ಸಮರಸ ಸಮಾಜ ಶರಣರ ಆಶಯ: ಸಂತೋಷ

| Published : Aug 04 2024, 01:19 AM IST

ಸಾರಾಂಶ

ಶರಣರ ವಚನಗಳು ೧೨ನೇ ಶತಮಾನಕ್ಕೆ ಮಾತ್ರ ಸಿಮೀತವಾಗದೆ ಎಂದೆಂದಿಗೂ ಸಾರ್ವಕಾಲಿಕವಾಗಿದ್ದು, ಸಮರಸದ ಸಮಾಜ ನಿರ್ಮಾಣ ಮಾಡುವುದೇ ಶರಣರ ಆಶಯವಾಗಿತ್ತು ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಶರಣರ ವಚನಗಳು ೧೨ನೇ ಶತಮಾನಕ್ಕೆ ಮಾತ್ರ ಸಿಮೀತವಾಗದೆ ಎಂದೆಂದಿಗೂ ಸಾರ್ವಕಾಲಿಕವಾಗಿದ್ದು, ಸಮರಸದ ಸಮಾಜ ನಿರ್ಮಾಣ ಮಾಡುವುದೇ ಶರಣರ ಆಶಯವಾಗಿತ್ತು ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ತಿಳಿಸಿದರು.ಶನಿವಾರ ನಗರದ ಶರಣಬಸವೇಶ್ವರ ಸಂಸ್ಥಾನದ ಬಸವರಾಜಪ್ಪಾ ಅಪ್ಪಾ ಸ್ಮಾರಕ ಭವನದಲ್ಲಿ ಪ್ರಜ್ಞಾ ಪ್ರವಾಹ, ಶರಣಬಸವೇಶ್ವರ ವಿಶ್ವವಿದ್ಯಾಲಯದ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಚನ ದರ್ಶನ ಪುಸ್ತಕ ಲೋಕಾರ್ಪಣೆಗೊಳಿಸಿ ತಮ್ಮ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದ ಅವರು, ಭಕ್ತಿ,ಕಾಯಕ ಮತ್ತು ದಾಸೋಹ ಅನುಭಾವದ ನೆಲೆಯಾಗಿದ್ದು,ಶರಣರ ವಚನಗಳು ೧೨ನೇ ಶತಮಾನದಿಂದಲೂ ಚಿರಂತನವಾಗಿವೆ. ಶರಣರು ಭಕ್ತಿಯಲ್ಲಿ ಸಮಾಜವನ್ನು ಬೆಳೆಸುವಂತಹ ಕಾರ್ಯ ಮಾಡುತ್ತಾ ಮಾಡುತ್ತಾ ಕಾಯಕದ ಜೊತೆಗೆ ಸಮಾಜವನ್ನು ಅನುಭವದ ಕಡೆಗೆ ಕೊಂಡ್ಯೋಯುವ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.ಸಮಾಜದಲ್ಲಿನ ವಚನಗಳಿಗೆ ಮತ್ತು ವಿಚಾರಗಳಿಗೆ ವಿರೋಧವಿದ್ದರು, ಚರ್ಚೆ ಮತ್ತು ಮಂಥನ ಯಾವತ್ತೂ ನಿಲ್ಲಬಾರದು.ನಿಂತರೆ ವಿಷ ಅಮೃತವಾಗಲು ಸಾಧ್ಯವಿಲ್ಲ. ೧೨ನೇ ಶತಮಾನದ ಕಾಲದಲ್ಲಿಯೂ ವಚನಗಳಿಗೆ ವಿರೋಧವಿತ್ತು. ಇಂದು ಸಹ ವಿರೋಧವಿದೆ ಮುಂದೆಯೂ ಸಹ ವಿರೋಧವಿರಲಿದೆ. ಒಳ್ಳೆಯ ವಿಚಾರಗಳು ಯಾವತ್ತೂ ಜೀವಂತವಿದ್ದು, ಕೆಟ್ಟದ್ದು ಮಾತ್ರ ನಶಿಸಿ ಹೋಗಲಿದೆ.ಅಂದಿನ ಕಾಲದ ಅನುಭವ ಮಂಟಪವನ್ನು ನಾವು ಯಾರು ಅದೊಂದು ಕಟ್ಟಡವೆಂದು ಭಾವಿಸಬಾರದು.ಬದಲಾಗಿ ಭಕ್ತಿ, ಕಾಯಕ ಮತ್ತು ದಾಸೋಹದ ಮೂಲಕ ಬೆಳೆಸುವ ಕೆಲಸವಾಗಬೇಕು ಎಂದು ಹೇಳಿದರು.ಭಕ್ತಿ ಕಾಯಕ ಮತ್ತು ದಾಸೋಹಕ್ಕೆ ಶರಣರು ನೀಡಿದ ಗೌರವ ಅಪಾರವಾಗಿತ್ತು. ಭಕ್ತಿಗೆ ಶರಣರು ಗೌರವ ನೀಡಿದರೇ, ಕಾಯಕದಲ್ಲಿ ಯಾವತ್ತೂ ಮೇಲೂ ಕೀಳು ಇರಲಿಲ್ಲ. ಕಾಯಕದ ಪರಿಕಲ್ಪನೆಯಲ್ಲಿ ಎಲ್ಲದಕ್ಕೂ ಕೊನೆಯೆಂಬುದು ಇರಲಿಲ್ಲ. ಪ್ರಭು ಶ್ರೀರಾಮನು ಸಹ ಸಮಾಜ ಹಾಕಿದ ಗಡಿಯನ್ನು ಯಾವತ್ತೂ ದಾಟಲಿಲ್ಲ.ಅದರಂತೆ ಶರಣರು ಸಹ ಸಮಾಜದ ಯಾವುದೇ ಗಡಿಯನ್ನು ದಾಟದೇ ವಚನಗಳ ಮೂಲಕ ಸಮಾಜವನ್ನು ಕಟ್ಟಿ ಬೆಳೆಸುವ ಕೆಲಸ ಮಾಡಿದ್ದು, ಶರಣರ ಹಾಕಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯುವ ಅವಶ್ಯಕತೆ ಬಹಳಷ್ಟಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಕಲಬುರಗಿ ಶರಣಬಸವೇಶ್ವರರು ಸಹ ಬಸವಣ್ಣನವರ ಆಚಾರ ವಿಚಾರದ ಮೂಲಕ ದಾಸೋಹವನ್ನು ಪ್ರಾರಂಭ ಮಾಡಿ, ಇಂದಿಗೂ ಸಹ ದಾಸೋಹ ನಿರಂತರವಾಗಿ ನಡೆಯುತ್ತಿದೆ.ಅಣ್ಣ ಬಸವಣ್ಣನವರ ನಮ್ಮ ನಾಡಿನವರಾಗಿದ್ದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ ಎಂದರು.ಗದಗಿನ ಶ್ರೀ ಬ್ರಹ್ಮನಮಠದ ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು ಮಾತನಾಡಿ,ವಚನ ದರ್ಶನ ಇದೊಂದು ಅಪರೂಪದ ಪುಸ್ತಕ. ಬಸವಣ್ಣನವರ ವ್ಯಕ್ತಿತ್ವ ಹಾಗೂ ಅವರ ವಚನ ಎಂದೆಂದಿಗೂ ಸಾರ್ವಕಾಲಿಕ. ಬಸವಣ್ಣನವರ ವಚನಗಳಲ್ಲಿ ಮತ್ತು ಅವರ ಕೃತಿಗಳಲ್ಲಿ ಮಾತ್ರ ನಾವು ಅವರನ್ನು ಕಾಣಲು ಸಾಧ್ಯವಿದೆ ಹೊರತು,ಬೇರೊಂದರಲ್ಲಿ ಇಲ್ಲ ಎಂದು ಹಲವು ವಿಷಯಗಳನ್ನು ತಿಳಿಸಿದರು.ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಾಂತ ಕಾರ್ಯದರ್ಶಿ ಶಿವಶರಣ ಕೊಟ್ರಾಳ ಹಾಗೂ ಬಸವರಾಜ ಡೋಣುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಂಗಮೇಶ್ ಪಾಟೀಲ್, ಪ್ರಜ್ಞಾ ಪ್ರವಾಹದ ಸಂಯೋಜಕ ಸತ್ಯಜೀತ ಕಿತ್ತೂರ, ವಿಭಾಗ ಪ್ರಚಾರಕ ವಿಜಯ್ ಮಹಾಂತೇಶ, ದತ್ತಾತ್ರೇಯ ಪಾಟೀಲ ರೇವೂರ್, ಅಮರನಾಥ ಪಾಟೀಲ್, ಅರವಿಂದ ನವಲಿ, ಭರತ್ ಖಮಿತಕರ್, ಬಸವರಾಜ ಬೆಣ್ಣೂರ್, ಉಮೇಶ್ ಪಾಟೀಲ್, ಮಹಾದೇವ ಬೆಳಮಗಿ, ಸೂರ್ಯಕಾಂತ್ ಡೋಣಿ, ಮಹಾಂತೇಶ ಬಿರಾದಾರ, ನಾಗೇಂದ್ರ ಕಬಾಡೆ, ಮುಂಜುನಾಥ ಕಳಸಕರ್, ಬಸವರಾಜ ಮುನ್ನೋಳ್ಳಿ, ಸದಾನಂದ ಪೆರ್ಲ, ರಮೇಶ್ ತಿಪನೂರ್, ಹರ್ಷಾನಂದ ಗುತ್ತೇದಾರ್, ಶಿವಕಾಂತ ಮಹಾಜನ್,ಸಿದ್ದಾಜಿ ಪಾಟೀಲ್, ಮುರಳಿ ಪೂಜಾರ್, ಸುಶಾಂತ್ ದೇಶಮುಖ, ಸತೀಶ್ ಮಾವೂರ್, ಪ್ರಶಾಂತ್ ಗುಡ್ಡಾ, ಸಂತೋಷ್ ಹಾದಿಮನಿ, ಶ್ರೀನಿವಾಸ ದೇಸಾಯಿ, ರಾಮು ರೆಡ್ಡಿ ಉಪಸ್ಥಿತರಿದ್ದರು.ನಮ್ಮ ದೇಶದಲ್ಲಿ ಎಲ್ಲ ಸಾಧಕರ ವಿಚಾರಗಳನ್ನು ಸಿಲುಕಿಸುವ ಕಾರ್ಯ ನಡೆದಿದ್ದು, ಸಿಲುಕಿಸುವವರು ಎಲ್ಲಾ ಕಾಲದಲ್ಲೂ ಇದ್ದಾರೆ. ರಾಮಾಯಣದಲ್ಲಿ ಶೂರ್ಪನಖಿ ಇದ್ದರೆ, ಮಹಾ ಭಾರತದಲ್ಲಿ ಶಕೂನಿಯೂ ಇದ್ದನು. ಎಷ್ಟೆ ವಿರೋಧವಿದ್ದರು, ಇಂತಹ ಪುಸ್ತಕಗಳು ಕಾಲಕಾಲಕ್ಕೆ ಹೊರಗಡೆ ಬರುತ್ತಲೆ ಇವೆ. ಹೀಗಾಗಿ ಶರಣರ ವಚನಗಳು ಎಂದೆಂದಿಗೂ ಸಾರ್ವಕಾಲಿಕ.

ಬಿ.ಎಲ್.ಸಂತೋಷ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಾಜಪಾ.