ಸಾರಾಂಶ
ರಾಷ್ಟ್ರೀಯ ಅಂಧ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಗೆ ಸಚಿವ ಲಾಡ್ ಚಾಲನೆ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಅಂಧರು ಒಳದೃಷ್ಟಿಯನ್ನು ಒಳಗೊಂಡವರು. ಅವರಲ್ಲಿ ಅಡಕವಾಗಿರುವ ಪ್ರತಿಭೆ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಉನ್ನತ ಹುದ್ದೆಗಳನ್ನು ನೀಡುವ ಮೂಲಕ ಸಮರ್ಥನಂ ಸಂಸ್ಥೆ ಅವರ ಬದುಕಿಗೆ ದೃಷ್ಟಿ ನೀಡುವ ಕಾರ್ಯ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.ಭಾನುವಾರ ಸಂಜೆ ಇಲ್ಲಿನ ಇಂದಿರಾ ಗಾಜಿನಮನೆ ಆವರಣದಲ್ಲಿ ಇಂಡಸ್‌ಇಂಡ್ ಬ್ಯಾಂಕ್ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆ ಆಶ್ರಯದಲ್ಲಿ ರಾಷ್ಟ್ರೀಯ ಅಂಧ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿ 4ನೇ ಆವೃತ್ತಿಗೆ ಚಾಲನೆ ನೀಡಿ ಮಾತನಾಡಿದರು.ಅಂಧರಿಗೆ ತಾವು ಕಂಡ ಗುರಿ ಸಾಧಿಸಲು ಉತ್ತಮ ಯೋಚನೆ, ಬದ್ಧತೆ ಇರುತ್ತದೆ. ಇಂದು ಹೆಚ್ಚುತ್ತಿರುವ ದ್ವೇಷದ ವಾತಾವರಣದಲ್ಲಿ ವಿಶ್ವಾಸ, ಬದ್ಧತೆ ಇಲ್ಲದ ಕಾಲದಲ್ಲಿ ಅಂಧರಿಗೆ ಮಾನವೀಯ ಮೌಲ್ಯಗಳು ಹೆಚ್ಚಾಗಿರುತ್ತವೆ. ಅಂಧರ ಜೀವನ ಕಷ್ಟ. ಅದರಲ್ಲೂ ಅಂಧರಿಗೆ ಭವಿಷ್ಯ ಕಟ್ಟಿಕೊಡಲು ಸಮರ್ಥನಂ ಸಂಸ್ಥೆ ಕಟಿಬದ್ಧವಾಗಿ ನಿಂತಿದೆ. ನನಗೆ ಸಮರ್ಥನಂ ಸಂಸ್ಥೆ ಕಾರ್ಯಕರ್ತನನ್ನಾಗಿ ಮಾಡಿದರೆ ಸಂಸ್ಥೆಗೆ ಬೇಕಾದ ನೆರವನ್ನು ಸರ್ಕಾರದಿಂದ ಕಲ್ಪಿಸಿಕೊಡುತ್ತೇನೆ. ಮುಂದಿನ ಬಜೆಟ್‌ನಲ್ಲಿ ಸಂಸ್ಥೆ ಬೆಳವಣಿಗೆಗೆ ಬೇಕಾದ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.
ಕ್ರೀಡೆಗಳು ಆರೋಗ್ಯಯುತ ಸಮಾಜ ನಿರ್ಮಾಣ ಮಾಡುತ್ತವೆ. ಸೋಮವಾರದಿಂದ ನಡೆಯುವ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವದಿಂದ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಸಮರ್ಥನಂ ಸಂಸ್ಥೆಗೆ ನಾನು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಹಲವು ರೀತಿ ನೆರವು ನೀಡಿದ್ದೇನೆ. ಅಂಧರ ಬಾಳಿಗೆ ಹೊಸ ಬೆಳಕನ್ನು ನೀಡುವ ಕಾರ್ಯವನ್ನು ಸಮರ್ಥನಂ ಸಂಸ್ಥೆ ಮಾಡುತ್ತಿದೆ. ಕಣ್ಣುಗಳಿದ್ದವರೇ ಇಂದು ಜೀವನದಲ್ಲಿ ಆತ್ಮವಿಶ್ವಾಸ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಸಮರ್ಥನಂ ಸಂಸ್ಥೆ ಕಣ್ಣು ಇಲ್ಲದವರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯವನ್ನು ಸಮರ್ಥವಾಗಿ ಮಾಡುತ್ತಿದೆ. ಕ್ರಿಕೆಟ್‌ಗೆ ಇಂದು ಜಗತ್ತಿನಾದ್ಯಂತ ಮಹತ್ವವಿದೆ. ಕೋಟ್ಯಂತರ ಜನರು ಈ ಕ್ರೀಡೆಯನ್ನು ಪ್ರೀತಿಸುತ್ತಾರೆ. ಮೊಬೈಲ್‌ಗಳ ಹಾವಳಿಯಿಂದಾಗಿ ಇಂದು ಯುವ ಜನತೆ ಕ್ರೀಡೆಗಳಿಂದ ವಿಮುಖರಾಗುತ್ತಿದ್ದಾರೆ. ಮೈದಾನಗಳಲ್ಲಿ ದೈಹಿಕ ಶ್ರಮ ಕಡಿಮೆಯಾಗಿದೆ. ಇಂತಹ ಸನ್ನಿವೇಶದಲ್ಲಿ ಅಂಧ ಮಹಿಳೆಯರು ವಿಶ್ವಾಸದಿಂದ ಶಬ್ದವನ್ನು ಅರಿತು ಕ್ರಿಕೆಟ್ ಆಡುವುದು ಶ್ರೇಷ್ಠವಾದುದು. ಸಂಸ್ಥೆಯವರು ಕ್ರಿಕೆಟ್‌ನಂತೆ ದೇಸಿ ಕ್ರೀಡೆಗಳಿಗೆ ಮಹತ್ವ ನೀಡಬೇಕು ಎಂದರು.
ಕಿಮ್ಸ್ ನಿರ್ದೇಶಕ ಎಸ್.ಎಫ್. ಕಮ್ಮಾರ, ಅಂಧರ ಕ್ರಿಕೆಟ್ ಅಸೋಶಿಯೇಶನ್ ಅಧ್ಯಕ್ಷ ಬೂಸೇಗೌಡ ಮಾತನಾಡಿದರು. ಈ ಸಂರ್ಭದಲ್ಲಿ ಟೂರ್ನಿಯ ಟ್ರೋಫಿಗಳನ್ನು ಅನಾವರಣಗೊಳಿಸಲಾಯಿತು. ಸಮರ್ಥನಂ ಸಂಸ್ಥೆ ಅಧ್ಯಕ್ಷ ಡಾ. ಮಹಾಂತೇಶ ಕಿವಡಸಣ್ಣವರ, ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಶಂಕರ ಕೋಳಿವಾಡ, ವಸಂತಿ ಸವಣೂರ, ಉದಯಕುಮಾರ್, ಶಿವಾನಂದ ಗುಂಜಾಳ ಸೇರಿದಂತೆ ಹಲವರಿದ್ದರು.