ಹೊಸಕೋಟೆ: ಘನತ್ಯಾಜ್ಯ, ತೇವ ಹಾಗೂ ಒಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಮೂಲಕ ಸಮೇತನಹಳ್ಳಿ ಗ್ರಾಮ ಪಂಚಾಯಿತಿ ಮಾದರಿ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತಾಲೂಕಿನ ಸಮೇತನಹಳ್ಳಿ ಗ್ರಾಪಂ ವ್ಯಾಪ್ತಿಯ ತಿರುಮಲಶೆಟ್ಟಿಹಳ್ಳಿಯಲ್ಲಿ ೩ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ತ್ಯಾಜ್ಯ ವಿಲೇವಾರಿ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ತ್ಯಾಜ್ಯ ವಿಲೇವಾರಿ ಘಟಕವನ್ನು ಉದ್ಯಾನವನದ ಮಾದರಿಯಲ್ಲಿ ನಿರ್ಮಿಸಿ ಪರಿಸರ ಸ್ನೇಹಿ ವಾತಾವರಣ ಕಲ್ಪಿಸಲಾಗಿದೆ. ಕಳೆದ ಎರಡುವರೆ ವರ್ಷಗಳಲ್ಲಿ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರ ನೇತೃತ್ವದಲ್ಲಿ ಸಮೇತನಹಳ್ಳಿ, ತಿರುಮಲಶೆಟ್ಟಿಹಳ್ಳಿ, ನಡವತ್ತಿ, ಕೊರಳೂರು, ಮಲ್ಲಸಂದ್ರ, ಸೇರಿದಂತೆ ಎಲ್ಲಾ ಗ್ರಾಮಗಳಲ್ಲಿ ಉತ್ತಮ ಆಡಳಿತ ಹಾಗೂ ಸ್ವಚ್ಛತಾ ಕಾರ್ಯಗಳು ನಡೆದಿವೆ. ಇತರ ಗ್ರಾಪಂಗೆ ಮಾದರಿಯಾಗಿದೆ. ನಡವತ್ತಿಯಲ್ಲಿ ಸ್ಲಂ ಬೋರ್ಡ್ ಅಭಿವೃದ್ಧಿ ಮಂಡಳಿಯಿಂದ 120 ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ಕಾಂತರಾಜು ಮಾತನಾಡಿ, ಶಾಸಕ ಶರತ್ ಬಚ್ಚೇಗೌಡರ ಮಾರ್ಗದರ್ಶನ ಸ್ಥಳೀಯ ಮುಖಂಡರ ಸಂಪೂರ್ಣ ಸಹಕಾರ ನೀಡಿದ ಪರಿಣಾಮ ಅಭಿವೃದ್ಧಿಗೆ ವೇಗ ಹೆಚ್ಚಿದೆ. ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಿದ್ದು ಮಾದರಿ ಗ್ರಾಪಂ ಆಗಿದೆ ಎಂದರು.

ಕಾಂಗ್ರೆಸ್ ಮುಖಂಡ ಬಿ.ಎಂ.ಪ್ರಕಾಶ್, ಸಮೇತನಹಳ್ಳಿ ಸೊಣ್ಣಪ್ಪ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣಮೂರ್ತಿ, ಬಿಎಂಆರ್‌ಡಿಎ ಸದಸ್ಯ ಎಚ್.ಎಂ.ಸುಬ್ಬರಾಜು, ಕೊರಳೂರು ಸುರೇಶ್‌ಗೌಡ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಮುತ್ಕೂರು ಮುನಿರಾಜು, ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚಿನ್ನಸ್ವಾಮಿ, ಬಮೂಲ್ ನಿರ್ದೇಶಕ ಕೆಎಂಎಂ ಮಂಜುನಾಥ್, ತಾಪಂ ಇಒ ಮುನಿಯಪ್ಪ, ಪಿಡಿಒ ಪ್ರಸಾದ್ ಇತರರಿದ್ದರು.

ಫೋಟೋ: 29 ಹೆಚ್‌ಎಸ್‌ಕೆ 1ಮತ್ತು 2


ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿಯಲ್ಲಿ ನಿರ್ಮಾಣ ಮಾಡಲಾದ ಕಸ ವಿಲೇವಾರಿ ಘಟಕವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.