ಸಾರಾಂಶ
ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಳದಲ್ಲಿ ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ ಪಾರಂಪಳ್ಳಿ ಪ್ರಾಯೋಜಕತ್ವದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ 50 ಪರ್ವದ 3ನೇ ಕಾರ್ಯಕ್ರಮ ಗೌರವ ಸಮ್ಮಾನ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಹಿಂದೆ ಯಕ್ಷಗಾನದಲ್ಲಿ ಹಿರಿಯರು ಮಾತ್ರ ಭಾಗವಹಿಸುತ್ತಿದ್ದರು. ಆದರೆ ಇಂದು ಮಕ್ಕಳಿಗೂ ಯಕ್ಷಗಾನದಲ್ಲಿ ಭಾಗವಹಿಸಲು ಸಾಧ್ಯವಾಗಿದೆ. ಯಕ್ಷಗಾನದ ಪಾತ್ರಗಳನ್ನು ಮಕ್ಕಳು ಕೂಡ ನಿರ್ವಹಿಸಬಹುದು ಎಂಬುದನ್ನು ತೋರಿಸಿಕೊಟ್ಟದ್ದು ಸಾಲಿಗ್ರಾಮ ಮಕ್ಕಳ ಮೇಳ. ಆದ್ದರಿಂದ ಈ ಸಂಸ್ಥೆಯ ಸಾಧನೆ ಯಕ್ಷಗಾನದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ಇಲ್ಲಿನ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಳದಲ್ಲಿ ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ ಪಾರಂಪಳ್ಳಿ ಪ್ರಾಯೋಜಕತ್ವದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ 50 ಪರ್ವದ 3ನೇ ಕಾರ್ಯಕ್ರಮ ಗೌರವ ಸಮ್ಮಾನ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಾಲಿಗ್ರಾಮ ಮಕ್ಕಳ ಮೇಳದ ಯಜಮಾನರಾದ ಶ್ರೀಧರ ಹಂದೆ ಅವರು ಬಡಗು ನಡುತಿಟ್ಟಿನ ಅನುಭವಿ ವಿದ್ವಾಂಸರು. ಇಂದು ಸಾಲಿಗ್ರಾಮ ಮಕ್ಕಳ ಮೇಳ ಹೊರದೇಶಗಳಲ್ಲಿಯೂ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ತರಬೇತಿ ಪಡೆದ ಮಕ್ಕಳು ದೇಶ ವಿದೇಶಗಳಲ್ಲಿ ನೆಲೆಸಿ ಅಲ್ಲಿಯೂ ಯಕ್ಷಗಾನದ ಪ್ರಸರಣವನ್ನು ಮಾಡುತ್ತಿದ್ದಾರೆ. ಹಾಗಾಗಿ ಈ ಐವತ್ತು ವರ್ಷಗಳಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ಸಾರ್ಥಕತೆಯನ್ನು ಮಾಡಿದೆ ಡಾ.ತಲ್ಲೂರು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಗುರು ಸರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ವಹಿಸಿದ್ದರು. ನಿವೃತ್ತ ಅಂಚೆ ಪಾಲಕ ಪಿ.ಸದಾಶಿವ ಮಧ್ಯಸ್ಥ, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಲಕ್ಷ್ಮಿನಾರಾಯಣ ಮಧ್ಯಸ್ಥ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್.ಶ್ರೀಧರ ಹಂದೆ ಕೋಟ, ಕೋಟ ಸಿ.ಎ. ಬ್ಯಾಂಕಿನ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ಕಾರ್ಕಡ ಗೆಳೆಯರ ಬಳಗ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಮೊದಲಾದ ಗಣ್ಯರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಮಕ್ಕಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಂ.ಎನ್.ಮಧ್ಯಸ್ಥ ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ಮೇಳದ ಕಲಾವಿದರಿಂದ ‘ವೀರ ವೃಷಸೇನ’ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.ಉಪನ್ಯಾಸಕ ರಾಘವೇಂದ್ರ ತುಂಗ ಕೋಟ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಎಚ್.ಸುಜಯೀಂದ್ರ ಹಂದೆ ಸ್ವಾಗತಿಸಿದರು. ಉಪಾಧ್ಯಕ್ಷ ಎಚ್. ಜನಾರ್ದನ ಹಂದೆ ವಂದಿಸಿದರು.