ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಉಡುತೊರೆಹಳ್ಳ ಡ್ಯಾಂ ಹಿನ್ನೀರಿನ ಬಳಿ ಸೆ.1ರ ರಾತ್ರಿ ಕಡವೆ ಬೇಟೆ ಪ್ರಕರಣ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಉಡುತೊರೆಹಳ್ಳ ಡ್ಯಾಂ ಹಿನ್ನೀರಿನ ಬಳಿ ಸೆ.1ರ ರಾತ್ರಿ ಕಡವೆ ಬೇಟೆ ಪ್ರಕರಣ ಬೆಳಕಿಗೆ ಬಂದಿದೆ.

ನಾಡ ಬಂದೂಕಿನಿಂದ ಕಡವೆಯನ್ನು ಕೊಂದು ಮೂರು ಭಾಗಗಳಾಗಿ ಕತ್ತರಿಸಿ ಚೀಲದಲ್ಲಿ ಸಾಗಿಸುತ್ತಿದ್ದ ನಾಲ್ವರು ಕಳ್ಳಬೇಟೆಗಾರರು ಅರಣ್ಯ ಸಿಬ್ಬಂದಿಯನ್ನು ಕಂಡು ಸ್ಥಳದಲ್ಲೇ ಮಾಂಸದ ಚೀಲ ಹಾಗೂ ಪರಿಕರಗಳನ್ನು ಬಿಸಾಡಿ ಪರಾರಿಯಾಗಿದ್ದಾರೆ ಎಂದು ಅರಣ್ಯ ಇಲಾಖೆ ಗುರುವಾರ ತಿಳಿಸಿದೆ.

ಅರಣ್ಯ ಸಿಬ್ಬಂದಿ ರಾತ್ರಿ ಗಸ್ತು ನಡೆಸುತ್ತಿದ್ದಾಗ ತಲೆಯ ಮೇಲೆ ಚೀಲ ಹೊತ್ತು ನಾಡ ಬಂದೂಕು ಹಿಡಿದು ಬರುತ್ತಿದ್ದ ಅನುಮಾನಾಸ್ಪದ ವ್ಯಕ್ತಿಗಳನ್ನು ಗಮನಿಸಿದ್ದಾರೆ. ಸಿಬ್ಬಂದಿಯನ್ನು ಕಂಡ ತಕ್ಷಣ ಆರೋಪಿಗಳು ಚೀಲಗಳನ್ನು ಎಸೆದು ಕತ್ತಲಿನಲ್ಲಿ ಕಾಡಿನೊಳಗೆ ಓಡಿಹೋಗಿದ್ದಾರೆ.

ಚೀಲ ಪರಿಶೀಲಿಸಿದಾಗ ಕಡವೆಯ ಮಾಂಸ ಮೂರು ಭಾಗಗಳಾಗಿ ಕತ್ತರಿಸಿರುವುದು ಪತ್ತೆಯಾಗಿದೆ. ಸ್ಥಳದಿಂದ ನಾಡ ಬಂದೂಕಿನ ಖಾಲಿ ಕಾಟ್ರಿಡ್ಜ್ ಸಹ ವಶಕ್ಕೆ ಪಡೆಯಲಾಗಿದೆ.

ಈ ಸಂಬಂಧ ಹನೂರು ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಶ್ವಾನದಳ ಹಾಗೂ ವಿಶೇಷ ತಂಡ ರಚಿಸಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಎಂ.ಎಂ.ಹಿಲ್ಸ್ ವನ್ಯಧಾಮದ ಅಧಿಕಾರಿಗಳು ತಿಳಿಸಿದ್ದಾರೆ.

ಆ.15 ರಂದು ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಹಾಗೂ ಬೇಟೆಗಾರರ ನಡುವೆ ನಡೆದ ಗುಂಡಿನ ಚಕಮುಕಿಯಲ್ಲಿ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಲಿ ಪಡೆದಿರುವ ಪ್ರಕರಣ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿರುವ ಹೊತ್ತಲ್ಲೇ ಮತ್ತೊಂದೆಡೆ ಬೇಟೆಗಾರರು ಕಾಡುಪ್ರಾಣಿಗಳನ್ನು ಹತ್ಯೆ ಮಾಡಿ ಸಾಗಾಟ ಮಾಡುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಗಸ್ತಿನಲ್ಲಿದ್ದಾಗ ನಾಲ್ವರು ಬೇಟೆಗಾರರು ಅರಣ್ಯ ಪ್ರದೇಶದಲ್ಲಿ ಪತ್ತೆ ಆಗಿರುವುದು ಬೇಟೆಗಾರರ ಹಾವಳಿ ಹೆಚ್ಚಾಗಿದೆ.

ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ

ಕಾವೇರಿ ವನ್ಯಧಾಮದಲ್ಲಿ ನಡೆದ ಶೂಟ್ ಔಟ್ ಪ್ರಕರಣದಿಂದ ಕಳ್ಳ ಬೇಟೆ ತಡೆ ಶಿಬಿರಗಳು ಹಾಗೂ ಅರಣ್ಯದಂಚಿನ ಗ್ರಾಮಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮತ್ತು ತನಿಖಾಧಿಕಾರಿಗಳು ತನಿಖೆ ನಡೆಸುತ್ತಿರುವ ಹೊತ್ತಲ್ಲೇ ಮತ್ತೊಂದೆಡೆ ಕಡವೆಯನ್ನು ಕೊಂದು ಬೇಟೆಗಾರರು ರಾತ್ರಿ ವೇಳೆ ಸಾಗಾಟ ಮಾಡುತ್ತಿದ್ದಾಗ ಪತ್ತೆ ಆಗಿರುವುದು ಬೇಟೆಗಾರರು ಈ ಭಾಗದಲ್ಲಿ ಹೆಚ್ಚಾಗಿರುವುದು ಸ್ಪಷ್ಟವಾಗಿ ಅರಣ್ಯ ಅಧಿಕಾರಿಗಳಿಗೆ ತಿಳಿದುಬಂದಿದ್ದು ಈ ಬಗ್ಗೆ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಬೇಟೆಗಾರರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾಡು ಪ್ರಾಣಿಗಳ ರಕ್ಷಣೆಯ ಜತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ.