದಾನ ಕೊಡಿಸಲು ಈ ಭಾಗದ ಶಾಸಕರೊಂದಿಗೆ ನಾನೂ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಿ. ರವಿಶಂಕರ್ ಮಾತನಾಡಿ, ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿ ಸಮುದಾಯ ಭವನ ನಿರ್ಮಿಸಲು ನಿವೇಶನ ಕೊಡಿಸುವುದರ ಜತೆಗೆ ಕೆ.ಆರ್. ನಗರದ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ ಅಗತ್ಯವಿರುವ 25 ಲಕ್ಷ ರು.ಗಳನ್ನು ಶೀಘ್ರದಲ್ಲೇ ಮಂಜೂರು ಮಾಡಿಸುವುದಾಗಿ ಅವರು ಹೇಳಿದರು.ಮೈಸೂರು ಭಾಗದಲ್ಲಿ ಎಲ್ಲಾ ಶಾಸಕರು ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಸರ್ಕಾರ ರಚನೆಗೊಂಡ ವೇಳೆ ಒತ್ತಡ ಹೇರಿದ್ದರು. ಮುಂದಿನ ದಿನಗಳಲ್ಲಿ ಅವರಿಗೆ ಮಂತ್ರಿ ಭಾಗ್ಯ ದೊರೆಯಲಿದೆ ಎಂದ ಶಾಸಕರು, ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಸಮಾಜದ ಮುಖಂಡರು ಸ್ಪರ್ಧಿಸಲು ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದರು.
ಹಿಂದುಳಿದ ಸಮಾಜಗಳು ಅಭಿವೃದ್ಧಿ ಕಾಣಬೇಕಾದರೆ ರಾಜಕೀಯ ಅಧಿಕಾರದ ಜತೆಗೆ ಹೆಚ್ಚು ಮಂದಿ ಅಧಿಕಾರಿಗಳು ಇರಬೇಕು ಇದನ್ನು ಸಮುದಾಯದವರು ಅರಿತು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಮನವಿ ಮಾಡಿದರು.ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಮೂಡಾ ಮಾಜಿ ಅಧ್ಯಕ್ಷ ಎಚ್.ಎನ್. ವಿಜಯ್, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಯು. ವೆಂಕೊಬ, ಜಿಲ್ಲಾ ಸಂಘದ ಅಧ್ಯಕ್ಷ ಯೋಗೇಶ್ ಉಪ್ಪಾರ್, ತಾಲೂಕು ಅಧ್ಯಕ್ಷ ಕಾಟ್ನಾಳು ಮಹದೇವ್, ನೌಕರರ ಸಂಘದ ಅಧ್ಯಕ್ಷ ಎಚ್.ಟಿ. ಪಾಂಡು ಮಾತನಾಡಿದರು.
ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು. ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಡಾ. ದಿವ್ಯತಾ, ಪತ್ರಕರ್ತರಾದ ಕೆ.ಟಿ. ಮಂಜುನಾಥ್, ಎಸ್. ಯೋಗಾನಂದ್, ಪೊಲೀಸ್ ಇಲಾಖೆಯ ಗುರುಪ್ರಸಾದ್, ರವಿಕುಮಾರ್, ಗುತ್ತಿಗೆದಾರ ನಿಂಗರಾಜು, ತಿಪ್ಪೂರು ನಳಿನಿ ಅವರನ್ನು ಸನ್ಮಾನಿಸಲಾಯಿತು.ತಾಪಂ ಮಾಜಿ ಅಧ್ಯಕ್ಷ ಎಚ್.ಟಿ. ಮಂಜುನಾಥ್, ಸಹಕಾರ ಯೂನಿಯನ್ ನಿರ್ದೇಶಕ ಟಿ. ರಾಮೇಗೌಡ, ಸಂಘದ ಗೌರವಾಧ್ಯಕ್ಷ ಡಿ. ತಮ್ಮಯ್ಯ, ಉಪಾಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ಸಂದೀಪ್, ಪದಾಧಿಕಾರಿಗಳಾದ ಗೋವಿಂದೇಗೌಡ, ಎಂ. ಕುಮಾರ್, ಬಿ.ಕೆ. ನಾಗಣ್ಣ, ಕೆ.ಎಲ್. ಲೋಕೇಶ್, ಬಸವೇಗೌಡ, ರಂಗರಾಜು, ಯೋಗೇಶ್ ಕುಮಾರ್ ಮೊದಲಾದವರು ಇದ್ದರು.