ಸಾರಾಂಶ
ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಡೆಸುತ್ತಿರುವ ಮುಷ್ಕರ್ ಆರನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯಾದ್ಯಂತ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ.
ಹುಬ್ಬಳ್ಳಿ:
ಸ್ಥಾನಿಕ ವೈದ್ಯರ ಶಿಷ್ಯವೇತನ ಹೆಚ್ಚಳ ಹಾಗೂ ಅವರ ಸುರಕ್ಷತೆಗೆ ಕಾನೂನು ಜಾರಿಗೊಳಿಸಲು ಒತ್ತಾಯಿಸಿ ಕರ್ನಾಟಕ ಸ್ಥಾನಿಕ ವೈದ್ಯರ ಸಂಘದ (ಕೆಆರ್‌ಡಿ) ನೇತೃತ್ವದಲ್ಲಿ ನಡೆಯುತ್ತಿರುವ ಕಿರಿಯ ವೈದ್ಯರ ಮುಷ್ಕರ ನಗರದಲ್ಲಿ ಆರನೇ ದಿನವೂ ಮುಂದುವರಿಯಿತು.ನಗರದ ಚೆನ್ನಮ್ಮ ವೃತ್ತ ಹಾಗೂ ಕೆಎಂಸಿ ಆಸ್ಪತ್ರೆಯ ಎದುರು ಶನಿವಾರ ಸಮಾವೇಶಗೊಂಡ ಕಿರಿಯ ವೈದ್ಯರು ಚಹಾ ಮಾರುವ ಮೂಲಕ ಪ್ರತಿಭಟನೆ ನಡೆಸಿದರು. ವೈದ್ಯ ವೃತ್ತಿ ಮಾಡುವುದಕ್ಕಿಂತ ಚಹಾ ಮಾರುವುದು ಸುರಕ್ಷಿತ ಹಾಗೂ ಲಾಭದಾಯಕ ಎಂಬ ಉದ್ದೇಶದ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಚೆನ್ನಮ್ಮ ವೃತ್ತದಲ್ಲಿ ಸಾರ್ವಜನಿಕರಿಗೆ ಚಹಾ ನೀಡಿ ಪ್ರತಿಭಟನೆಗೆ ಸಹಕರಿಸಿ ಎಂದು ಮನವಿ ಮಾಡಿದರು. ಕಿಮ್ಸ್ ಆಸ್ಪತ್ರೆ ಎದುರು ಸಹ ರೋಗಿಗಳಿಗೆ, ಅವರ ಸಂಬಂಧಿಕರಿಗೆ ಚಹಾ ನೀಡಿದರು.ಈ ವೇಳೆ ಕಿಮ್ಸ್ ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ. ಸುಹಾಸ್ ಎಸ್.ಟಿ. ಮಾತನಾಡಿ, ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಡೆಸುತ್ತಿರುವ ಮುಷ್ಕರ್ ಆರನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯಾದ್ಯಂತ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಇನ್ನು ಇಲ್ಲಿಯ ಸ್ಥಳೀಯ ಪ್ರತಿನಿಧಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಅಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ರಾಜ್ಯದಲ್ಲಿ ನಿರುದ್ಯೋಗಿಗಳಿಗೆ ₹ 3 ಸಾವಿರ ನೀಡುತ್ತಿದೆ. ಆದರೆ, ವೈದ್ಯ ವೃತ್ತಿ ಸಲ್ಲಿಸುವ ನಮಗೆ ಶಿಷ್ಯವೇತನ ಹೆಚ್ಚಳ ಮಾಡುತ್ತಿಲ್ಲ. ಇನ್ನು ವೈದ್ಯರಿಗೆ ಯಾವುದೇ ರೀತಿ ಸುರಕ್ಷತೆ ಇಲ್ಲ. ಈ ಬಗ್ಗೆ ಹಲವಾರು ಬಾರಿ ಹೋರಾಟ ಮಾಡಿದ್ದೇವೆ. ಈಚೆಗೆ ಪಶ್ಚಿಮ ಬಂಗಾಳದಲ್ಲಿ ವೈದ್ಯ ವಿದ್ಯಾರ್ಥಿ ಕೊಲೆ ಖಂಡನೀಯವಾಗಿದೆ. ವೈದ್ಯರಿಗೆ ಯಾವುದೇ ಸುರಕ್ಷತೆ ಇರದ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಆದ್ದರಿಂದ ನಮಗೆ ಸರ್ಕಾರ ಸುರಕ್ಷತೆ ನೀಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಆದರ್ಶ ಇ.ಎಚ್, ರಕ್ಷಿತ್ ಎಂ.ಸಿ, ಪ್ರದೀಪ, ದಿವ್ಯ ಸಿ.ಆರ್. ಸೇರಿದಂತೆ ಹಲವರಿದ್ದರು.ಹೊರರೋಗಿಗಳ ಪರದಾಟ:
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 6 ದಿನಗಳಿಂದ ಕಿಮ್ಸ್‌ನ ಕಿರಿಯ ವೈದ್ಯರು ನಡೆಸುತ್ತಿರುವ ಮುಷ್ಕರದಿಂದಾಗಿ ಕಿಮ್ಸ್‌ಗೆ ಚಿಕಿತ್ಸೆಗಾಗಿ ಬರುವ ಕೆಲ ರೋಗಿಗಳು ತೊಂದರೆ ಅನುಭವಿಸುವಂತಾಯಿತು. ಇನ್ನು ಒಳರೋಗಿಗಳ ವಿಭಾಗದಲ್ಲಿ ಹಿರಿಯ ವೈದ್ಯರು ಹಾಗೂ ಸಿಬ್ಬಂದಿ ಮೂಲಕ ದಾಖಲಾಗಿರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು. ಆದರೆ, ಹೊರರೋಗಿಗಳು ಕಳೆದ ನಾಲ್ಕೈದು ದಿನಗಳಿಂದ ಚಿಕಿತ್ಸೆ ಪಡೆದುಕೊಳ್ಳಲು ಪರದಾಡುವಂತಾಗಿದೆ. ಇನ್ನು ಶನಿವಾರ ಖಾಸಗಿ ಆಸ್ಪತ್ರೆಗಳು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ಕಿಮ್ಸ್‌ಗೂ ಹೊರರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಕಂಡು ಬಂದಿತು. ಕಿಮ್ಸ್‌ನ ಹೊರರೋಗಿಗಳ ವಿಭಾಗ ಬಿಕೋ ಎನ್ನುತ್ತಿತ್ತು.