ಸಮ್ಮಸಗಿ ಏತ ನೀರಾವರಿ ಯೋಜನೆ ಸಣ್ಣ ನೀರಾವರಿ ಇಲಾಖೆಯ ೧೩ನೇ ನೀರಾವರಿ ಯೋಜನೆ ಪ್ರಾಯೋಗಿಕವಾಗಿ ನೀರು ಹರಿಸಲು ಆರಂಭಿಸಿದ್ದು, ೪೩ ಕೆರೆಗಳಿಗೆ ನೀರು ತುಂಬಲಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಸಮ್ಮಸಗಿ ಏತ ನೀರಾವರಿ ಯೋಜನೆ ಸಣ್ಣ ನೀರಾವರಿ ಇಲಾಖೆಯ ೧೩ನೇ ನೀರಾವರಿ ಯೋಜನೆ ಪ್ರಾಯೋಗಿಕವಾಗಿ ನೀರು ಹರಿಸಲು ಆರಂಭಿಸಿದ್ದು, ೪೩ ಕೆರೆಗಳಿಗೆ ನೀರು ತುಂಬಲಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ತಾಲೂಕಿನಲ್ಲಿ ಈಗಾಗಲೇ ವರದಾ ನದಿಗೆ ಸಣ್ಣ ನೀರಾವರಿ ಇಲಾಖೆಯಿಂದ ಶೇಷಗಿರಿ, ಕೂಸನೂರು, ಮಕರವಳ್ಳಿ ಹಂತ-೧ ಹಾಗೂ ೨, ವಾಸನ, ಬ್ಯಾತನಾಳ, ಲಕ್ಷ್ಮೀಪುರ, ಚಿಕ್ಕಹುಲ್ಲಾಳ, ಕನ್ನೇಶ್ವರ, ಮೋತಿತಲಾಬ, ಗಲಗಿನಕಟ್ಟಿ, ಕಮಲಾಪುರ ಏತ ನೀರಾವರಿ ಯೋಜನೆಗಳಿವೆ. ಈಗ ಹೊಸದಾಗಿ ೪೩ ಕೆರೆಗಳಿಗೆ ನೀರು ಹರಿಸುವ ಸಮ್ಮಸಗಿ ಏತ ನೀರಾವರಿ ಯೋಜನೆ ಪ್ರಾಯೋಗಿಕ ಕಾರ್ಯಾರಂಭ ಮಾಡಿದೆ.

₹೧೦೨ ಕೋಟಿ ವೆಚ್ಚದಲ್ಲಿ ೨೦೨೩ರಲ್ಲಿ ಆರಂಭವಾದ ಕಾಮಗಾರಿಗೆ ೨೦೨೬ ಮಾರ್ಚ್ ತಿಂಗಳ ವರೆಗೆ ಕಾಲ ಮಿತಿ ಇತ್ತು. ಕಳೆದ ವರ್ಷದ ಮಳೆಗಾಲದ ಕೊನೆಯ ಹೊತ್ತಿನಲ್ಲಿಯೇ ಪರೀಕ್ಷಾರ್ಥವಾಗಿ ನೀರು ಹರಿಸಲು ಮುಂದಾಗಿತ್ತು. ಆದರೆ, ಈ ಹೊತ್ತಿಗಾಗಲೇ ನದಿಯಲ್ಲಿ ನೀರಿಲ್ಲದ ಕಾರಣ ನೀರು ಹರಿಸುವ ಪ್ರಕ್ರಿಯೆ ಸ್ಥಗಿತವಾಗಿತ್ತು. ಈಗ ಧರ್ಮಾ ನದಿಯಲ್ಲಿ ಉತ್ತಮ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತಿದೆ.

೮೪ ಕಿಮೀ ಉದ್ದದ ಪೈಪ್‌ಲೈನ್, ೧೨೦೦ ಎಚ್‌ಪಿಯ ಎರಡು ಮೋಟಾರುಗಳು, ಒಂದು ಸ್ಟ್ಯಾಂಡ್‌ಬಾಯ್ ಮೋಟಾರ್, ಪ್ರತ್ಯೇಕ ವಿದ್ಯುತ್ ವ್ಯವಸ್ಥೆ ಹೊಂದಿರುವ ಸಮ್ಮಸಗಿ ಏತ ನೀರಾವರಿ ಯೋಜನೆ ರೈತರ ಕನಸನ್ನು ನನಸಾಗಿಸಲಿದೆ.

ಬ್ಯಾರೇಜ್:ಹಾನಗಲ್ಲ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಧರ್ಮಾ ನದಿಗೆ ೧೯ ಬ್ರಿಜ್‌ ಕಂ ಬ್ಯಾರೇಜ್, ವರದಾ ನದಿಗೆ ೯ ಬ್ರಿಜ್‌ ಕಂ ಬ್ಯಾರೇಜ್‌ಗಳಿವೆ. ಅವುಗಳಿಗೆ ಮಳೆಗಾಲದ ಅಂತಿಮ ಹಂತದಲ್ಲಿ ಗೇಟ್ ಹಾಕಲಾಗುತ್ತದೆ. ಆದರೆ, ಈ ಬಾರಿ ಮಳೆಯ ಅನಿಶ್ಚಿತತೆ ಕಾರಣದಿಂದ ಬಹು ಬೇಗನೆ ಗೇಟ್ ಹಾಕುವ ಅನಿವಾರ್ಯತೆಯೂ ಇಲಾಖೆಗೆ ಇದೆ. ಆದರೆ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರವೇ ಈ ನಿರ್ಣಯ ಕೈಕೊಳ್ಳಬೇಕಾಗುತ್ತದೆ.

ನರೇಗಲ್ ಏತ ನೀರಾವರಿ: ಶಾಸಕ ಶ್ರೀನಿವಾಸ ಮಾನೆ ಅವರ ಕೃಷಿ ಕಾಳಜಿಯಿಂದಾಗಿ ಹಾನಗಲ್ಲ ತಾಲೂಕಿನಲ್ಲಿ ಈಗಾಗಲೇ ನರೇಗಲ್ಲ ಮತ್ತು ಕೂಸನೂರು ಏತ ನೀರಾವರಿ ಯೋಜನೆ ₹೨೨೦ ಕೋಟಿ ವೆಚ್ಚದಲ್ಲಿ ಟೆಂಡರ್ ಹಂತದಲ್ಲಿದೆ. ಇದು ೧೮೦ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿದೆ. ಹಾನಗಲ್ಲ ತಾಲೂಕಿನ ರೈತರ ಪಾಲಿಗೆ ಹೊಸ ಭರವಸೆ ಮೂಡಿಸುವ ವಿಶ್ವಾಸವಿದೆ. ಕೂಸನೂರು ಯೋಜನೆ ತಾಲೂಕಿನ ಗುಡ್ಡಗಾಡು ಪ್ರದೇಶವೆಂದೇ ಪರಿಗಣಿಸಿರುವ ತಾಲೂಕಿನ ಆಗ್ನೇಯ ಭಾಗದ ಗ್ರಾಮಗಳ ಕೃಷಿ ಭೂಮಿಗೆ ವಿಶೇಷ ಕಾಳಜಿಯ ಯೋಜನೆಯಾಗಲಿದೆ.

ಸಮ್ಮಸಗಿ ಏತ ನೀರಾವರಿ ಯೋಜನೆ ಬರಗಾಲದ ಸಂದರ್ಭದಲ್ಲಿ ರೈತರ ಕೃಷಿ ಭೂಮಿಗೆ ನೀರು ಹರಿಸುವಲ್ಲಿ ಯಶಸ್ವಿಯಾಗುತ್ತದೆ. ಕೊಳವೆ ಬಾವಿಗಳಿಗೆ ಅಂತರ್ಜಲ ಹೆಚ್ಚಿಸುತ್ತದೆ. ಕರೆ ಕಟ್ಟೆಗಳಿಗೆ ನೀರು ತುಂಬುವುದಲ್ಲದೆ, ಕುಡಿಯುವ ನೀರಿನ ಸಮಸ್ಯೆಯೂ ಪರಿಹಾರವಾಗಲಿದೆ. ಬೆಳೆ ಒಣಗುವ ಸಂದರ್ಭದಲ್ಲಿ ರೈತರ ಜೀವ ಉಳಿಸಿದೆ ಎಂದು ಸಮ್ಮಸಗಿಯ ಸುರೇಶ ದೇಶಪಾಂಡೆಸಮ್ಮಸಗಿ ಏತ ನೀರಾವರಿ ಯೋಜನೆ ಸಕಾಲಿಕವಾಗಿ ಪೂರ್ಣಗೊಂಡಿದ್ದು, ಈ ಮಳೆಗಾಲದಲ್ಲಿ ಕೆರೆಗಳಿಗೆ ಉತ್ತಮ ನೀರು ಹರಿಸಲು ಸಾಧ್ಯವಾಗುತ್ತದೆ. ಈಗ ಪ್ರಾಯೋಗಿಕ ಕಾರ್ಯಾರಂಭ ಮಾಡಿದ್ದು ೪೩ ಕೆರೆಗಳನ್ನು ಪೂರ್ಣವಾಗಿ ತುಂಬುತ್ತೇವೆ ಎಂದು ಸಣ್ಣ ನೀರಾವರಿ ಇಲಾಖೆಯ ಅಭಿಯಂತರ ಎಂ.ಎ. ಬಡಿಗೇರ ಹೇಳಿದರು.